ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷಗಳಲ್ಲಿ 4,061 ಮಂದಿ ಆತ್ಮಹತ್ಯೆ : ಕಲಬುರಗಿ, ಬೀದರ್‌ನಲ್ಲಿ ಅತ್ಯಧಿಕ

ಯಾದಗಿರಿ, ಕೊಪ್ಪಳದಲ್ಲಿ ಕಡಿಮೆ
Published 21 ಮಾರ್ಚ್ 2024, 5:59 IST
Last Updated 21 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ಕಲಬುರಗಿ: ಹೆತ್ತವರ ಬೈಗುಳ, ಪ್ರೀತಿಯ ವೈಫಲ್ಯ, ಅನಾರೋಗ್ಯ, ವೈಮನಸ್ಸು, ಖಿನ್ನತೆಯಂತಹ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 4,061 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024ರ ಜನವರಿ ಒಂದೇ ತಿಂಗಳಲ್ಲಿ 94 ಪ್ರಕರಣಗಳು ವರದಿಯಾಗಿವೆ. ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.

4,061 ಮಂದಿಯಲ್ಲಿ ಮಾನಸಿಕ ಅನಾರೋಗ್ಯ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳ ಕಾರಣದಿಂದಾಗಿಯೇ ಹೆಚ್ಚಿನವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಏಳು ಜಿಲ್ಲೆಗಳಲ್ಲಿ ಪ್ರತಿದಿನ ಸರಾಸರಿ ಮೂರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳು ಕೂಡ ಆತ್ಮಹತ್ಯೆಗೆ ಮುಂದಾಗುತ್ತಿರುವುದು ಚಿಂತೆಗೀಡು ಮಾಡುತ್ತಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರಗಿಯಲ್ಲಿ ಅತ್ಯಧಿಕ 863 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಬೀದರ್ (786) ಇದ್ದು, 2024ರ ಜನವರಿ ಒಂದು ತಿಂಗಳಲ್ಲಿ 20 ಪ್ರಕರಣಗಳಿವೆ. ಅತಿ ಕಡಿಮೆ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕ್ರಮವಾಗಿ 345 ಹಾಗೂ 522 ಪ್ರಕರಣಗಳು ದಾಖಲಾಗಿವೆ.

ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿವಾದ ಹೇಳಿದಕ್ಕೆ ಸೇಡಂದ ಕೋಡ್ಲಾ ಗ್ರಾಮದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು; ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಚಿತ್ತಾ ಪುರದ ವಿಷ ಕುಡಿದು ಸಾವನ್ನಪ್ಪಿದ್ದು; ಚಿಂಚೋಳಿಯ ತವರಿನಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ಮಾವನೊಂದಿಗೆ ಜಗಳವಾಡಿ ಕಲ್ಲು ಎತ್ತಿಹಾಕಿ ಮಾವನನ್ನು ಕೊಂದ ಅಳಿಯ ಗೋರಕನಾಥ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು; ಕಮಲಾಪುರದಲ್ಲಿ ಅಳಿಯನ ಸಾವಿನಿಂದ ಮನನೊಂದು ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಸಿದ್ಧಮ್ಮ, ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಅನಾರೋಗ್ಯದಿಂದ ಮನನೊಂದು ನೇಣು ಹಾಕಿಕೊಂಡ ರಾಮಣ್ಣ... ಇಂತಹ ಸಾಲು ಸಾಲು ಕ್ಷುಲ್ಲಕ ಕಾರಣಗಳು ಆತ್ಮಹತ್ಯೆಗೆ ಕರೆದೊಯ್ಯುತ್ತಿವೆ.

ಆತ್ಮಹತ್ಯೆ ಕುರಿತು ಯೋಚಿಸುವವರು ಖಿನ್ನತೆ, ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಇನ್ನೊಬ್ಬರ ನೆರವಿನ ಅಗತ್ಯವಿರುತ್ತದೆ. ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಆತ್ಮಹತ್ಯೆಯ ಕುರಿತು ಯೋಚಿಸುವವರನ್ನು ಸಮಾಲೋಚನೆಗೆ ಒಳಪಡಿಸಿ, ಅವರಲ್ಲಿ ಜೀವನದ ಕುರಿತು ಭರವಸೆ ಹುಟ್ಟಿಸಬೇಕು ಎನ್ನುತ್ತಾರೆ ಮನೋರೋಗ ತಜ್ಞರು.

‘ಪ್ರತಿ ಕೇಸ್‌ಗೂ ಪ್ರತ್ಯೇಕ ಸಮಾಲೋಚನೆ’
‘ಆತ್ಮಹತ್ಯೆಯಂತಹ ಕೆಟ್ಟ ಯೋಚನೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅವರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಸಮಾಲೋಚನೆ ಹಾಗೂ ಚಿಕಿತ್ಸೆ ಕೊಡಬೇಕಾಗುತ್ತದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಮೊಹಮದ್ ಇರ್ಫಾನ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಭಯ ಖಿನ್ನತೆ ಮದ್ಯ ವ್ಯಸನ ಮೊಬೈಲ್ ಗೀಳಿನಿಂದಲೂ ಆತ್ಮಹತ್ಯೆ ಯೋಚನೆ ಬರುತ್ತವೆ. ಕೆಲವರಿಗೆ ಅವಸರಿದಲ್ಲಿ ಬಂದರೇ ಮತ್ತೆ ಕೆಲವರಿಗೆ ದೀರ್ಘಕಾಲಿಕ ಯೋಚನೆಗಳಿಂದ ಬರುತ್ತವೆ. ಹೀಗಾಗಿ ಅವರ ಸಮಸ್ಯೆಯ ಮೂಲ ತಿಳಿದುಕೊಂಡು ಕೌನ್ಸಿಲಿಂಗ್ ಮಾಡಿ ಚಿಕಿತ್ಸೆ ಕೊಡಬೇಕಾಗುತ್ತದೆ. ಅವರಲ್ಲಿ ಬದುಕಿನ ಮೇಲೆ ವಿಶ್ವಾಸ ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT