ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಂದಲೇ ತಂದೆಯ ಕೊಲೆಗೆ ಸುಪಾರಿ!

ಅಷ್ಟಗಾ ಬಳಿ ನಡೆದಿದ್ದ ನರೋಣಾ ವ್ಯಕ್ತಿ ಕೊಲೆ ಬೇಧಿಸಿದ ಪೊಲೀಸರು; ಐವರ ಬಂಧನ
Last Updated 28 ಮಾರ್ಚ್ 2021, 4:48 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿಗೆ ಸಮೀಪದ ಅಷ್ಟಗಾ ಗ್ರಾಮದ ಬಳಿ ಈಚೆಗೆ ನಡೆದಿದ್ದ ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಬಟ್ಟೆ ವ್ಯಾಪಾರಿಯಾಗಿದ್ದ ಓಂಕಾರ ಹನಶೆಟ್ಟಿ ಎಂಬುವವರ ಕೊಲೆ ಪ್ರಕರಣವನ್ನು ಗ್ರಾಮೀಣ ಠಾಣೆ ಪೊಲೀಸರು ಬೇಧಿಸಿದ್ದು, ಕೊಲೆಯಾದ ವ್ಯಕ್ತಿ ಇಬ್ಬರು ಪುತ್ರರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಓಂಕಾರ ಅವರ ಮಕ್ಕಳಾದ ಶರಣಬಸಪ್ಪ ಹನಶೆಟ್ಟಿ, ರವಿ ಹನಶೆಟ್ಟಿ, ಸ್ನೇಹಿತರಾದ ಜೈ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ತಾಜಸುಲ್ತಾನಪುರದ ಅಮರ ಚಂದ್ರಕಾಂತ ಹಿಂದೊಡ್ಡಿ, ಬಂಬೂಬಜಾರನ ಹರೀಶ್ ಶಿವಪುತ್ರಪ್ಪ ಒಂಟಿ, ಸುರೇಶ ಶರಣಪ್ಪ ಡೆಂಗಿ ಎಂಬುವವರೇ ಬಂಧಿತರು. ಇವರೆಲ್ಲರೂ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಂಕಾರ ಮಾ 22ರಂದು ಕೆಲಸದ ನಿಮಿತ್ತ ಕಲಬುರ್ಗಿಗೆ ಹೋಗಿ ಬರುವುದಾಗಿ ಬೈಕ್ ತೆಗೆದುಕೊಂಡು ಹೋಗಿದ್ದರು. ಇದನ್ನು ಅರಿತ ಅವರ ಇಬ್ಬರು ಮಕ್ಕಳು ಸ್ನೇಹಿತರ ಜತೆಗೂಡಿ ಮಸಲತ್ತು ಮಾಡಿ ಆಟೊದಲ್ಲಿ ಬೈಕ್ ಬೆನ್ನಟ್ಟಿ ಅಡ್ಡಗಟ್ಟಿ ನಿಲ್ಲಿಸಿ ಆಟೊದಲ್ಲಿ ಕರೆದುಕೊಂಡು ಅಷ್ಟಗಾ ಹೊರವಲಯದ ಹೊಲದ ಬಾಂದಾರಿನಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.

‘ಮೃತ ಓಂಕಾರ ಅವರಿಗೆ ಗುರುಬಾಯಿ ಮತ್ತು ಜಗದೇವಿ ಎಂಬ ಹೆಸರಿನ ಇಬ್ಬರು ಪತ್ನಿಯರಿದ್ದರು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. ಮೊದಲ ಪತ್ನಿ ಗುರುಬಾಯಿ ತೀರಿಕೊಂಡ ಬಳಿಕ ಎರಡನೇ ಮದುವೆ ಮಾಡಿಕೊಂಡಿದ್ದರು. ಈ ನಡುವೆ ತಂದೆ ವಿಪರೀತ ಕಿರಿಕಿರಿ ಮಾಡುತ್ತಿದ್ದರು. ಅಲ್ಲದೆ ಹಣ ವ್ಯಯಿಸುತ್ತಿದ್ದ, ಇರುವ ಹೊಲವನ್ನು ಬೇರೆಯವರಿಗೆ ಮಾರಿಬಿಟ್ಟರೆ ಎಂಬ ಆತಂಕದಿಂದ ಸ್ನೇಹಿತರ ಜತೆಗೂಡಿ ಕೊಲೆ ಸಂಚು ರೂಪಿಸಿದ್ದರು. ಅದರಂತೆ ಕೊಲೆ ಮಾಡಿದ್ದರು’.

‘ತಂದೆ ಬಾರದಿದ್ದಾಗ ಮನೆಯಲ್ಲಿ ಸಹೋದರಿಗೆ ವಿಚಾರಿಸಿದಂತೆ ಮಾಡಿ, ಬೈಕ್ ನಿಂತಿರುವುದು ಗೊತ್ತಾಗಿದೆ ಎಂಬಂತೆ ನಾಟಕವಾಡಿದ್ದರು. ಅಲ್ಲದೇ ತಂದೆಯ ಶವ ಊರಿಗೆ ಬಂದಾಗ ಇಬ್ಬರೂ ಬಹಳಷ್ಟು ಅತ್ತಿದ್ದರು. ಈ ಕೊಲೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಂಡಿದ್ದರು. ಆದರೆ, ಪೊಲೀಸರು ವಿಸ್ತೃತ ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಕಮಿಷನರ್ ಎನ್.ಸತೀಶಕುಮಾರ, ಡಿಸಿಪಿಗಳಾದ ಕಿಶೋರಬಾಬು (ಕಾನೂನು ಮತ್ತು ಸುವ್ಯವಸ್ಥೆ), ಶ್ರೀಕಾಂತ ಕಟ್ಟಿಮನಿ (ಅಪರಾಧ ಮತ್ತು ಸಂಚಾರ), ಎಸಿಪಿ ಜೆ.ಎಚ್.ಇನಾಮದಾರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಬಾಸು ಚವ್ಹಾಣ, ಪಿಎಸ್‍ಐ ಕವಿತಾ ಚವ್ಹಾಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT