ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸಿಗದ ಹಕ್ಕುಪತ್ರ; ಅಭಿವೃದ್ಧಿಯೂ ಮರೀಚಿಕೆ

ಕೊಳೆಗೇರಿಯ 21,389 ಕುಟುಂಬಗಳ ಪೈಕಿ 2,799 ಕುಟುಂಬಗಳಿಗೆ ಹಕ್ಕುಪತ್ರ ಭಾಗ್ಯ
Published : 12 ಸೆಪ್ಟೆಂಬರ್ 2024, 5:59 IST
Last Updated : 12 ಸೆಪ್ಟೆಂಬರ್ 2024, 5:59 IST
ಫಾಲೋ ಮಾಡಿ
Comments

ಕಲಬುರಗಿ: ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಕೊಳೆಗೇರಿಗಳ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದ್ದು, ಕೊಳೆಗೇರಿಗಳಲ್ಲಿನ 21,389 ಕುಟುಂಬಗಳ ಪೈಕಿ 2,799 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ಭಾಗ್ಯ ಸಿಕ್ಕಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಲಬುರಗಿ ಉಪವಿಭಾಗ ಗುರುತಿಸಿರುವ ಬಹುತೇಕ ಕೊಳೆಗೇರಿಗಳು ಇಕ್ಕಟ್ಟಾದ ಪ್ರದೇಶದಲ್ಲಿವೆ. ಅಲ್ಲಿನ ನಿವಾಸಿಗಳಿಗೆ ಸಮರ್ಪಕವಾದ ಸೂರಿನ ವ್ಯವಸ್ಥೆ ಇಲ್ಲದೇ ಗುಡಿಸಲು, ಶೆಡ್‌ಗಳಲ್ಲಿ ವಾಸವಾಗಿದ್ದು, ಅವರ ಬದುಕು ಯಾತನಾಮಯವಾಗಿದೆ. ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಸಮಸ್ಯೆಯ ಜತೆಗೆ ಆರೋಗ್ಯ ಸಮಸ್ಯೆಯೂ ಅನುಭವಿಸುತ್ತಿದ್ದಾರೆ.

ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 128 ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. ಸರ್ಕಾರದ ಆದೇಶದಂತೆ 21,389 ಕುಟುಂಬಗಳು ವಾಸ ಮಾಡುತ್ತಿವೆ. ಆರ್ಥಿಕವಾಗಿ ತೀರಾ ಹಿಂದುಳಿದವರೇ ಇಲ್ಲಿ ವಾಸವಾಗಿದ್ದಾರೆ. ಈ ಕೊಳೆಗೇರಿಗಳಿಗೆ ಅಗತ್ಯ ಮೂಲಸೌಕರ್ಯಗಳು ಇಲ್ಲದೆ ಇಲ್ಲಿನ ನಿವಾಸಿಗಳ ಬದುಕು ಅಸಹನೀಯವಾಗುತ್ತಿದೆ.

ಕಲಬುರಗಿ ದಕ್ಷಿಣದಲ್ಲಿ 21, ಕಲಬುರಗಿ ಉತ್ತರದಲ್ಲಿ 20, ಶಹಾಬಾದ್ ಗ್ರಾಮೀಣ ಮತ್ತು ಕಾಳಗಿಯಲ್ಲಿ ತಲಾ 8, ಚಿಂಚೋಳಿಯಲ್ಲಿ 13, ಆಳಂದದಲ್ಲಿ 14, ಅಫಜಲಪುರದಲ್ಲಿ 10, ಜೇವರ್ಗಿಯಲ್ಲಿ 9, ಸೇಡಂನಲ್ಲಿ 6, ಚಿತ್ತಾಪುರದಲ್ಲಿ 17 ಹಾಗೂ ವಾಡಿಯಲ್ಲಿ 2 ಕೊಳೆಗೇರಿ ಪ್ರದೇಶಗಳಿವೆ. ಸಮೀಕ್ಷೆ ನಡೆಸಿ ಇನ್ನೂ ಕೆಲವು ಕೊಳೆಗೇರಿ ಘೋಷಿಸಬೇಕಿದೆ.

ಘೋಷಣೆಯಾದ ಕೊಳೆಗೇರಿಗಳ ಪೈಕಿ ಕಲಬುರಗಿ ದಕ್ಷಿಣದಲ್ಲಿ 1,014, ಕಲಬುರಗಿ ಉತ್ತರದಲ್ಲಿ 823, ಆಳಂದದಲ್ಲಿ 300, ಜೇವರ್ಗಿಯಲ್ಲಿ 181 ಹಾಗೂ ಚಿತ್ತಾಪುರದಲ್ಲಿನ 481 ಕುಟುಂಬಗಳು ಸೇರಿ ಒಟ್ಟು 2,799 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಉಳಿದ ಕುಟುಂಬಗಳು ಹಕ್ಕಪತ್ರ ಮತ್ತು ಮೂಲಸೌಲಭ್ಯಕ್ಕಾಗಿ ಚಾತಕ ಪಕ್ಷಿಯಂತೆ ಎದುರು ನೋಡುತ್ತಿವೆ.

‘ಕೊಳೆಗೇರಿಗಳಲ್ಲಿ ಕೂಲಿ ಕಾರ್ಮಿಕರು, ಗೌಂಡಿ ಕೆಲಸಗಾರರು, ತರಕಾರಿ ಮಾರುವವರು, ಬೀದಿ ಬದಿ ವ್ಯಾಪಾರಿಗಳು, ಆಟೊ ರಿಕ್ಷಾ ಚಾಲಕರು, ಚಹಾದಂಗಡಿ, ಪೌರಕಾರ್ಮಿಕರು ವಾಸಿಸುತ್ತಿದ್ದಾರೆ. ಸ್ವಚ್ಛತೆ ಇಲ್ಲದೆ ಅವರೆಲ್ಲ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಚರಂಡಿ ಮತ್ತು ಮಳೆ ನೀರು ತಂದೊಡ್ಡುವ ಸಮಸ್ಯೆಗಳ ಸರಮಾಲೆಗೆ ನರಕಯಾತನೆಯನ್ನೂ ಅನುಭವಿಸುತ್ತಿದ್ದಾರೆ. ಇಷ್ಟು ದಿನ ಚಿಕ್ಕದಾಗಿದ್ದ ಕುಟುಂಬಗಳು ಈಗ ದೊಡ್ಡದಾಗಿವೆ. ಆದರೆ, ಅವರು ವಾಸಿಸುತ್ತಿರುವ ಪ್ರದೇಶ ಮಾತ್ರ ವಿಸ್ತಾರವಾಗಿಲ್ಲ. ಇಕ್ಕಟ್ಟಾದ ಪ್ರದೇಶದಲ್ಲಿ ಜೀವನ ಸಾಗಿಸುತ್ತಿದ್ದಾರೆ’ ಎನ್ನುತ್ತಾರೆ ಸ್ಲಂ ಜನಾಂದೋಲನ ಸಮಿತಿ ಮುಖಂಡ ಅಲ್ಲಮಪ್ರಭು ನಿಂಬರ್ಗಾ.

ಒಂದು ಹಕ್ಕುಪತ್ರ ಪಡೆಯಲು ನೋದಣಿ ಶುಲ್ಕ ಸೇರಿದಂತೆ ₹6000ದಿಂದ ₹7000 ಖರ್ಚಾಗುತ್ತಿದೆ. ಇಷ್ಟೊಂದು ಹಣ ಕೊಡಲು ಆಗುತ್ತಿಲ್ಲ. ನಗರ ಪ್ರದೇಶದ ಶುಲ್ಕ ₹1000 ಗ್ರಾಮೀಣ ಪ್ರದೇಶದ ಶುಲ್ಕ ₹500ಕ್ಕೆ ನಿಗದಿಪಡಿಸಬೇಕು
ಅಲ್ಲಮಪ್ರಭು ನಿಂಬರ್ಗಾ ಸ್ಲಂ ಜನಾಂದೋಲನ ಸಮಿತಿಯ ಮುಖಂಡ
‘800 ಹಕ್ಕುಪತ್ರಗಳು ವಿತರಣೆಗೆ ಸಿದ್ಧ’
‘ಕೊಳೆಗೇರಿ ಪ್ರದೇಶದಲ್ಲಿನ ಚಿತ್ತಾಪುರದ 700 ಹಾಗೂ ಕಲಬುರಗಿ ನಗರದ 100 ಕುಟುಂಬಗಳು ಸೇರಿ ಒಟ್ಟು 800 ಕುಟುಂಬಗಳ ಹಕ್ಕುಪತ್ರಗಳು ವಿತರಣೆಗೆ ಸಿದ್ಧವಾಗಿವೆ. ಶೀಘ್ರವೇ ದಿನಾಂಕ ನಿಗದಿಪಡಿಸಿ ವಿತರಣೆ ಮಾಡಲಾಗುವುದು’ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶ್ರೀಧರ್ ಸಾರ್ವಾಡ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಗರ ಪ್ರದೇಶದಲ್ಲಿನ ಕೊಳೆಗೇರಿಯ ಅರ್ಹ ಎಸ್‌ಸಿ ಎಸ್‌ಟಿ ಸಮುದಾಯದವರು ₹2 ಸಾವಿರ ಇತರೆ ಹಿಂದುಳಿದ ವರ್ಗದವರು ₹4 ಸಾವಿರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಸ್‌ಸಿ ಎಸ್‌ಟಿ ಸಮುದಾಯದವರು ₹1 ಸಾವಿರ ಹಾಗೂ ಒಬಿಸಿಯುವರು ₹2 ಸಾವಿರ ಡಿಡಿ ಮೂಲಕ ಶುಲ್ಕ ಕಟ್ಟಿದರೆ ಹಕ್ಕುಪತ್ರ ನೀಡಲಾಗುವುದು’ ಎಂದರು. ‘ಕೊಳೆಗೇರಿ ನಿವಾಸಿಗಳ ಸಮೀಕ್ಷೆ ನಡೆಯುತ್ತಿದ್ದು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಅವರಿಗೂ ಕುಟುಂಬಗಳ ಮಾಹಿತಿ ಪಟ್ಟಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT