ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ! ಏನಿದು ಬಿಸಿಲೂರಿನ ಥಂಡಿ...

ತಾಪಮಾನದಲ್ಲಿ ಕಂಡುಬಂದ ಇಳಿಕೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಳ
Last Updated 4 ಜನವರಿ 2020, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ಯಾವಾಗಲೂ ಬಿಸಿಲನ್ನೇ ಹಾಸಿ– ಹೊದ್ದ ಊರಿನ ಜನ ಈಗ ಚುಮುಚುಮು ಚಳಿಗೆ ಮೈಯೊಡ್ಡಿದ್ದಾರೆ. ನೌಕರರು, ವಿದ್ಯಾರ್ಥಿಗಳು, ರೈತರು, ಗೃಹಿಣಿಯರು ನಸುಕಿನಲ್ಲೇ ಎದ್ದು ಕೆಲಸಕ್ಕೆ ಹಾಜರಾಗುವವರು ಥರಗುಟ್ಟುತ್ತಿದ್ದಾರೆ. ಇಷ್ಟು ದಿನ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಸ್ವೇಟರ್, ಜರ್ಕಿನ್, ಮಫ್ಲರ್, ಉಲನ್‌ ಟೊಪ್ಪಿಗೆ, ಸ್ಕಾರ್ಪ್‌, ಕಿವಿ ಪಟ್ಟಿ, ಮಂಕಿಕ್ಯಾಪ್‌ ಮೈ ಕೊಡವಿಕೊಂಡು ಎದ್ದಿವೆ.

ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು, ರೈಲು– ಬಸ್‌ ಮೂಲಕ ಪ್ರಯಾಣಿಸುವವರು ದಪ್ಪನಾದ ಜರ್ಕಿನ್‌ಗಳಿಗೆ ಮೊರೆ ಹೋಗಿದ್ದಾರೆ. ದ್ವಿಚಕ್ರ ವಾಹನ ಸವಾರರು ಕೂಡ ಮುಖಗವಸು ಹಾಕಿಕೊಳ್ಳುವ ಮೂಲಕ ಶೀತಗಾಳಿ ದೇಹ ಹೊಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಡಿ. 31ರವರೆಗೂ ವಾಡಿಕೆಯಂತೆ ಕನಿಷ್ಠ ತಾಪಮಾನ 19 ಡಿಗ್ರಿ ದಾಖಲಾಗಿದೆ. ಆದರೆ, ವಾಯುಭಾರ ಕುಸಿತದಿಂದ ಜನವರಿ 1 ಹಾಗೂ 2ರಂದು ಕೆಲವೆಡೆ ತುಂತುರು ಮಳೆ ಸುರಿಯಿತು. ಅಂದಿನಿಂದ ತಾಪಮಾನ ದಿಢೀರ್‌ ಕುಸಿದಿದ್ದು ಗರಿಷ್ಠ 29 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ನಸುಕಿನಲ್ಲಿ ಸ್ವಚ್ಛತೆಗೆ ಬರುತ್ತಿದ್ದ ಪೌರ ಕಾರ್ಮಿಕರು ಈಗ ಬೆಂಕಿಯ ಮುಂದೆ ಕೈ ಕಾಯಿಸಿಕೊಳ್ಳುವುತ್ತ ಕುಳಿತಿರುತ್ತಾರೆ. ಪಬ್ಲಿಕ್‌ ಗಾರ್ಡನ್‌, ಐವಾನ್‌ ಇ ಶಾಹಿ ಅತಿಥಿಗ್ರಹ, ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಎಲ್ಲ ಕಡೆಯೂ ವಾಯು ವಿಹಾರಿಗಳ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ. ಬೆಳಿಗ್ಗೆ 7ರವರೆಗೂ ಚಾದರ್‌ನೊಳಗೆ ಕಾಲುತೂರಿಸಿ ಬೆಚ್ಚಗೆ ಮಲಗುವುದೇ ಒಂಥರದ ಹಿತ...

ಮಳೆ ಹೆಚ್ಚಾಗಿದ್ದೂ ಕಾರಣ: ಈ ವರ್ಷದ ಮುಂಗಾರು ಮಳೆ ಕೂಡ ಉತ್ತಮವಾಗಿತ್ತು. ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಭೀಮಾ ನದಿಗೆ ಪ್ರವಾಹ ಬಂದಿತ್ತು. ಅಣೆಕಟ್ಟೆ, ಕೆರೆಗಳೆಲ್ಲ ಜಲ ಪೂರ್ಣವಾಗಿವೆ. ಬೇಸಿಗೆಯಲ್ಲಿ ಗರಿಷ್ಠ ತಾಪಮಾನ ಸರಾಸರಿ 43 ಡಿಗ್ರಿಗಿಂತ ಹೆಚ್ಚಾಗಲಿಲ್ಲ. ಪ್ರತಿ ಬೇಸಿಗೆಯಲ್ಲೂ ಅದು 45 ರಿಂದ 46 ಡಿಗ್ರಿಯವರೆಗೂ ಏರುತ್ತಿತ್ತು.

ಇಂಥ ಪ್ರಾಕೃತಿಕ ಕಾರಣಗಳಿಂದಾಗಿಯೇ ಈ ಬಾರಿ ಚಳಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಅವಾಮಾನ ತಜ್ಞರು.

ಕಳೆದ ಬಾರಿ ದಾಖಲೆ: ಕಳೆದ ಬಾರಿ (2018)ರ ಡಿಸೆಂಬರ್‌ನಲ್ಲಿ ಅತ್ಯಂತ ಕಡಿಮೆ (13 ಡಿಗ್ರಿ) ತಾಪಮಾನ ದಾಖಲಾಗಿತ್ತು. ಎರಡು ದಶಕಗಳಲ್ಲೇ ಇದು ಅತ್ಯಂತ ಕನಿಷ್ಠ ತಾಪಮಾನವಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ತುಸು ನೆಮ್ಮದಿದಾಯಕ.

ಪಶ್ಚಿಮದ ದೇಶಗಳಲ್ಲಿ ಉಂಟಾದ ಮಾರುತಗಳ ಪರಿಣಾಮ ಹಿಮಾಲಯ ಹಾಗೂ ಅದರಂಚಿನ ರಾಜ್ಯಗಳಲ್ಲಿ ತೀವ್ರ ಶೀತಗಾಳಿ ಇದೆ. ನವದೆಹಲಿಯಲ್ಲಿ ತಾಪಮಾನ 5 ಡಿಗ್ರಿಗಿಂತ ಕುಸಿದಿದೆ. ಅದರ ಪರಿಣಾಮದಂತೆಯೇ ದಕ್ಷಿಣ ಭಾರತದ ರಾಜ್ಯಗಳಲ್ಲೂ ಚಳಿ ಅನುಭವಕ್ಕೆ ಬರುತ್ತದೆ. ಇದು ಇನ್ನೂ ಒಂದು ವಾರ ಮುಂದುವರಿಯಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT