ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಪಣಕ್ಕಿಟ್ಟು ಅಕ್ಷರ ಕಲಿಸುವ ಶಿಕ್ಷಕರು...

Published 5 ಸೆಪ್ಟೆಂಬರ್ 2023, 5:17 IST
Last Updated 5 ಸೆಪ್ಟೆಂಬರ್ 2023, 5:17 IST
ಅಕ್ಷರ ಗಾತ್ರ

ಅನ್ನಕ್ಕೂ ಪರದಾಡುತ್ತಿದ್ದ ಮಕ್ಕಳಿಗೆ ಅನ್ನ ಹಾಕುವುದರ ಜೊತೆಗೆ ಅಕ್ಷರವನ್ನೂ ಧಾರೆಯೆರೆದ ಶಿಕ್ಷಕರು ನಮ್ಮ ಮಧ್ಯೆಯೇ ಇರುವುದರಿಂದಲೇ ಶಿಕ್ಷಕ ವೃತ್ತಿಗೊಂದು ಘನತೆ ಬಂದಿದೆ. ಹಾಗಾಗಿಯೇ ಶಿಕ್ಷಕರ ದಿನದ ಆಚರಣೆಗೂ ಒಂದು ಅರ್ಥ ಬಂದಿದೆ. 

‘ಶಿಕ್ಷಕರೇ ನಮ್ಮ ಬಾಳನ್ನು ಬೆಳಗಿದ ದೀವಿಗೆಯಾಗಿದ್ದಾರೆ’ ಎಂದು ಹಲವಾರು ಸಾಧಕರು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಮಕ್ಕಳಿಗೆ ಪಾಠ ಹೇಳಲು ಅಪಾಯಕಾರಿ ನದಿಯನ್ನು ದೋಣಿಯ ಮೂಲಕ ದಾಟಿ ಬರುವ ಶಿಕ್ಷಕಿ, ಬೀಳುವ ಹಂತದಲ್ಲಿದ್ದ ಶಾಲೆಯ ನವೀಕರಣಕ್ಕೆ ತಮ್ಮ ಜೇಬಿನಿಂದಲೇ ಹಣ ಹಾಕುವುದರ ಜೊತೆಗೆ ದಾನಿಗಳ ನೆರವನ್ನೂ ಪಡೆದು ಭಾಷಾ ಪ್ರಯೋಗಾಲಯ ಕಟ್ಟಡವನ್ನು ನಿರ್ಮಿಸಿದ ಶಿಕ್ಷಕ, ಇಡೀ ಶಾಲೆಯನ್ನು ಹಸಿರಿನ ನಂದನವನ್ನಾಗಿ ಮಾಡಿದ ಮುಖ್ಯ ಶಿಕ್ಷಕ, ಪ್ರತಿ ವರ್ಷ ತಮ್ಮ ಜೇಬಿನಿಂದ ಹತ್ತಾರು ಸಾವಿರ ಖರ್ಚು ಮಾಡಿ ಮಕ್ಕಳ ಪುಸ್ತಕ, ಪಾಟಿ ಚೀಲಗಳನ್ನು ಖರೀದಿಸಿ ಕೊಡುವ ಶಿಕ್ಷಕರೂ ನಮ್ಮ ಮಧ್ಯೆ ಇದ್ದಾರೆ. ಹೀಗಾಗಿಯೇ ಅಕ್ಷರ ದಾಸೋಹದ ಬಳ್ಳಿ ಎಲ್ಲೆಂದರಲ್ಲಿ ಹಬ್ಬುತ್ತಿದೆ.

ಮೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಆವರಿಸಿದ್ದ ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ ಶಿಕ್ಷಕ ಸಮುದಾಯ ತಮ್ಮನ್ನೇ ನಂಬಿದ ಮಕ್ಕಳಿಗೆ ಅಕ್ಷರ ಧಾರೆಯನ್ನು ಹರಿಸಿದೆ. ಸಾಲದೆಂಬಂತೆ ಮನೆ–ಮನೆಗೆ ತೆರಳಿ ಹಸಿವಿನಿಂದ ಕೂತಿದ್ದ ಮಕ್ಕಳಿಗೆ ಆಹಾರ ಧಾನ್ಯಗಳನ್ನೂ ಶಿಕ್ಷಕರು ಹಂಚಿದ್ದರು.

ಶೈಕ್ಷಣಿಕವಾಗಿ ಕಲ್ಯಾಣ ಕರ್ನಾಟಕ ಹಿಂದುಳಿಯಲು ಇಲ್ಲಿ ಮೂಲಸೌಕರ್ಯಗಳ ಅಗಾಧ ಕೊರತೆಯೂ ಕಾರಣವಾಗಿದೆ. ಎಷ್ಟೋ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾತು ಬಿಡಿ, ಶಿಕ್ಷಕರಿಗೂ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಇಲ್ಲ. ನಿತ್ಯ ಸುಮಾರು 10ರಿಂದ 50 ಕಿ.ಮೀ. ದೂರ ಪ್ರಯಾಣಿಸಿ ಗ್ರಾಮದಲ್ಲಿರುವ ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯರ ಪಾಡಂತೂ ಹೇಳತೀರದು. ಶುದ್ಧ ಕುಡಿಯುವ ನೀರಿನ ಕೊರತೆ, ಶೌಚಾಲಯದ ಕೊರತೆಯು ಅವರನ್ನು ಬಾಧಿಸುತ್ತದೆ. ಹೀಗಾಗಿಯೇ ಎಷ್ಟೋ ಶಿಕ್ಷಕಿಯರು ಶೌಚಾಲಯದ ಸಮಸ್ಯೆಯ ಕಾರಣಕ್ಕೆ ನೀರನ್ನೂ ಕುಡಿಯದೇ ಪಾಠ ಮಾಡಿ ಬರುವವರೂ ಇದ್ದಾರೆ. ಇದರ ಪರಿಣಾಮ ಹಲವು ಬಾರಿ ಅನಾರೋಗ್ಯಕ್ಕೂ ಒಳಗಾದ ಉದಾಹರಣೆ ಇದೆ ಎನ್ನುತ್ತಾರೆ ಶಿಕ್ಷಕಿಯೊಬ್ಬರು.

ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಅಚ್ಚುಕಟ್ಟು ಗ್ರಂಥಾಲಯ, ಎಲ್ಲ ವಿದ್ಯಾರ್ಥಿಗಳಿಗೆ ಬೆಂಚಿನ ವ್ಯವಸ್ಥೆ, ಸ್ಮಾರ್ಟ್‌ ಕ್ಲಾಸ್‌ ರೂಮ್‌, ವಾರಕ್ಕೊಂದು ಉತ್ತಮ ಸಂದೇಶ ಸಾರುವ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ, ವರ್ಷದ ಕೊನೆಯಲ್ಲಿ ಮಕ್ಕಳಿಗೆ ಪ್ರವಾಸ... ಹೀಗೆ ಸ್ವಂತ ಆಸಕ್ತಿಯಿಂದ ಮಕ್ಕಳ ವಿದ್ಯಾರ್ಥಿ ಜೀವನವನ್ನು ಸರಾಗವಾಗಿ ಮುಗಿಯುವಂತೆ ಮಾಡಿದ ಕೀರ್ತಿಯೂ ಹಲವು ಸಮಾಜಮುಖಿ ಶಿಕ್ಷಕರಿಗೆ ಸಲ್ಲುತ್ತದೆ.

ಜೇವರ್ಗಿ ತಾಲ್ಲೂಕಿನ ಮಂದೇವಾಲದ ಸರ್ಕಾರಿ ಶಾಲೆಗೆ ಕಟ್ಟಡ ನಿರ್ಮಾಣಗೊಳ್ಳಲು ಅಲ್ಲಿನ ವಿದ್ಯಾರ್ಥಿಗಳ ಬವಣೆ ಅರಿತು ಸರ್ಕಾರಕ್ಕೆ ಸತತವಾಗಿ ಮನವಿ ಮಾಡಿಕೊಂಡ ಶಿಕ್ಷಕ ಸಮುದಾಯದ ಶ್ರಮ ಅಡಗಿದೆ. ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಲಭ್ಯ ಅನುದಾನದಲ್ಲಿಯೇ ರಾಜ್ಯದಲ್ಲೇ ಮಾದರಿಯಾದ ಗ್ರಂಥಾಲಯನ್ನು ನಡೆಸುತ್ತಿರುವುದರಲ್ಲಿ ಅಲ್ಲಿನ ಪ್ರಾಚಾರ್ಯರು ಹಾಗೂ ಗ್ರಂಥಪಾಲಕರ ಶ್ರಮ ಅಡಗಿದೆ.

ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮದಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಮಹಿಳೆಯರ ತಂಡವೊಂದನ್ನು ಕಟ್ಟಿ ಅವರಿಗೆ ಹಲಗೆ ಕಲಿಸಿ, ‘ಮಹೇಶ್ವರಿ ಹಲಗೆ ಮೇಳ’ದ ಮೂಲಕ ರಾಜ್ಯದಾದ್ಯಂತ ಕಾರ್ಯಕ್ರಮ ನೀಡುವಂತೆ ಅಣಿಗೊಳಿಸಿದವರು ಅಲ್ಲಿನ ಸರ್ಕಾರಿ ಶಾಲೆಯ ಒಬ್ಬ ಶಿಕ್ಷಕಿ.

ಶಿಕ್ಷಕರ ಶ್ರಮಕ್ಕೆ ತಕ್ಕಂತೆ ಸರ್ಕಾರವೂ ಇತ್ತೀಚಿನ ದಿನಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡ, ಸ್ಮಾರ್ಟ್‌ ಕ್ಲಾಸ್, ಗ್ರಂಥಾಲಯ, ಇಂಟರ್‌ನೆಟ್‌ ಸೌಕರ್ಯ, ಉತ್ತಮ ವಸತಿನಿಲಯ ಹಾಗೂ ವಸತಿ ಶಾಲೆಗಳನ್ನು ನಿರ್ಮಿಸುವ ಮೂಲಕ ಭವಿಷ್ಯದ ಉತ್ತಮ ನಾಗರಿಕರನ್ನು ತಯಾರಿಸಲು ತನ್ನ ಕೊಡುಗೆಯನ್ನೂ ನೀಡುತ್ತಿರುವುದು ಶಿಕ್ಷಕರ ಖುಷಿಗೆ ಕಾರಣವಾಗಿದೆ.

ಇತ್ತೀಚೆಗೆ ಇಸ್ರೊ ವಿಜ್ಞಾನಿಗಳು ಚಂದ್ರಯಾನ ಹಾಗೂ ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ ನೌಕೆಗಳನ್ನು ಸಿದ್ಧಪಡಿಸಿದವರೂ ಒಂದು ಕಾಲದಲ್ಲಿ ಉತ್ತಮ ಶಿಕ್ಷಕರಿಂದ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳೇ ಎಂಬುದು ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತರುವ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT