ಶನಿವಾರ, ಜನವರಿ 29, 2022
18 °C
ತುಂತುರು ನೀರಾವರಿ ಪರಿಕರ: 2 ವರ್ಷಗಳಿಂದ ಅಲೆಯುವ ರೈತ

ಗೌರ(ಬಿ) ಗ್ರಾಮದ ತಬರನ ಕತೆ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಗೌರ (ಬಿ) ಗ್ರಾಮದ  ರೈತ ನಿಂಬಣ್ಣ ಪೂಜಾರಿ ಅವರು ಸಹಾಯಧನದಲ್ಲಿ ತುಂತುರು ನೀರಾವರಿ ಪರಿಕರಗಳನ್ನು ಪಡೆದುಕೊಳ್ಳಲು ಅಫಜಲಪುರ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ 2 ವರ್ಷಗಳಿಂದ ಕಚೇರಿಗೆ  ಅಲೆದಾಡಿದರೂ ಪರಿಕರಗಳು ದೊರೆಯದ ಕಾರಣ ಹತಾಶರಾಗಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ 90 ಸಹಾಯಧನದಲ್ಲಿ ತುಂತುರು ನೀರಾವರಿ ಪರಿಕರಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ರೈತರು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 30 ಪೈಪುಗಳ ಒಂದು ಸೆಟ್‌ಗೆ ₹ 3,070ರಂತೆ  ಪೈಪ್‌ ನೀಡುವ ಕಂಪನಿಗೆ ರೈತರು ಚಲನ ಕಟ್ಟಬೇಕು. ನಂತರ ಕಂಪನಿಯವರು ರೈತರಿಗೆ ತುಂತುರು ನೀರಾವರಿ ಪರಿಕರಗಳನ್ನು ನೀಡುತ್ತಾರೆ .

’ನಾನು ಈಗಾಗಲೇ ತುಂತುರು ನೀರಾವರಿ ಯೋಜನೆಯಲ್ಲಿ ಪರಿಕರಗಳನ್ನು ಪಡೆದುಕೊಳ್ಳಲು ಎರಡು ಬಾರಿ ಅರ್ಜಿ ನೀಡಿದ್ದೇನೆ.  ನೀವು ನೀಡಿರುವ ಅರ್ಜಿ ಕಳೆದುಹೋಗಿದೆ. ಮತ್ತೊಮ್ಮೆ ಅರ್ಜಿ ಕೊಡಿ ಎಂದು ಹೇಳುತ್ತಾರೆ. ಈಗಾಗಲೇ ಎರಡು ಬಾರಿ ಅರ್ಜಿ ಸಲ್ಲಿಸಲು ಒಂದು ಸಾವಿರ ಖರ್ಚು ಮಾಡಿದ್ದೇನೆ. ಅದಕ್ಕಾಗಿ ಎಂಟತ್ತು ಬಾರಿ ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡಿದ್ದೇನೆ. ಏನೂ ಪ್ರಯೋಜನವಾಗಿಲ್ಲ‘ ಎಂದು ಹೇಳುತ್ತಾರೆ. ಈ ಕುರಿತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ವಿಚಾರಿಸಿದಾಗ ತುಂತುರು ನೀರಾವರಿ ಪರಿಕರಗಳು ಬರಲಿವೆ. ಅದಕ್ಕಾಗಿ ರೈತರಿಂದ ಅರ್ಜಿಗಳನ್ನು ಪಡೆಯಲು ಆರಂಭ ಮಾಡಿದ್ದೇವೆ ಎಂದು ಹೇಳುತ್ತಾರೆ .

ನೆರೆ ರಾಜ್ಯದ ರೈತರಿಗೆ ಮಾರಾಟ: ಮಹಾರಾಷ್ಟ್ರದಲ್ಲಿ ಕೃಷಿ ಕ್ಷೇತ್ರಕ್ಕೆ ಬೇಕಾಗುವ ಪರಿಕರಗಳು ಸಹಾಯಧನದಲ್ಲಿ ದೊರೆಯುತ್ತಿಲ್ಲ. ಅದಕ್ಕಾಗಿ ತಾಲ್ಲೂಕಿನ ರೈತರ ಮುಖಾಂತರ ಹೆಚ್ಚಿನ ಹಣ ನೀಡಿ ಕೃಷಿ ಪರಿಕರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ನಮ್ಮ ರೈತರಿಗೆ ಪರಿಕರಗಳು ದೊರೆಯುತ್ತಿಲ್ಲ ಎಂದು ರೈತರು ಹೇಳುತ್ತಾರೆ. ಕೃಷಿ ಪರಿಕರಗಳು ಮಹಾರಾಷ್ಟ್ರಕ್ಕೆ ದುಬಾರಿ ಬೆಲೆಗೆ ಮಾರಾಟ ಮಾಡುವ ಕುರಿತು ಸಾಕಷ್ಟು ಬಾರಿ ವಿವಿಧ ಸಂಘಟನೆಯವರು ಪ್ರತಿಭಟನೆ ಮಾಡಿದ್ದಾರೆ. ಅದರಿಂದಲೂ ಪ್ರಯೋಜನವಾಗಿಲ್ಲ.

ಸಹಾಯಧನದಲ್ಲಿ ನೀಡುತ್ತಿರುವ ತುಂತುರು ನೀರಾವರಿ ಪರಿಕರಗಳು ರಾಜಕೀಯ ಪ್ರಭಾವ ಇರುವ ವ್ಯಕ್ತಿಗಳಿಗೆ, ಅಧಿಕಾರಿಗಳ ಸಂಬಂಧಿಕರಿಗೆ ನಿರಂತರವಾಗಿ ಪೂರೈಕೆಯಾಗುತ್ತವೆ. ಈಗಾಗಲೇ ಎರಡು ವರ್ಷದಲ್ಲಿ ಎರಡು ಬಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರೇ ಸಾಮಾನ್ಯ ರೈತರಿಗೋಸ್ಕರ ತುಂತುರು ನೀರಾವರಿ ಪರಿಕರಗಳು ಬಂದಿವೆ. ಆದರೆ ಅವೆಲ್ಲವೂ ಬೇಕಾಬಿಟ್ಟಿಯಾಗಿ ದುಬಾರಿ ಬೆಲೆಗೆ ಮಾರಾಟವಾಗಿವೆ. ಕೆಲವೊಮ್ಮೆ ಪಕ್ಕದ ಮಹಾರಾಷ್ಟ್ರಕ್ಕೆ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಎಂದೂ ರೈತರು ಆರೋಪಿಸುತ್ತಾರೆ .

ತುಂತುರು ನೀರಾವರಿ ಪರಿಕರಗಳಿಗಾಗಿ ದಿನಾಲು ರೈತರು ರೈತ ಸಂಪರ್ಕಗಳಿಗೆ ಅಲೆದಾಟ ನಿರಂತರವಾಗಿ ನಡೆಯುತ್ತಲೇ ಇದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಇದರ ಬಗ್ಗೆ ಒಂದು ಸೂಕ್ತವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು. ಈಗಾಗಲೇ ತುಂತುರು ನೀರಾವರಿ ಪರಿಕರಗಳನ್ನು ಪಡೆಯದೇ ಇರುವ ರೈತರಿಗೆ ನ್ಯಾಯಯುತವಾಗಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ ಹಾಗೂ ರಮೇಶ್ ಪಾಟೀಲ್ ಹವಳಗಾ, ಗುರು ಚಾಂದಕೋಟೆ ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.