ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಟಕಲ್ ರೇವಣಸಿದ್ದೇಶ್ವರ ದೇಗುಲ| ಆರು ಜನರ ವರ್ಗ: ಇಬ್ಬರು ತಾತ್ಕಾಲಿಕ

ಗುಂಡಪ್ಪ ಕರೆಮನೋರ
Published 6 ಮಾರ್ಚ್ 2024, 5:12 IST
Last Updated 6 ಮಾರ್ಚ್ 2024, 5:12 IST
ಅಕ್ಷರ ಗಾತ್ರ

ಕಾಳಗಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ತಾಲ್ಲೂಕಿನ ರೇವಗ್ಗಿಯ (ರಟಕಲ್ ಗುಡ್ಡ) ರೇವಣಸಿದ್ದೇಶ್ವರ ದೇವಸ್ಥಾನದ ಆರು ಸಿಬ್ಬಂದಿಯನ್ನು ವರ್ಗಮಾಡಲಾಗಿದ್ದು ಇಲ್ಲಿ ಬಂದವರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಆದರೆ ‘ಉಪವಿಭಾಗಾಧಿಕಾರಿ ಕಚೇರಿಯಿಂದ ಬಂದಿದ್ದೇವೆ’ ಎಂದು ಹೇಳಿಕೊಂಡು ಇಬ್ಬರು ಕಂಪ್ಯೂಟರ್ ಆಪ್‌ರೇಟರ್‌ಗಳು ಕೆಲಸ ಮಾಡುತ್ತಿದ್ದಾರೆ. 

ಈ ಮೊದಲು ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಹನ ನಿಲುಗಡೆ ಕರ ವಸೂಲಿಗಾರ, ಕಂಪ್ಯೂಟರ್ ಆಪರೇಟರ್, ದಾಸೋಹ ನಿರ್ವಹಣೆ, ಬಾಂಡೆ ನಿರ್ವಹಣೆ, ನೀರು-ವಿದ್ಯುತ್ ನಿರ್ವಹಣೆಗಾರ ಸೇರಿ ಒಟ್ಟು 6 ಜನ ನೌಕರರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಮತ್ತು ಘತ್ತರಗಿಯ ಭಾಗ್ಯವಂತಿ ದೇವಸ್ಥಾನಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ ಎನ್ನಲಾಗಿದೆ.

ವರ್ಗವಾದ ಇಬ್ಬರು ಗಾಣಗಾಪುರದಲ್ಲಿ, ನಾಲ್ವರು ಘತ್ತರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಗಾಣಗಾಪುರ ಮತ್ತು ಘತ್ತರಗಿಯಿಂದ ತಲಾ ಇಬ್ಬರು ನೌಕರರನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಆದರೆ ತಿಂಗಳಾಗುತ್ತ ಬಂದರೂ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.

‘ಸೇಡಂ ಎಸಿ ಕಚೇರಿಯಿಂದ ಬಂದಿರುವುದಾಗಿ ಹೇಳಿ ಮಾ.2ರಿಂದ ಇಬ್ಬರು ಕಂಪ್ಯೂಟರ್ ಆಪರೇಟರ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರ ಬಳಿ ಲಿಖಿತ ಆದೇಶವಿಲ್ಲ. ಅವರ ಪೂರ್ಣ ವಿಳಾಸ ಕೇಳಿದಾಗ ಜಾಗ ಖಾಲಿ ಮಾಡಿ ಹೊರ ಹೋಗಿದ್ದಾರೆ’ ಎಂದು ಮುಖಂಡ ಶಿವರಾಜ ಪಾಟೀಲ ಗೊಣಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೇರೆ ಕಡೆಯ ಸಿಬ್ಬಂದಿ ಬಂದು ಹಾಜರಾಗುವವರೆಗೂ ಇಲ್ಲಿನ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದು ತಪ್ಪು. ಈಗ ಕಂಪ್ಯೂಟರ್ ಆಪರೇಟರ್ ಎಂದು ಹೇಳಿಕೊಳ್ಳುವ ಇಬ್ಬರು ಯಾವ ಆಧಾರದ ಮೇಲೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ? ಈ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳುವುದೇ ಆಗಿದ್ದರೆ, ಪತ್ರಿಕಾ ಪ್ರಕಟಣೆ ನೀಡಿ ತೆಗೆದುಕೊಂಡರೆ ಗುಡ್ಡದ ಸುತ್ತಮುತ್ತಲವೇ ಸಾಕಷ್ಟು ಕಂಪ್ಯೂಟರ್ ಬಲ್ಲವರು ಸಿಗುತ್ತಿರಲಿಲ್ಲವೇ? ಆಡಳಿತಾಧಿಕಾರಿಯ ಈ ರೀತಿಯ ನಿರ್ಲಕ್ಷ್ಯಕ್ಕೆ ಯಾರು ಹೊಣೆಗಾರರು’ ಎಂದು ಅವರು ಪ್ರಶ್ನಿಸಿದ್ದಾರೆ.

ಸೇಡಂ ಎಸಿ ಕಚೇರಿಯಿಂದಲೇ ಇಬ್ಬರು ಬಂದು ಕಂಪ್ಯೂಟರ್ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಸಿ ಅವರು ಮೌಖಿಕವಾಗಿ ತಮಗೆ ತಿಳಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯದರ್ಶಿ ಸದಾಶಿವ ವಗ್ಗೆ ಪ್ರತಿಕ್ರಿಯಿಸಿದರು.

‘ಸಿಬ್ಬಂದಿ ಕೊರತೆಯಿಂದ ತಾತ್ಕಾಲಿಕವಾಗಿ ಕಂಪ್ಯೂಟರ್ ಆಪರೇಟರ್ ತೆಗೆದುಕೊಳ್ಳಲಾಗಿದೆ ’ ಎಂದು ಸೇಡಂ ಎಸಿ, ದೇವಸ್ಥಾನದ ಆಡಳಿತಾಧಿಕಾರಿ ಆಶಪ್ಪ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT