ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘವು ಮಂಡಳಿಗೆ ಮಂಜೂರಾಗಿದ್ದ ಅನುದಾನದಲ್ಲಿ ನೀಡಿದ್ದ ₹ 200 ಕೋಟಿಯನ್ನು ಸಮರ್ಪಕವಾಗಿ ಖರ್ಚು ಮಾಡಿದೆಯೇ ಇಲ್ಲವೇ ಎಂಬ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಾರ್ಯದರ್ಶಿ ನೇಮಿಸಿದ್ದ ತನಿಖಾ ತಂಡ ಹಾಗೂ ತನಿಖೆಯನ್ನು ಸರ್ಕಾರ ಗುರುವಾರ ರದ್ದುಪಡಿಸಿದೆ.
ಮಂಡಳಿಯು ತನಿಖಾ ತಂಡ ನೇಮಿಸಿದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ (ಪ್ರಸ್ತುತ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ) ಅವರು ಸರ್ಕಾರಕ್ಕೆ ಪತ್ರ ಬರೆದು, ಮಂಡಳಿ ಕಾರ್ಯದರ್ಶಿ ರಚಿಸಿರುವ ತನಿಖಾ ತಂಡಕ್ಕೆ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಬಗ್ಗೆ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಮಂಡಳಿಯ ಅನುಮೋದನೆ ಪಡೆಯದ ಬಗ್ಗೆ ಸಂಘದಿಂದ ವಿವರಣೆ ನೀಡುವ ಕುರಿತು ನಿರ್ದೇಶನ ಕೋರಿದ್ದರು.
ಈ ಪತ್ರದ ಹಿನ್ನೆಲೆಯಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಆಯಾ ಆರ್ಥಿಕ ವರ್ಷದಲ್ಲಿ ಆರ್ಥಿಕ ಇಲಾಖೆಯ ಆದೇಶದಂತೆ ತಲಾ ₹ 100 ಕೋಟಿಯಂತೆ ಒಟ್ಟು ₹ 300 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಮಂಡಳಿಯಿಂದಲೇ ಸಂಘಕ್ಕೆ ನೀಡಲಾಗಿದೆ ಎಂದು ತಪ್ಪಾಗಿ ಭಾವಿಸಿ ತನಿಖೆಗೆ ಆದೇಶ ನೀಡಿದ್ದಾರೆ. ತನಿಖಾ ತಂಡ ರಚಿಸುವ ಮುನ್ನ ಸರ್ಕಾರದ ಅನುಮತಿ ಪಡೆದಿಲ್ಲ. ಹೀಗಾಗಿ, ತನಿಖಾ ತಂಡವನ್ನು ಹಾಗೂ ಕೈಗೊಂಡಿರುವ ತನಿಖೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಸಮಿತಿ ರದ್ದು ಆದೇಶ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಪಿ., ‘ತನಿಖಾ ಸಮಿತಿಯನ್ನು ರದ್ದುಗೊಳಿಸಿದ ಮಾಹಿತಿ ಬಂದಿದೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.