ಬುಧವಾರ, ಏಪ್ರಿಲ್ 14, 2021
23 °C
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ ಭರವಸೆ

ಕಲ್ಯಾಣ ಕರ್ನಾಟಕದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ: ಸಿ.ಪಿ. ಯೋಗೀಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ‘ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ತಿಳಿಸಿದರು.

ಚಿಂಚೋಳಿ ತಾಲ್ಲೂಕಿನ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ಡೀಮ್ಡ್ ಅರಣ್ಯವೆಂದು ಗುರುತಿಸಲಾಗಿರುವ ಚಂದ್ರಂಪಳ್ಳಿ ಸಮೀಪದ ಕೊಳ್ಳೂರಿನ 200 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆ ಸ್ವಾಧೀನಪಡಿಸಿಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಲಿದೆ. ಈ ಎಲ್ಲಾ ಕಾರ್ಯಗಳಿಗೆ ಸಂಬಂಧಿಸಿದಂತೆ ₹ 50 ಕೋಟಿಗೂ ಹೆಚ್ಚು ಅನುದಾನ ನೀಡಲಾಗುವುದು’ ಎಂದರು.

ಎತ್ತಿಪೋತೆ ಜಲಪಾತ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸಲು ₹2 ಕೋಟಿ ಮಂಜೂರು ಮಾಡಲಾಗುವುದು. ಯಾತ್ರಿ ನಿವಾಸ, ರೋಪ್‌ವೇ, ತೂಗು ಸೇತುವೆ, ವೀಕ್ಷಣಾ ಗೋಪುರ, ಕಬ್ಬಿಣದ ರೇಲಿಂಗ್ ಹಾಗೂ ಸಿಸಿ ರಸ್ತೆ ನಿರ್ಮಿಸಲಾಗುವುದು’ ಎಂದರು.

‘ಚಂದ್ರಂಪಳ್ಳಿಯಲ್ಲಿ ದೋಣಿ ವಿಹಾರ, ಜಲಕ್ರೀಡೆ, ಸಾಹಸ ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳು, ವಾಟರ್ ಮ್ಯುಸಿಯಂ, ಬೃಂದಾವನ ಗಾರ್ಡನ ಮಾದರಿಯ ಉದ್ಯಾನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರವಾಸೋದ್ಯಮ ಅಭಿವೃದ್ಧಿಗೆ ಕಲಬುರ್ಗಿಯಲ್ಲಿ ಹೆಲಿಪೋರ್ಟ್‌ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಾದ 5 ಎಕರೆ ಜಮೀನು ಸಂಸದ ಡಾ. ಉಮೇಶ ಜಾಧವ ಕೊಡಿಸುವರು. ಕಲಬುರ್ಗಿ ಹೆಲಿಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಚಂದ್ರಂಪಳ್ಳಿಯ ಜಂಗಲ್ ಲಾಡ್ಜ್‌ಗೆ ಬಂದಿಳಿಯಲು ಹೆಲಿಪ್ಯಾಡ್ ನಿರ್ಮಿಸಲಾಗುವುದು’ ಎಂದರು.

‘ಪ್ರವಾಸೋದ್ಯಮ ಚಟುವಟಿಕೆಗೆ ಈ ಹಿಂದೆ ವಾರ್ಷಿಕ ₹ 30ರಿಂದ ₹ 50 ಕೋಟಿ ಅನುದಾನ ನೀಡಲಾಗುತಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ₹500 ಕೋಟಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಜತೆಗೆ ಈ ಹಿಂದೆ ಬಿಡಗಡೆಯಾಗಿ ಬಳಕೆಯಾಗದ ₹ 600 ಕೋಟಿ ಅನುದಾನ ಇಲಾಖೆಯಲ್ಲಿದೆ. ಎಲ್ಲವನ್ನೂ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಸಂಸದ ಉಮೇಶ ಜಾಧವ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗ
ದಲ್ಲಿಯೇ ಮಾದರಿ ಪ್ರವಾಸಿ ತಾಣಗಳನ್ನಾಗಿ ಚಿಂಚೋಳಿ ತಾಲ್ಲೂಕಿನ ಜಲಪಾತಗಳು, ಜಲಾಶಯಗಳು ಅಭಿವೃದ್ಧಿ
ಪಡಿಸಬೇಕು ಇದಕ್ಕಾಗಿ ಕಾಲಮಿತಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.

ಶಾಸಕ ಡಾ. ಅವಿನಾಶ ಜಾಧವ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಗಡಂತಿ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಜಿ.ಪಂ. ಸದಸ್ಯ ಗೌತಮ ಪಾಟೀಲ, ಅರುಣಕುಮಾರ ಪವಾರ, ರಾಮಚಂದ್ರ ಜಾಧವ, ಪರಿಸರ ಅಧಿಕಾರಿ ಸಿ.ಎನ್ ಮಂಜಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ, ಸಂಜೀವಕುಮಾರ ಚವ್ಹಾಣ, ಲೋಕೋಪಯೋಗಿ ಇಲಾಖೆಯ ಇಇ ಕೃಷ್ಣಾ ಅಗ್ನಿಹೋತ್ರಿ, ಡಾ. ಆನಂದ ನಾಯಕ, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಇಒ ಅನಿಲ ರಾಠೋಡ್, ಶಿವಶರಣಪ್ಪ ಕೇಶ್ವಾರ, ಗುರುರಾಜ ಜೋಶಿ, ಗಿರಿರಾಜ ಸಜ್ಜನ, ರಾಹುಲ್ ಸಾದುರೆ, ಸಿದ್ಧಾರೂಢ, ಗಜಾನಂದ ಇದ್ದರು.

***

ನೃಪತುಂಗನ ನಾಡು ಮಳಖೇಡದಲ್ಲಿ ಪ್ರತಿ ವರ್ಷ ‘ರಾಷ್ಟ್ರಕೂಟರ ಉತ್ಸವ’ ಆಚರಿಸಲಾಗುವುದು ಮತ್ತು ಇದಕ್ಕೆ ಬೇಕಾಗುವ ಅನುದಾನವನ್ನು ಸಹ ನೀಡಲಾಗುವುದು

– ಸಿ.ಪಿ.ಯೋಗೀಶ್ವರ, ಪ್ರವಾಸೋದ್ಯಮ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು