ಮಂಗಳವಾರ, ಏಪ್ರಿಲ್ 20, 2021
32 °C
ತಂಗಿ ಚುಡಾಯಿಸಿದವರನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ ಆರೋಪಿಗಳು

ಆಟೊ ಚಾಲಕನ ಕೊಲೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಕೊಟ್ಟರಗಾ ಗ್ರಾಮದ ಆಟೊ ಚಾಲಕ ಜಗನ್ನಾಥ ಬಸಗೊಂಡ ಅವರ ಕೊಲೆ ಪ್ರಕರಣದ ಐವರು ಪೈಕಿ ಮೂವರು ಕೊಲೆ ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು 48 ಗಂಟೆಯೊಳಗೆ ಬಂಧಿಸಿದ್ದಾರೆ.

ಕಲಬುರ್ಗಿ ನಗರದ ನಾಗರಾಜ ಬರಗಾಲಿ, ದತ್ತು ಹಡಪದ ಹಾಗೂ ಕೊಟ್ಟರಗಾ ಗ್ರಾಮದ ನಾಗರಾಜ ಅಂಬಲಗಿ ಬಂಧಿತರು. ಕೊಲೆಗೀಡಾದ ಜಗನ್ನಾಥ ಅವರ ಸಹೋದರಿ ಶಾಲೆಗೆ ಹೋಗುತ್ತಿದ್ದಾಗ ನಾಗರಾಜ ಅಂಬಲಗಿ, ಸಚಿನ ಸಸ್ತಾಪುರ, ನಾಗಪ್ಪ ಮಂಟೋಳಿ ಎಂಬುವರು ಪದೇಪದೇ ಚುಡಾಯಿಸುತ್ತಿದ್ದರು. ಇದನ್ನು ಪಶ್ನಿಸಿದ್ದಕ್ಕೆ ಮೂವರೂ ಆರೋಪಿಗಳು ಸೇರಿಕೊಂಡು ಜಗನ್ನಾಥ ಜತೆಗೆ ತಂಟೆ ತೆಗೆದಿದ್ದರು. ಅವರ ಕೊಲೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 10ರಂದು ಜಗನ್ನಾಥ ಅವರ ಆಟೊದಲ್ಲಿ ಹತ್ತಿ ಬಾಡಿಗೆಗೆ ಎಂದು ಕರೆದುಕೊಂಡು ಬಂದು ಆರೋಪಿಗಳು, ತಾಜ್ ಸುಲ್ತಾನಪುರದ ರೈಲು ನಿಲ್ದಾಣದ ಸಮೀಪದ ಜಮೀನೊಂದರಲ್ಲಿ ಕೊಲೆ ಮಾಡಿದ್ದರು. ಮಾರ್ಚ್‌ 11ರಂದು ಶವ ಪತ್ತೆಯಾಗಿತ್ತು. ಈ ಬಗ್ಗೆ ಜಗನ್ನಾಥ ಅವರ ತಾಯಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಡಿಸಿಪಿ ಡಿ.ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ ಹಾಗೂ ಸಿ ಉಪವಿಭಾಗದ ಎಸಿಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಭಾಸು ಚವ್ಹಾಣ, ಪಿಎಸ್‍ಐ ಕವಿತಾ ಚವ್ಹಾಣ ನೇತೃತ್ವದಲ್ಲಿ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ. ಕೊಲೆಗೆ ಬಳಸಿದ ಚಾಕು, ಆಟೊ ರಿಕ್ಷಾ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್‍ಐ ಎಂ.ಎ.ಬೇಗ್, ಸಿಬ್ಬಂದಿ ಶಿವರರಣಪ್ಪ ಮಂಗಲಗಿ, ಶಿವಶರಣಪ್ಪ ಬೋಚರೆ, ಅಂಬಾಜಿ, ಯಲ್ಲಪ್ಪ ತಳವಾರ, ಮಲ್ಲಿಕಾರ್ಜುನ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಪ್ರಶಾಂತ ದೇಶೆಟ್ಟಿ, ಅನಿಲ ರಾಠೋಡ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.