ಕಲಬುರಗಿ: ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮುಕ್ತಾಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಹೊರ ವಿಭಾಗಗಳಿಂದ ಬರಲು ಶಿಕ್ಷಕರು ಹಿಂದೇಟು ಹಾಕಿದ್ದಾರೆ. ಕಲಬುರಗಿ ವಿಭಾಗದಿಂದ 2,504 ಶಿಕ್ಷಕರು ಬೇರೆ ವಿಭಾಗಗಳಿಗೆ ಹೋಗಿದ್ದರೆ, ಈ ವಿಭಾಗಕ್ಕೆ ಕೇವಲ 74 ಶಿಕ್ಷಕರು ಬಂದಿದ್ದಾರೆ.
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹೊರಗೆ ವರ್ಗಾವಣೆಗಾಗಿ ಇತರೆ ಅರ್ಹತೆಗಳ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆ ವೃಂದದಲ್ಲಿ ಕನಿಷ್ಠ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮದಡಿ ಸಾವಿರಾರು ಶಿಕ್ಷಕರು ಅರ್ಹರಾಗಿದ್ದಾರೆ. ಶೇ 25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ಶೈಕ್ಷಣಿಕ ಘಟಕಗಳಲ್ಲಿ ಶಿಕ್ಷಕರ ವರ್ಗಾವಣೆಗೂ ಅನುಮತಿಸಲಾಗಿದೆ.
ಹೀಗಾಗಿ, ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಏಳು ಜಿಲ್ಲೆಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅರ್ಹ ಶಿಕ್ಷಕರು ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆಗೊಂಡಿದ್ದಾರೆ. ಬೇರೆ ವಿಭಾಗಗಳಿಂದ ಕಲಬುರಗಿ ವಿಭಾಗಕ್ಕೆ ಬರಲು ಆ ಪ್ರಮಾಣದ ಉತ್ಸಾಹ ವ್ಯಕ್ತವಾಗಿಲ್ಲ.
ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೂಲಸೌಲಭ್ಯಗಳಿಂದ ಕೊರತೆಯಿಂದ ಬಳಲುತ್ತಿವೆ. ಇದರ ಜತೆಗೆ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ 45,440 ಹುದ್ದೆಗಳ ಪೈಕಿ 18,050 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಗಳಲ್ಲಿ ಸಹ ಮಂಜೂರಾದ 12,696 ಹುದ್ದೆಗಳಲ್ಲಿ 3,523 ಹುದ್ದೆಗಳು ನೇಮಕಾತಿಗಾಗಿ ಕಾಯುತ್ತಿವೆ. ಇದರ ನಡುವೆ 2,504 ಶಿಕ್ಷಕರು ವರ್ಗಾವಣೆ ಆಗಿದ್ದಾರೆ.
‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಕರ ಮರುಹಂಚಿಕೆ ಮಾಡುವುದಾಗಿ ಹೇಳಿದೆ. ರಾಜ್ಯದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಕಲಬುರಗಿ ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಅನ್ಯ ವಿಭಾಗಗಳಿಗೆ ಹೋಗಿದ್ದು, ಅವರ ಸ್ಥಾನದಲ್ಲಿದ್ದ, ಹೆಚ್ಚುವರಿಯಾಗಿರುವ ಅತಿಥಿ ಶಿಕ್ಷಕರ ಸಂಖ್ಯೆ ಕಲಬುರಗಿ ವಿಭಾಗಕ್ಕೆ ಹಂಚಿಕೆಯಾಗಲಿದೆ’ ಎಂದು ಡಿಡಿಪಿಐ ಸಕ್ರಪ್ಪಗೌಡ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೆಚ್ಚುವರಿ ಶಿಕ್ಷಕರನ್ನು ಕೊಡುವಂತೆ ಶಿಕ್ಷಣ ಇಲಾಖೆಯ ಆಯುಕ್ತಾಲಯದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ(ಕೆಕೆಆರ್‌ಡಿಬಿ) ಪ್ರಸ್ತಾವ ಸಲ್ಲಿಸಲಾಗಿದೆ. ಕೆಕೆಆರ್‌ಡಿಬಿಯು ಜಿಲ್ಲಾವಾರು ಮಾಹಿತಿ ಕಲೆಹಾಕಿ ಅತಿಥಿ ಶಿಕ್ಷಕರನ್ನು ಕೊಡಲಿದೆ. ಕೊರತೆ ಎದುರಾಗುವ ಸ್ಥಳಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಂಡು ಬೋಧನೆಯನ್ನು ಸರಿದೂಗಿಸಲಾಗುವುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
5 ಜಿಲ್ಲೆಗಳಲ್ಲಿ ಎರಡಂಕಿಯೂ ದಾಟಿಲ್ಲ!
ರಾಯಚೂರು (5,335), ಯಾದಗಿರಿ (3,917), ಕಲಬುರಗಿ(3,463), ಬಳ್ಳಾರಿ(2,450) ಮತ್ತು ಬೀದರ್(1,469) ಅಧಿಕ ಶಿಕ್ಷಕರ ಕೊರತೆ ಇರುವ ಜಿಲ್ಲೆಗಳು. ಈ ಐದು ಜಿಲ್ಲೆಗಳ ಪೈಕಿ ಬೀದರ್ ಹೊರತರುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೂರಂಕಿಯಷ್ಟು ಶಿಕ್ಷಕರು ವರ್ಗವಾಗಿದ್ದು, ಎರಡಂಕಿಯಷ್ಟೂ ಶಿಕ್ಷಕರು ಬಂದಿಲ್ಲ.
ಬಳ್ಳಾರಿ(172) ನಾಲ್ವರು, ಬೀದರ್ (21) ಎಂಟು, ಕಲಬುರಗಿ(330) ಒಂಬತ್ತು, ರಾಯಚೂರಿ (981) ನಾಲ್ಕು ಹಾಗೂ ಯಾದಗಿರಿಯಲ್ಲಿ(459) ಐದು ಶಿಕ್ಷಕರು ಹೊರ ವಿಭಾಗಗಳಿಂದ ಬಂದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.