ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲ್‌ಗಳಿಗೆ ತೊಗರಿ ಕಾಳಿನ ಕೊರತೆ; ತೊಗರಿ ಬೇಳೆ ದರ ₹ 125

ಬೇಡಿಕೆಯಷ್ಟು ಇಲ್ಲ ಪೂರೈಕೆ
Last Updated 12 ಅಕ್ಟೋಬರ್ 2020, 22:03 IST
ಅಕ್ಷರ ಗಾತ್ರ

ಕಲಬುರ್ಗಿ: ತೊಗರಿಬೇಳೆ ದರ ದಿಢೀರ್‌‌ ಏರಿಕೆಯಾಗಿದ್ದು, ಕೆ.ಜಿ.ಗೆ ಸರಾಸರಿ ₹ 100 ಇದ್ದ ಬೆಲೆ ಈಗ ₹ 125 ಕ್ಕೆ ತಲುಪಿದೆ.

ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಮತ್ತು ತೊಗರಿಬೇಳೆ ಉತ್ಪಾದಿಸುವ ಕಲಬುರ್ಗಿಯಲ್ಲೇ ಕಿರುಕುಳ (ರೀಟೇಲ್) ವರ್ತಕರು ಕೆ.ಜಿ.ಗೆ ₹ 140ರ ವರೆಗೂ ಮಾರಾಟ ಮಾಡುತ್ತಿದ್ದಾರೆ.

ದಾಲ್‌ಮಿಲ್‌ಗಳಲ್ಲಿ ತೊಗರಿಕಾಳಿನ ದಾಸ್ತಾನು ಕಡಿಮೆ ಇರುವುದರಿಂದ ಬೇಡಿಕೆಯಷ್ಟು ಬೇಳೆಯ ಪೂರೈಕೆ ಇಲ್ಲ. ಪ್ರಸಕ್ತ ಹಂಗಾಮಿನ ತೊಗರಿಯ ರಾಶಿ ಡಿಸೆಂಬರ್‌ ವೇಳೆಗೆ ಆರಂಭಗೊಳ್ಳಲಿದೆ. ರೈತರ ಬಳಿಯೂ ತೊಗರಿಕಾಳಿನ ದಾಸ್ತಾನು ಇಲ್ಲ. ಸೋಮವಾರ ರಾಜ್ಯದ ಒಂಬತ್ತು ಎಪಿಎಂಸಿಗಳಿಗೆ ಒಟ್ಟಾರೆ 885 ಕ್ವಿಂಟಲ್‌ ತೊಗರಿಕಾಳು ಹಾಗೂ ಶಿವಮೊಗ್ಗ ಎಪಿಎಂಸಿಗೆ ಮಾತ್ರ ಕೇವಲ 40 ಕ್ವಿಂಟಲ್‌ ತೊಗರಿಬೇಳೆ ಆವಕವಾಗಿತ್ತು.

ಕಳೆದ ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್‌) ಮೂಲಕಬೆಂಬಲ ಬೆಲೆಯಡಿ ಪ್ರತಿ ರೈತರಿಂದಮೊದಲು 10 ಕ್ವಿಂಟಲ್‌‌, ನಂತರ ಹೆಚ್ಚುವರಿಯಾಗಿ 10 ಕ್ವಿಂಟಲ್‌ ಖರೀದಿಸಿದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹ 5,800 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹ 300ಸೇರಿ ₹ 6,100ರ ಬೆಂಬಲ ಬೆಲೆ ನೀಡಲಾಗಿತ್ತು. ಲಾಕ್‌ಡೌನ್,‌ ಮತ್ತಿತರ ಕಾರಣಗಳಿಂದಾಗಿ ಹೆಚ್ಚಿನ ರೈತರು ನಾಫೆಡ್‌ಗೆ ತೊಗರಿ ಮಾರಾಟ ಮಾಡಿದ್ದಾರೆ.

‘ಸರ್ಕಾರವೇ ಬೆಂಬಲ ಬೆಲೆಯಡಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದರಿಂದ ಮಿಲ್‌ಗಳವರ ಬಳಿ ತೊಗರಿಕಾಳಿನ ದಾಸ್ತಾನು ಇಲ್ಲ. ಮಳೆ ಮತ್ತಿತರ ಕಾರಣದಿಂದಾಗಿ ಕೆಲವೆಡೆ ಸಂಸ್ಕರಣೆಗೂ ಸಮಸ್ಯೆಯಾಗಿದೆ. ಹೀಗಾಗಿ ತೊಗರಿಬೇಳೆ ದರ ಪ್ರತಿ ಕೆಜಿಗೆ ₹125 ತಲುಪಿದೆ’ ಎಂದು ಕಲಬುರ್ಗಿಯ ನಾಡರ್‌ ದಾಲ್‌ಮಿಲ್‌ನ ರತನ್‌ ನಾಡರ್ ಹೇಳುತ್ತಾರೆ.

‘ಮಿಲ್‌ನವರು ಈಗ ಕೆ.ಜಿ.ಗೆ ₹88 ದರದಲ್ಲಿ ತೊಗರಿಕಾಳು ಖರೀದಿಸುತ್ತಿದ್ದೇವೆ. ತೊಗರಿಬೇಳೆಯ ಸಗಟು ದರ ₹110 ರಿಂದ ₹115 ಇದೆ. ನಾಫೆಡ್‌ನಲ್ಲಿ ದಾಸ್ತಾನಿರುವ ತೊಗರಿಕಾಳನ್ನು ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಮಾಡುವುದೊಂದೇ ಈ ಸಮಸ್ಯೆಗೆ ಪರಿಹಾರ’ ಎನ್ನುತ್ತಾರೆ ಗುಲಬರ್ಗಾ ದಾಲ್‌ಮಿಲ್ಲರ್ಸ್‌ಅಸೋಸಿಯೇಷನ್‌ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT