ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಗೆ ರೋಹಿಣಿ 'ಕೃಪೆ': ಬಿತ್ತನೆಗೆ ಹೊಲ ಹಸನು ಮಾಡುತ್ತಿದ್ದಾರೆ ರೈತರು

ಜಿಲ್ಲೆಯಾದ್ಯಂತ ಉತ್ತಮವಾಗಿ ಸುರಿದ ರೋಹಿಣಿ ಮಳೆ
Last Updated 6 ಜೂನ್ 2020, 3:08 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ರೋಹಿಣಿ ಮಳೆಯು ಉತ್ತಮವಾಗಿ ಬೀಳುತ್ತಿರುವುದರಿಂದ ಮುಂಗಾರು ಹಂಗಾಮಿಗೆ ರೈತರು ತಮ್ಮ ಹೊಲಗಳನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದಾರೆ. ತೊಗರಿ, ಹತ್ತಿ, ಸೂರ್ಯಕಾಂತಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರು ಈಗಾಗಲೇ ಗಳೆ ಹೊಡೆದು ಹೊಲ ಹಸನು ಮಾಡಿದ್ದಾರೆ.

ಎರಡು–ಮೂರು ಉತ್ತಮ ಮಳೆಯಾಗಿ ನೆಲ ಹಸಿಯಾಗಬೇಕು. ಅಂದಾಗ ಮಾತ್ರ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಅದಕ್ಕಾಗಿ ಇನ್ನೂ ನಾಲ್ಕೈದು ದಿನ ಕಾಯಬೇಕಾಗಿದೆ. ಅಲ್ಲದೇ, ಕಾರಹುಣ್ಣಿಮೆಯೂ ಬಂದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕಾರಹುಣ್ಣಿಮೆ ನಂತರ ಹೊಲಗಳತ್ತ ಮುಖ ಮಾಡಲಿದ್ದಾರೆ.

ಎರಡು ಮೂರು ದಿನಗಳಿಂದ ಉತ್ತಮ ಮಳೆ ಬೀಳುತ್ತಿರುವುದರಿಂದ ಕಲಬುರ್ಗಿ ತಾಲ್ಲೂಕಿನ ಪಾಳಾ, ಕುಸನೂರ, ನಂದೂರ (ಕೆ), ಶ್ರೀನಿವಾಸ ಸರಡಗಿ, ಕೆರಿ ಭೋಸಗಾ, ಚಿತ್ತಾಪುರ ತಾಲ್ಲೂಕಿನ ಮಾಡಬೂಳ, ಗುಂಡಗುರ್ತಿ, ಹದನೂರು, ಇವಣಿ, ಸೇಡಂ ತಾಲ್ಲೂಕಿನ ಮಳಖೇಡ ಮತ್ತಿತರ ಭಾಗಗಳಲ್ಲಿ ಹೊಲಗಳಲ್ಲಿನ ಕಸವನ್ನು ತೆಗೆದು ರೆಂಟೆ, ಗಳೆ ಹೊಡೆಯವ ಮೂಲಕ ಭೂಮಿಯನ್ನು ಸಿದ್ಧಗೊಳಿಸುತ್ತಿರುವುದು ಕಂಡು ಬಂತು.

ಸೇಡಂ ಹಾಗೂ ಚಿಂಚೋಳಿ ಭಾಗದಲ್ಲಿ ಸೋಯಾ, ಹೆಸರು ಮತ್ತಿತರ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಹೆಚ್ಚು ಮಳೆ ಬೀಳುವ ಈ ತಾಲ್ಲೂಕುಗಳಲ್ಲಿ ವರ್ಷದಲ್ಲಿ ಎರಡು ಬೆಳೆ ತೆಗೆಯುವವರೂ ಇದ್ದಾರೆ. ಹೀಗಾಗಿ, ಚಿಂಚೋಳಿ ತಾಲ್ಲೂಕಿನ ಹಲವು ಜಮೀನುಗಳಲ್ಲಿ ಗುರುವಾರವೇ ಬಿತ್ತನೆ ಶುರು ಮಾಡಿದರು.

ಜೇವರ್ಗಿ, ಅಫಜಲಪುರ ಹಾಗೂ ಕಲಬುರ್ಗಿ ತಾಲ್ಲೂಕಿನಲ್ಲಿ ಜೂನ್‌ 15ರ ಬಳಿಕವೇ ಬಿತ್ತನೆ ಶುರುವಾಗಲಿದೆ. ಚಿಂಚೋಳಿ, ಕಾಳಗಿ ಭಾಗದಲ್ಲಿ ಹೆಚ್ಚು ಸೋಯಾ ಅವರೆಯನ್ನು ಬೆಳೆಯುತ್ತಾರೆ. ಹಾಗಾಗಿ, 6 ಸಾವಿರ ಕ್ವಿಂಟಲ್‌ ಸೋಯಾ ಅವರೆ ಬೀಜವು ನಿಗಮದ ಬಳಿ ದಾಸ್ತಾನಿದೆ.

7.5 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ:ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 7.5 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಮಾಡಲಾಗುತ್ತದೆ. ಹೀಗಾಗಿ, ರೈತರಿಗೆ ಬೀಜದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಿರುವ ಕೃಷಿ ಇಲಾಖೆ 32 ಕೃಷಿ ಸಂಪರ್ಕ ಕೇಂದ್ರಗಳಲ್ಲದೇ 120 ಬೀಜ ವಿತರಣಾ ಕೇಂದ್ರಗಳನ್ನು ಆರಂಭಿಸಲಿದೆ. ಕೊರೊನಾ ಪ್ರಯುಕ್ತ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾದ ಅಗತ್ಯ ಇರುವುದರಿಂದ ಪ್ರತಿ ಹೋಬಳಿಗೆ ನಾಲ್ಕರಿಂದ ಐದು ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಉತ್ತಮ ಮಳೆಯಾದರೆ 9 ಲಕ್ಷ ಹೆಕ್ಟೇರ್‌ವರೆಗೂ ಬಿತ್ತನೆಯಾಗಬಹುದು ಎಂದು ಇಲಾಖೆ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT