ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teacher's Day 2024: ಸದೃಢ ದೇಶ ಕಟ್ಟುವ ಹೊಣೆಗಾರಿಕೆ ಶಿಕ್ಷಕರದ್ದು

ಸುರೇಖಾ ಜಗನ್ನಾಥ
Published : 5 ಸೆಪ್ಟೆಂಬರ್ 2024, 5:47 IST
Last Updated : 5 ಸೆಪ್ಟೆಂಬರ್ 2024, 5:47 IST
ಫಾಲೋ ಮಾಡಿ
Comments

ಕಲಬುರಗಿ: ಶಿಕ್ಷಕರು ಕಲಿಸಿದ್ದಕ್ಕಿಂತ ಮಕ್ಕಳಿಂದ ಕಲಿತದ್ದೇ ಹೆಚ್ಚು. ಮಕ್ಕಳು ನಮಗೆ ಋಣಿ ಆಗಿರುವುದಕ್ಕಿಂತ ನಾವೇ ಅವರಿಗೆ ಹೆಚ್ಚು ಋಣಿಯಾಗಿದ್ದೇವೆ. ತರಗತಿ ಕೋಣೆಗಳಲ್ಲಿ ಪ್ರಾಮಾಣಿಕ, ಪ್ರಜ್ಞಾಪೂರ್ವಕ ಮತ್ತು ದೂರದೃಷ್ಟಿಯೊಂದಿಗೆ ನಿತ್ಯ ಬೆರೆತು, ಅವರಿಗೆ ಕಲಿಸುತ್ತಲೇ ನಾವೂ ಕಲಿಯುವ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ.

ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ, ಬುದ್ಧಿವಾದ ಹೇಳಿ ಸುಂದರವಾದ ಮೂರ್ತಿಯನ್ನಾಗಿ ಮಾಡುವುದು ಶಿಕ್ಷಕರ ಕರ್ತವ್ಯ. ಮಕ್ಕಳಲ್ಲಿನ ನೈಸರ್ಗಿಕ ಕುತೂಹಲವನ್ನು ಪ್ರಚೋದಿಸಿ, ಪೋಷಿಸಿ, ಆಸಕ್ತಿ ಬೆಳೆಸಲು ತರಗತಿಯಲ್ಲಿ ಸೂಕ್ತ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಸೃಜನಾತ್ಮಕವಾದ ಚಟುವಟಿಕೆಗಳನ್ನು ಕೈಗೊಂಡು ಅರ್ಥೈಸಬೇಕಿದೆ. 

ಶಿಕ್ಷಕರಾದವರು ತರಗತಿಯ ಕಲಿಕೆಯಿಂದಾಚೆ ಪ್ರತಿ ಮಗುವಿನ ಹಿನ್ನೆಲೆಯನ್ನು ಅರಿತು ಮಮತೆ, ಕಾಳಜಿ, ಭಾವನಾತ್ಮಕವಾಗಿ, ಮಾನವೀಯವಾಗಿ ಸ್ಪಂದಿಸಬೇಕು. ಭವಿಷ್ಯದ ವ್ಯಕ್ತಿಗಳಾಗಿ ಬೆಳೆಸುವ ಹಾದಿಯಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಅಕ್ಕರೆಯ ಸಕ್ಕರೆಯನ್ನೂ ಹಂಚಬೇಕು. ತರಗತಿಯಲ್ಲಿ ಕೈಗೊಳ್ಳುವ ಚಟುವಟಿಕೆಗಳಿಂದ ಸಿಗುವ ಸಣ್ಣ–ಸಣ್ಣ ಖುಷಿಯನ್ನು ಹುಡುಕಿ ಆನಂದಿಸಿ, ಆಸ್ವಾದಿಸುತ್ತಾ ಸಾಗಿದರೆ ವೃತ್ತಿಯ ಘನತೆ ಇನ್ನಷ್ಟು ಹೆಚ್ಚಾಗುತ್ತದೆ.

ಶಿಕ್ಷಣ ಎಂಬುದು ವಾಣಿಜ್ಯವಾಗಿ ತನ್ನ ಅಸ್ತಿತ್ವ ಬದಲಾಯಿಸಿಕೊಂಡಂತೆ ಶಿಕ್ಷಕರ ಮುಂದೆ ಹೊಸ–ಹೊಸ ರೀತಿಯ ಸವಾಲುಗಳು ಎದುರಾಗಿ, ಜವಾಬ್ದಾರಿಗಳು ಸಹ ಹೆಗಲೇರಿವೆ. ದೇಶವನ್ನು ಕಟ್ಟುವ, ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯಿಂದ ನಾವ್ಯಾರೂ ಹಿಂದೆ ಸರಿಯುವಂತೆಯೂ ಇಲ್ಲ. ಯಾವುದೇ ರಂಗದಲ್ಲಿ ಮುಂದುವರಿಯಬೇಕಾದರೆ ಶಿಕ್ಷಕರ ನೆರವನ್ನಂತೂ ಕಡೆಗಣಿಸುವಂತೇ ಇಲ್ಲ. ಹೀಗಾಗಿ, ಬದಲಾದ ದಿನಮಾನಗಳಲ್ಲಿ ನಿಸರ್ಗ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಕುತೂಹಲ ಮೂಡಿಸುತ್ತಿವೆ. ಎಲ್ಲಾ ವಿದ್ಯಾಮಾನಗಳು ಮತ್ತು ತಂತ್ರಜ್ಞಾನ ನಾವಿನ್ಯತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅರ್ಥ ಮಾಡಿಕೊಳ್ಳುವಂತಹ ಪ್ರವೃತ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕಿದೆ.

ಕುತೂಹಲ, ಆಸಕ್ತಿ, ಸೂಕ್ಷ್ಮ ಅವಲೋಕನೆಯ ಮುಖೇನ ಮಕ್ಕಳು ತಮಗೆ ತಾವೇ ಪ್ರಶ್ನೆಗಳನ್ನು ಕೇಳಿಕೊಳ್ಳುವ, ಪ್ರಶ್ನೆಗಳಿಗೆ ತಾವೇ ಉತ್ತರ ಕಂಡುಕೊಳ್ಳುವಂತಹ ಹಾದಿ ತೋರಿಸಬೇಕಿದೆ. ಸೂಕ್ತ, ಸಮಂಜಸ, ಮಾಹಿತಿ ಸಂಗ್ರಹಣೆಗೆ ಅವಕಾಶ ನೀಡಿ, ತಮ್ಮದೇ ವಿಶ್ಲೇಷಣೆಯಿಂದ ಪ್ರಾಕಲ್ಪನೆ ಕಟ್ಟಿಕೊಳ್ಳುವ ಹಾಗೆ ಮಾಡಬೇಕಿದೆ. ನಿಸರ್ಗದ ಬಗ್ಗೆ ಪ್ರೀತಿ, ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಮೂಡಿಸಬೇಕಿದೆ.

ಸಮಾಜದಲ್ಲಿ ಅರಿವು ಮೂಡಿಸಲು ಪದ ಬಳಕೆಯ ವಿನಯ, ವಿನಮ್ರತೆ ಹಾಗೂ ವ್ಯಕ್ತಿ ಗೌರವದ ಕುರಿತು ತಿಳಿಸಿಕೊಡುವುದು ಅಷ್ಟೇ ಅವಶ್ಯವಿದೆ. ಶಿಕ್ಷಣದಿಂದ ದೊರೆತ ಆಲೋಚನಾ ಶಕ್ತಿಯ ಜ್ಞಾನ ಸಮಾಜಮುಖಿ ಬಳಕೆಯಾದಾಗ, ಭಾರತದ ಸಂವಿಧಾನದ ಅನುಚ್ಛೇದ 51 (ಎಚ್‌) ರಲ್ಲಿ ತಿಳಿಸಿರುವಂತೆ, ದೇಶದ ಪ್ರತಿ ನಾಗರಿಕರಲ್ಲೂ ವೈಜ್ಞಾನಿಕ ಮನೋಭಾವ, ಮಾನವೀಯತೆ, ತಿಳಿದುಕೊಳ್ಳುವ ಉತ್ಸಾಹ ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಿದಂತೆ ಆಗುತ್ತದೆ.

ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳುತ್ತಾ, ನಮ್ಮ ಮಕ್ಕಳಲ್ಲಿ ಅವರು ಜಗತ್ತನ್ನು ನೋಡಲು ಬೇಕಾಗಿರುವ ಬದಲಾವಣೆಯ ಬೆಳವಣಿಗೆಯ ದೃಷ್ಟಿಕೋನ ಬೆಳೆಸಲು ಬೇಕಾದ ವಾತಾವರಣವನ್ನು ನಾವು ನಮ್ಮ ತರಗತಿ ಹಂತದ ಕಲಿಕೆಯಲ್ಲಿ ನಿರ್ಮಾಣ ಮಾಡೋಣ.

ಸಮಾಜದ ಬದಲಾವಣೆಗೆ ನಮ್ಮಿಂದ ಸಾಧ್ಯವಾಗುವಂತಹ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡೋಣ. ಅಮೆರಿಕದ ಖ್ಯಾತ ಗಗನಯಾನಿ ನೀಲ್ ಆರ್ಮ್‌ಸ್ಟ್ರಾಂಗ್ ಹೇಳಿದಂತೆ, ‘ನಮ್ಮ ಈ ಸಣ್ಣ ಸಣ್ಣ ಹೆಜ್ಜೆಗಳೇ ಮಾನವಪ್ರಜಾತಿಗೆ ದೈತ್ಯ ಜಿಗಿತವಾಗಬಹುದು’ ಎಂಬಂತೆ ಸಣ್ಣ ಬದಲಾವಣೆ ತರಗತಿಯಿಂದಲೇ ಆರಂಭವಾಗಲಿ.

ಲೇಖಕರು: ಕಲಬುರಗಿ ಉತ್ತರ ವಲಯದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT