ಶುಕ್ರವಾರ, ಮೇ 20, 2022
23 °C
ಸಾವಿತಿಬಾಯಿ ಫುಲೆ ಶಿಕ್ಷಕಿಯರ ಸಂಘದ ವಿವಿಧ ಘಟಕಗಳ ಉದ್ಘಾಟನೆ, ಸನ್ಮಾನ ಸಮಾರಂಭ, ಕಣ್ನನ ಸೆಳೆದ ಮೆರವಣಿಗೆ

ಹೊಗಳಿದ್ದು ಸಾಕು; ಸಾಮರ್ಥ್ಯ ತೋರುವ ಅವಕಾಶ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಅರಣ್ಯ ಪ್ರದೇಶ ಹಾಗೂ ಗುಡ್ಡಗಾಡಿನ ಹಳ್ಳಿಗಳ ಶಾಲೆಗೆ ಹೋಗುವ ಶಿಕ್ಷಕಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಬಹಳಷ್ಟು ಹಳ್ಳಿಗಳಲ್ಲಿಯೂ ರಕ್ಷಣೆ ಅಗತ್ಯವಾಗಿದೆ. ಆದ್ದರಿಂದ ಶಿಕ್ಷಕಿಯರಿಗಾಗಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಉತ್ಸವ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕ, 12 ತಾಲ್ಲೂಕು ಘಟಕ ಹಾಗೂ ಉತ್ತರ ವಲಯ ಘಟಕಗಳ ಉದ್ಘಾಟನೆ, ಕೊರೊನಾ ಸೇನಾನಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಉತ್ತಮ ಶಿಕ್ಷಕಿಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸ್ಥಾನ ನೀಡಲಾಗಿದೆ. ಆದರೆ, ಶಕ್ತಿ– ಸಾಮರ್ಥ್ಯ ತೋರಿಸುವಂಥ ಅವಕಾಶ ನೀಡುತ್ತಿಲ್ಲ. ಇದನ್ನು ಪ್ರತಿಪಾದಿಸುವ ಸಲುವಾಗಿ ಶಿಕ್ಷಕಿಯರ ಸಂಘ ಹುಟ್ಟುಹಾಕಿದ್ದೇವೆ. ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿರುವ ಪದಾಧಿಕಾರಿಗಳ ಹುದ್ದೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಶಿಕ್ಷಕಿಯರಿಗೆ ಮೀಸಲಿಡಬೇಕು’ ಎಂದೂ ಆಗ್ರಹಿಸಿದರು.

‘ಕೇಂದ್ರ ಸಂಘಟನೆಗಳಲ್ಲಿ ಶೇ 70ರಷ್ಟು ಶಿಕ್ಷಕಿಯರೇ ಇದ್ದಾರೆ. ಹಾಗಾಗಿ, ಅವರಿಗೂ ಪ್ರಮುಖ ಹುದ್ದೆಗಳಲ್ಲಿ ಪಾಲು ಸಿಗಬೇಕು’ ಎಂದು ಒತ್ತಿ ಹೇಳಿದ ಅವರು, ‘ಯಾವುದೇ ಸಂಘಟನೆ ಹಾಗೂ ವ್ಯಕ್ತಿಗಳನ್ನು ವಿರೋಧಿಸುವ ಸಲುವಾಗಿ ನಾವು ಸಂಘಟನೆ ಹುಟ್ಟುಹಾಕಿಲ್ಲ. ನೀವೂ ನಮ್ಮನ್ನು ವಿರೋಧಿಸಬೇಡಿ. ಒಬ್ಬರಿಗೊಬ್ಬರು ಹೊಂದಿಕೊಂಡು ಹೋದರೆ ಸಂಘಟನೆ ಶಕ್ತಿ ಹೆಚ್ಚಲಿದೆ’ ಎಂದರು.

‘ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರದ ಜತೆಗೇ ಸಾವಿತ್ರಿಬಾಯಿ ಫುಲೆ ಅವರನ್ನೂ ಪೂಜಿಸಬೇಕು ಎಂದು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಶಿಕ್ಷಣ ಸಚಿವರ ಸುರೇಶಕುಮಾರ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲಿಯವರೆಗೆ ನಾವು ಒಗ್ಗಟ್ಟಾಗಿ ಇರುತ್ತೇವೆಯೋ ಅಲ್ಲಿಯವರೆಗೆ ನಮ್ಮ ಹಕ್ಕುಗಳನ್ನು ನಾವು ಪಡೆಯಬಹುದು’ ಎಂದರು.

‘ಇಲ್ಲಿಯವರೆಗೂ ಶಿಕ್ಷಕಿಯರನ್ನು ವೋಟ್‌ ಬ್ಯಾಂಕ್‌ ಆಗಿಯೇ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ, ಮಹಿಳೆಯರಿಗೆ ನಾಯಕತ್ವ ತರಬೇತಿ ನೀಡುವ, ಸಬಲೀಕರಣಕ್ಕೆ ಒತ್ತು ಕೊಡುವ ಪ್ರಯತ್ನವನ್ನು ಈ ಸಂಘಟನೆ ಮಾಡುತ್ತಿದೆ’ ಎಂದೂ ಹೇಳಿದರು.

ಶ್ರೀಶೈಲ ಮತ್ತು ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬುದ್ಧ ವಿಹಾರದ ಸಂಗಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ, ಡಯಟ್ ಉಪ ನಿರ್ದೇಶಕ ಶಾಂತಗೌಡ ಪಾಟೀಲ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅದ್ಯಕ್ಷ ನಾಗಪ್ಪ ಹೊನ್ನಳ್ಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಸಿದ್ಧಣ್ಣ ಪೂಜಾರಿ, ಮಹೇಶ ಹೂಗಾರ, ಮಲ್ಲಯ್ಯ ಗುತ್ತೇದಾರ, ಬಸವರಾಜ, ಹರೀಶ ಭರಣಿ, ಶೋಭಾ ಪತ್ತಾರ, ಅನ್ನಪೂರ್ಣಾ ಸೋಮಾ, ಮೀನಾಕ್ಷಿ ಬನಸೋಡೆ, ಶ್ರೀದೇವಿ ಶಿರಹಟ್ಟಿ, ಮಲ್ಲಮ್ಮ ಮತ್ತಿಮೂಡ, ಗೌರಾಬಾಯಿ ಆಹೇರಿ, ಸುಧಾ ಬಿರಾದಾರ ಶಾಂತಾ, ಭವಾನಿ, ಎಸ್.ವಿಶಾಲಾಕ್ಷಿ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಪ್ರಮೀಳಾದೇವಿ ಗೌಡಪ್ಪ ಶೇರಿಕಾರ, ಅರ್ಚನಾ ಜೈನ್, ಶೈಲಜಾ, ಸುಮಂಗಲಾ ಡಿಗ್ಗಾವಿ, ವಿಜಯಲಕ್ಷ್ಮೀ ಹಿರೇಮಠ, ನಾಗುಬಾಯಿ ಮಲಘಾಣ, ಶಶಿಕಲಾ ಮೂಲಭಾರತಿ, ನಾಗವೇಣಿ, ಕೃಷ್ಣಾಬಾಯಿ ರಾಂಪುರ, ಕಲಾವತಿ ನೆಲೋಗಿ, ಶಶಿಕಲಾ ಹವಾಲ್ದಾರ, ಸವಿತಾ ಬಡಿಗೇರ ಇದ್ದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವ್ಹಾಣ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ನಿರೂಪಿಸಿದರು.

ಮೆರವಣಿಗೆ, ನೃತ್ಯ, ಬಣ್ಣದ ಸೀರೆಗಳ ಸಂಭ್ರಮ

ಕಲಬುರ್ಗಿ: ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಎಸ್‌.ಎಂ. ಪಂಡಿತ ರಂಗಮಂದಿರ ವರೆಗೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. 400ಕ್ಕೂ ಹೆಚ್ಚು ಶಿಕ್ಷಕಿಯರು ಒಂದೇ ಬಣ್ಣದ‌ ಸೀರೆ ಉಟ್ಟು ಮೆರವಣಿಗೆಯಲ್ಲಿ ಗಮನ ಸೆಳೆದರು. ಹಲವು ಪದಾಧಿಕಾರಿಗಳು ಮಾರ್ಗದುದ್ದಕ್ಕೂ ಹಾಡಿ, ಕುಣಿದು, ಗ್ರಾಮೀಣ ಸೊಗಡಿನ ಕಲೆಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮ ಕೂಡ ಅತ್ಯಂತ ವರ್ಣರಂಜಿತವಾಗಿತ್ತು. ವೈಷ್ಣವಿ ಪಾಟೀಲ ಹಾಗೂ ತಂಡದವರು ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಗಮನ ಸೆಳೆಯಿತು.

ಕೊರೊನಾ ಸೇನಾನಿಗಳು, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿಯರಾದ ಕಮಲಾ ಕುಲಕರ್ಣಿ, ಶಶಿಕಲಾ ಮೂಲಭಾರತಿ, ಗೀತಾ ಭರಣಿ ಅವರಿಗೆ ‘ಶಿಕ್ಷಣ ಸುಧಾಂಶು’ ಪ್ರಶಸ್ತಿ ಮತ್ತು ಶರಣಮ್ಮ ರೂಗಿ ಅವರಿಗೆ ‘ಕುಶಲಮತಿ’ ಪ್ರಶಸ್ತಿ ಹಾಗೂ ಶಾಂತಾ ಹಾವನೂರಮಠ, ಸಪ್ನಾ ಪಾಟೀಲ, ಶೈಲಜಾ ಜಾಲವಾದಿ, ನಸ್ರೀನ್ ಭಾನು, ಗಂಗುಬಾಯಿ, ಭಾರತಿ ಮೊದಲಾದವರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು