ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಪ್ಪಂದಿರ ದಿನ: 'ನನಗೆ ಸಲ್ಯೂಟ್‌ ಮಾಡಲು ಕಾಯುತ್ತೇನೆ ಅಂತಿದ್ದರು ಅಪ್ಪ'

Last Updated 20 ಜೂನ್ 2021, 8:33 IST
ಅಕ್ಷರ ಗಾತ್ರ

‘ಯವ್ವಾ ನೀ ಐಎಎಸ್‌ ಆಫೀಸರ್‌ ಆಗಬೇಕು, ಸರ್ಕಾರಿ ಕಾರಿನ್ಯಾಗ ಬರೂದನ್ನ ನಾ ಕಣ್ತುಂಬ ನೋಡಬೇಕು. ಇಷ್ಟು ವರ್ಷ ಯಾರ್‍ಯಾರಿಗೋ ಸೆಲ್ಯೂಟ್‌ ಹೊಡದೇನಿ. ನನ್ನ ಮಗಳಿಗೆ ನಾನೇ ಒಮ್ಮೆ ಸಲ್ಯೂಟ್‌ ಹೊಡಿಬೇಕು. ಅದಕ್ಕಾಗಿ ಕಾಯ್ಲಾತೇನಿ...’

ಅಪ್ಪ ನಿಧನರಾಗುವ ಕೆಲವೇ ದಿನಗಳ ಹಿಂದೆ ಹೇಳಿದ ಮಾತಿದು. ಕಣ್ಣು– ಮುಚ್ಚಿ ತೆರೆದಾಗಲೆಲ್ಲ ಇದೇ ಮಾತು ನೆನಪಿಗೆ ಬರುತ್ತದೆ.ನನ್ನನ್ನುಯವ್ವಾ ಯವ್ವಾ... ಎಂದು ಕರೆಯುತ್ತಿದ್ದ ಅವರ ಮಾತಿನಲ್ಲಿ ಅಪ್ಪಟ ಅಕ್ಕರೆ ಇತ್ತು.

ಕಲಬುರ್ಗಿ ಜಿಲ್ಲಾ ಪಂಚಾಯಿತಿಯಲ್ಲಿ ಡಿ– ದರ್ಜೆ ನೌಕರರಾಗಿದ್ದ ಅಪ್ಪ ನಾಗಮೂರ್ತಿ ಪತ್ತಾರ; ಪಡೆಯುತ್ತಿದ್ದ ಸಂಬಳ ಅತ್ಯಲ್ಪ. ಮೂವರು ಹೆಣ್ಣುಮಕ್ಕಳು, ಒಬ್ಬ ಮಗ, ಅವ್ವ ಸೇರಿ ಐವರ ಕುಟುಂಬದ ಭಾರ ಹೊತ್ತಿದ್ದರು. ನಮಗೆ ಕಷ್ಟದ ಅನುಭವ ಆಗದಂತೆ ನೋಡಿಕೊಂಡರು. ಮೂವರು ಹೆಣ್ಣುಮಕ್ಕಳಿದ್ದಾರೆ ಬೇಗ ಮದುವೆ ಮಾಡಿ ಕಳಿಸಬೇಕು ಎಂದು ಗಡಿಬಿಡಿ ಮಾಡಲಿಲ್ಲ. ನಮ್ಮನ್ನು ಓದಿಸಿದರು.

ಎಂಜಿನಿಯರಿಂಗ್‌ ಓದುತ್ತೇನೆ ಎಂದಾಗ ಅಪ್ಪ ಸಾಲ ಮಾಡಿ ಪ್ರವೇಶ ಕೊಡಿಸಿದರು. 2020ರಲ್ಲಿ ಎಂಜಿನಿಯರಿಂಗ್‌ ಮುಗಿಸಿ ಒಂದು ವರ್ಷ ಮನೆಯಲ್ಲಿ ಖಾಲಿ ಕುಳಿತೆ; ಆಗಲೂ ಅಪ್ಪ ಬೇಸರಿಸಲಿಲ್ಲ. ‘ಚಿಂತೆ ಬೇಡ ಮಗಳೆ ನಾನಿದ್ದೇನಲ್ಲ’ ಎನ್ನುವ ಅವರ ಮಾತು ಶಕ್ತಿ ತುಂಬುತ್ತಿತ್ತು.

ನಾಲ್ಕು ತಿಂಗಳ ಹಿಂದೆ ಹೈದರಾಬಾದ್‌ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಸೇರಿದೆ. ಮೂರು ತಿಂಗಳು ತರಬೇತಿ ಪಡೆದ ನಂತರವೇ ಸಂಬಳ. ನಾಲ್ಕನೇ ತಿಂಗಳಿಂದ ನಾನು ಸಂಬಳ ಪಡೆಯಲು ಶುರು ಮಾಡಿದ್ದೆ. ಈ ಖುಷಿಯನ್ನು ಅಪ್ಪನೊಂದಿಗೆ ಹಂಚಿಕೊಳ್ಳಬೇಕಿತ್ತು. ಆದರೆ, ಅವರು ಕೇಳಿಸದಷ್ಟು ದೂರ ಹೋದರು. ಕೋವಿಡ್‌ನಿಂದ ಅಪ್ಪ ಸತ್ತರು. ನನಗೆ ಇಷ್ಟೆಲ್ಲ ಮಾಡಿದ ಅಪ್ಪನಿಗೆ ಖುಷಿಪಡಿಸಲು ಏನಾದರೂ ಉಡುಗೊರೆ ಕೊಡಿಸಬೇಕು ಎಂಬ ನನ್ನ ಪುಟ್ಟ ಕನಸು ಕನಸಾಗೇ ಉಳಿಯಿತು.

- ಕಾಳಿಕಾ ನಾಗಮೂರ್ತಿ ಪತ್ತಾರ, ಸಾಫ್ಟ್‌ವೇರ್‌ ಎಂಜಿನಿಯರ್‌, ಕಲಬುರ್ಗಿ

ನಿರೂಪಣೆ: ಸಂತೋಷ ಈ. ಚಿನಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT