ಮಂಗಳವಾರ, ಸೆಪ್ಟೆಂಬರ್ 28, 2021
20 °C
ವರ್ಷವಿಡೀ ವಿವಿಧ ಧಾರ್ಮಿಕ, ಅಧ್ಯಾತ್ಮಕ ಕಾರ್ಯಕ್ರಮ, ಸಾಧಕರ ಸನ್ಮಾನ

ಶರಣಬಸವೇಶ್ವರ ಸಂಸ್ಥಾನದಲ್ಲಿ ನಾಳೆಯಿಂದ ಶ್ರಾವಣ ಸಂಭ್ರಮ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಲ್ಲಿನ ಶರಣಬಸವೇಶ್ವರ ಸಂಸ್ಥಾನ ಹಾಗೂ ಅಖಿಲ ಭಾರತ ಶಿವಾನುಭವ ಮಂಟಪದ ಆಶ್ರಯದಲ್ಲಿ ಪ್ರಸಕ್ತ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮಗಳು ಆಗಸ್ಟ್ 8ರಿಂದ ಸೆಪ್ಟೆಂಬರ್‌ 15ರವರೆಗೆ ನಡೆಯಲಿವೆ. ಈ ಬಾರಿ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಶರಣ ಸಂಪ್ರದಾಯದ ಪುರಾಣ ಪ್ರವಚನ, ಉಪನ್ಯಾಸ, ಸಂಗೀತ ಹಾಗೂ ದಾಸೋಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ’ ಎಂದು ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹೇಳಿದರು.

‘ದಿನಗಳ ಈ ಸುದೀರ್ಘ ಅವಧಿಯಲ್ಲಿ ಹಲವು ವಿದ್ವಾಂಸರು, ಪ್ರಾಧ್ಯಾಪಕರು ಮೌಲಿಕ ಚಿಂತನೆಗಳನ್ನು ನೀಡಲಿದ್ದಾರೆ. ಗ್ರಂಥಗಳ ಲೋಕಾರ್ಪಣೆ, ಕೊರೊನಾ ಯೋಧರ ಸನ್ಮಾನ, ಸಾಧಕರ ಸನ್ಮಾನ, ಸಂಗೀತ ಸುಧೆ...ಹೀಗೆ ಪ್ರತಿ ದಿನ ನಡೆಯಲಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದೇ ಮೊದಲ ಬಾರಿಗೆ ಶ್ರಾವಣ ಕಾರ್ಯಕ್ರಮಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ನಡೆಯುತ್ತಿವೆ. ಶರಣಬಸವೇಶ್ವರ ಭಕ್ತರ ಅನುಕೂಲಕ್ಕಾಗಿ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾನಲ್ ಮತ್ತು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು’ ಎಂದರು.

‘ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಡಾ.ಶಿವರಾಜಶಾಸ್ತ್ರಿ ಅವರು ರಚಿಸಿದ ‘ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ಮಹಾಕಾವ್ಯ ಹಾಗೂ ಡಾ.ಎಸ್‌.ಎಂ. ಹಿರೇಮಠ ಅವರು ರಚಿಸಿದ ‘ಮಹಾದಾಸೋಹ ಪ್ರಜ್ಞಾನಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ’ ಮಹಾಗ್ರಂಥ ಕುರಿತು ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ. ಮಹಾದಾಸೋಹ ಪೀಠದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಪುಣ್ಯಸ್ಮರಣೋತ್ಸವ ಕೂಡ ಇದೇ ಸಂದರ್ಭದಲ್ಲಿ ಬರಲಿದೆ’ ಎಂದು ಶರಣಬಸವೇಶ್ವ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಡಾ.ದಾಕ್ಷಾಯಿಣಿ ಎಸ್‌. ಅಪ್ಪ ಅವರು ಹೇಳಿದರು.‌

‘ರಾಜ್ಯ ಸರ್ಕಾರವು ಸೂಚಿಸಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಮತ್ತು ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದೂ ಅವರು ಹೇಳಿದರು.

ಆಗಸ್ಟ್‌ 8ರಂದು ಸಂಜೆ 7ಕ್ಕೆ ನಡೆಯುವ ದೇವಸ್ಥಾನದ ಆವರಣದಲ್ಲಿ ನಡೆಯುವ ಸಮಾರಂಭವನ್ನು ಡಾ.ಶರಣಬಸವಪ್ಪ ಅಪ್ಪ ಅವರು ಉದ್ಘಾಟಿಸುವರು. ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ನಂತರ ಉಪನ್ಯಾಸ ಮಾಲೆಗಳು ಆರಂಭವಾಗಲಿವೆ. ಪ್ರತಿ ದಿನ ಸಂಜೆ 5.30ರಿಂದ ‘ವಚನಾಂಜಲಿ’ ಸಂಗೀತ ಕಾರ್ಯಕ್ರಮ, ಸಂಜೆ 6.30ರಿಂದ ಮಹಾಕಾವ್ಯ ಕುರಿತು ಪ್ರವಚನ ನಡೆಯಲಿದೆ ಎಂದು ಡಾ.ಶಿವರಾಜ ಶಾಸ್ತ್ರಿ ಹೇರೂರು ಹೇಳಿದರು.

ಚಿರಂಜೀವಿ ದೊಡ್ಡಪ್ಪ ಅಪ್ಪ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ‌ ಶಾಸ್ತ್ರಿ,  ಶರಣಬಸವೇಶ್ವರ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ ನಂದಗಂವ, ಟಿ.ವಿ. ಶಿವಾನಂದನ್‌ ಸೇರಿದಂತೆ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.