ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಮುಂಗಾರು ಮಳೆ: ಬೆಳೆಗೆ ಜೀವ ಕಳೆ

ನಳನಳಿಸುತ್ತಿರುವ ಬೆಳೆಗಳು, ರೈತರ ಮೊಗದಲ್ಲಿ ಹರ್ಷ
Published 10 ಜುಲೈ 2024, 6:46 IST
Last Updated 10 ಜುಲೈ 2024, 6:46 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನಲ್ಲಿ ಮಳೆ ಹದವಾಗಿ ಸುರಿಯುತ್ತಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ಜೀವಕಳೆ ಬಂದಿದೆ. ಈ ಬಾರಿಯ ಹಂಗಾಮಿನಲ್ಲಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಬಿತ್ತಿದ ಬೆಳೆಗಳಿಗೆ ಪೂರಕವಾಗಿದೆ. ಸಕಾಲಕ್ಕೆ ಮುಂಗಾರು ಬಿತ್ತನೆ ಆರಂಭದ ಜತೆಗೆ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಹೆಸರು, ಉದ್ದು ಮತ್ತು ತೊಗರಿ, ಹತ್ತಿ, ಸೇರಿದಂತೆ ವಿವಿಧ ಬೆಳೆಗಳಲ್ಲಿನ ಕಳೆ ತೆಗೆಯುವಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಎತ್ತಿನ ಎಡಿ ಹೊಡೆಯುತ್ತಿದ್ದು, ಬೆಳೆಗಳಲ್ಲಿನ ಹುಲ್ಲಿನ ನಾಶಕ್ಕೆ ಔಷಧ ಸಿಂಪರಣೆ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಕಾರ್ಯಕ್ಕೆ ಟ್ರ್ಯಾಕ್ಟರ್, ಎತ್ತಿನ ಬಂಡಿ ಬಂಡಿ ಹಾಗೂ ಯಂತ್ರಗಳ ಮೊರೆ ಹೋಗಿದ್ದು, ಕಂಡು ಬರುತ್ತಿದೆ. ಕೆಲವು ಕಡೆಗಳಲ್ಲಿ ಕೂಲಿಗಾರರ ಸಮಸ್ಯೆ ಎದುರಾಗಿದ್ದು, ಬಾಡಿಗೆ ಟ್ರ್ಯಾಕ್ಟರ್ ಪಡೆದು ಕೆಲಸಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನ ಕೋಡ್ಲಾ, ಸಿಂಧನಮಡು, ರಂಜೋಳ, ಅಳ್ಳೊಳ್ಳಿ, ಊಡಗಿ, ಮದನಾ, ಕಡಚರ್ಲಾ, ಮಳಖೇಡ, ಮೀನಹಾಬಾಳ, ಬೀರನಳ್ಳಿ, ರಿಬ್ಬನಪಲ್ಲಿ, ಹಣಮನಳ್ಳಿ, ಗುಂಡಳ್ಳಿ, ದುಗನೂರು, ಇಟಕಾಲ್, ಮೋತಕಪಲ್ಲಿ, ಗಾಡದಾನ್, ಪಾಕಾಲ್, ಚಂದಾಪುರ, ಮೇದಕ್, ಶಿಲಾರಕೋಟ, ಹಾಬಾಳ್, ತೆಲ್ಕೂರ, ಸೂರವಾರ, ಯಡಗಾ, ಕೋಲ್ಕುಂದಾ, ಕೋನಾಪುರ ಸೇರಿದಂತೆ ವಿವಿಧೆಡೆಗಳಲ್ಲಿ ಬೆಳೆಗಳು ಬೆಳೆದು ನಿಂತಿವೆ.

ಬಿತ್ತನೆ ಕಾರ್ಯ: ಶೇ 85ರಷ್ಟು ಪೂರ್ಣ:

ತಾಲ್ಲೂಕಿನಾದ್ಯಂತ ಮುಂಗಾರು ಬಿತ್ತನೆ ಶೇ 85ರಷ್ಟು ಪೂರ್ಣಗೊಂಡಿದೆ. ಹೆಸರು 8,212 ಹೆಕ್ಟೇರ್‌ ಪೈಕಿ 8,275 ಹೆಕ್ಟೇರ್‌ ಬಿತ್ತನೆಯಾಗಿದೆ. ಗುರಿಗಿಂತ ಅಧಿಕ ಸಂಖ್ಯೆಯಲ್ಲಿ ಈ ವರ್ಷ ಹೆಸರು ಬೆಳೆ ರೈತರು ಬಿತ್ತನೆ ಮಾಡಿದ್ದಾರೆ.

ಉದ್ದು 4,325 ಹೆಕ್ಟೇರ್‌ ಪೈಕಿ 4,305 ಬಿತ್ತನೆಯಾಗಿದೆ. ತೊಗರಿ 64,685 ಹೆಕ್ಟೇರ್‌ನಲ್ಲಿ 56,030 ಹೆಕ್ಟೇರ್‌ ಬಿತ್ತನೆಯಾಗಿದೆ. ಹತ್ತಿ 705 ಹೆಕ್ಟೇರ್‌ನಲ್ಲಿ 725 ಹೆಕ್ಟೇರ್‌ ಬಿತ್ತನೆಯಾಗಿದ್ದು, ಗುರಿಗಿಂತ ಅಧಿಕ ಸಂಖ್ಯೆಯಲ್ಲಿ ಹತ್ತಿ ಬಿತ್ತನೆಯಾಗಿದೆ. ಒಟ್ಟಾರೆ 2023-2024ನೇ ಸಾಲಿನಲ್ಲಿ 82,210 ಹೆಕ್ಟೇರ್‌ ಮುಂಗಾರು ಬಿತ್ತನೆಯ ಗುರಿಯಲ್ಲಿ 69,827 ಹೆಕ್ಟೇರ್‌ ಬಿತ್ತನೆ ಮಾಡಿದ್ದಾರೆ. ಶೇ 85ರಷ್ಟು ಬಿತ್ತನೆಯಾಗಿದ್ದು, ರೈತರು ಭತ್ತವನ್ನು ಅಗಷ್ಟ ತಿಂಗಳಲ್ಲಿ ನಾಟಿ ಮಾಡಲಿದ್ದಾರೆ’ ಎಂದು ಕೃಷಿ ಅಧಿಕಾರಿ ಪ್ರಕಾಶ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಸೇಡಂ, ಕೋಡ್ಲಾ, ಮುಧೋಳ ಮತ್ತು ಆಡಕಿ ರೈತ ಸಂಪರ್ಕ ಕೇಂದ್ರಗಳಲ್ಲಿರುವ ಕೃಷಿ ಅಧಿಕಾರಿಗಳು ರೈತರಿಗೆ ಸಕಾಲಕ್ಕೆ ಬೇಕಾದ ಮಾಹಿತಿ ಮತ್ತು ಸಲಹೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಬೀಜಗಳನ್ನು ಸರ್ಕಾರದ ನಿಯಮದನ್ವಯ ನೀಡಿದ್ದು, ಬೆಳೆಗಳು ಹೊಲಗಳಲ್ಲಿ ನಳನಳಿಸುತ್ತಿವೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ವೈ.ಎಲ್ ಹಂಪಣ್ಣ.

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಬೆಳೆಗಳು ಚೆನ್ನಾಗಿ ಬೆಳೆದಿವೆ. ರೈತರು ಹೊಲಗಳಲ್ಲಿ ನೀರು ನಿಲ್ಲದಂತೆ ಜಾಗೃತ ವಹಿಸಬೇಕು.
ವೈ.ಎಲ್. ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ
ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಸುರಿದಿದ್ದರಿಂದ ರೈತರು ಬೇಗನೆ ಬಿತ್ತನೆ ಮಾಡಿದ್ದಾರೆ. ಬೆಳೆಗೆ ತಕ್ಕಂತೆ ಮಳೆಯಾಗಿದ್ದರಿಂದ ಹೊಲಗಳಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತಿವೆ.
ನಾಗರಾಜ ನಂದೂರ, ಮುಖಂಡ
ಸೇಡಂ ತಾಲ್ಲೂಕು ಸಿಂಧನಮಡು ಗ್ರಾಮದ ಹೊಲವೊಂದರಲ್ಲಿ ನಳ ನಳಿಸುತ್ತಿರುವ ಹೆಸರು ಬೆಳೆ
ಸೇಡಂ ತಾಲ್ಲೂಕು ಸಿಂಧನಮಡು ಗ್ರಾಮದ ಹೊಲವೊಂದರಲ್ಲಿ ನಳ ನಳಿಸುತ್ತಿರುವ ಹೆಸರು ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT