ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತುಳಸಿ ಲಗ್ನಕ್ಕೆ ಭರ್ಜರಿ ಸಿದ್ಧತೆ

Last Updated 16 ನವೆಂಬರ್ 2021, 3:06 IST
ಅಕ್ಷರ ಗಾತ್ರ

ಕಲಬುರಗಿ: ಮಂಗಳವಾರ ಆಚರಿಸಲಾಗುವ ತುಳಸಿ ಲಗ್ನಕ್ಕಾಗಿ ಜಿಲ್ಲೆಯ ಎಲ್ಲೆಡೆ ಸೋಮವಾರವೇ ಭರದ ಸಿದ್ಧತೆಗಳು ನಡೆದವು. ಎಲ್ಲ ಮಾರುಕಟ್ಟೆಗಳಲ್ಲಿಯೂ ಪೂಜಾ ಸಾಮಗ್ರಿಗಳು, ಆಲಂಕಾರಿಕ ವಸ್ತುಗಳು, ಹೂವು– ಹಣ್ಣುಗಳ ಖರೀದ ಭರಾಟೆ ಜೋರಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನೆಲ್ಲಿಕಾಯಿಗೆ ಬೇಡಿಕೆ ಹೆಚ್ಚಿದ್ದರಿಂದ ದರ ನಾಲ್ಕು ಪಟ್ಟು ಹೆಚ್ಚಾಗಿತ್ತು.

ತುಳಸಿಯನ್ನು ‘ನಿತ್ಯ ಸುಮಂಗಲಿ’ ಎಂದು ‍ವೇದಗಳಲ್ಲಿ ಹೇಳಲಾಗಿದೆ. ಹಾಗಾಗಿ, ಹಿಂದೂ ಧರ್ಮೀಯರ ಮದುವೆ ಕಾರ್ಯಗಳಿಗೆ ತುಳಸಿ ಲಗ್ನವೇ ಪಲ್ಲವಿ. ಕಳೆದ ಎರಡು ವರ್ಷಗಳಿಂದ ಸಂಕ್ಷಿಪ್ತವಾಗಿ ಮಾಡಿದ್ದ ಈ ಪೂಜಾ ವಿಧಾನಕ್ಕೆ ಈ ಬಾರಿ ಎಲ್ಲಿಲ್ಲದ ಸಂಭ್ರಮ ಬಂದಿದೆ. ಸೋಮವಾರ ಬೆಳಿಗ್ಗೆಯಿಂದಲೇ ಮಹಿಳೆಯರು ಮನೆಗಳನ್ನು ತಳಿರು– ತೋರಣಗಳಿಂದ ಅಲಂಕರಿಸಿದರು. ಸಂಜೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟರು. ಬಾಳೆಕಂದು, ಕಬ್ಬು, ಚೆಂಡುಹೂವಿನ ದಂಟು, ವಿವಿಧ ಬಗೆಯ ಹೂ, ಮಾಲೆಗಳನ್ನು ಖರೀದಿಸಲು ಮುಗಿಬಿದ್ದರು.

ಆಲಂಕಾರಿಕ ಸಾಮಗ್ರಿಗಳಾದ ಚೆಂಡುಹೂ, ಕೊಬ್ಬರಿ, ಅರಿಸಿನ, ಕುಂಕುಮ, ನೆಲ್ಲಿಕಾಯಿ, ಹುಣಸೆಕಾಯಿ, ಕಾಡಿಗೆ, ಬಾಚಣಕಿ, ಕನ್ನಡಕ ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳ ಪೊಟ್ಟಣಗಳನ್ನು ವ್ಯಾಪಾರಿಗಳು ಸಿದ್ಧಪಡಿಸಿದ್ದರು. ಇನ್ನೊಂದೆಡೆ, ಉಡಿ ತುಂಬುವ ಸಾಮಗ್ರಿಗಳಾದ ವೀಳ್ಯದೆಲೆ, ಅಡಿಕೆ, ಅರಿಸಿನ ಬೋಟು, ಅಕ್ಕಿ, ಕೊಬ್ಬರಿಗುಂಡು, ಬಾದಾಮಿ, ಉತ್ತತ್ತಿ ಇರುವ ಪೊಟ್ಟಣಗಳೂ ಇದ್ದವು. ಪೂಜೆಯ ಪೊಟ್ಟಣ ₹ 50, ಉಡಿ ತುಂಬುವ ಸಾಮಗ್ರಿಗಳ ಪೊಟ್ಟಣ ₹ 30ರಂತೆ
ಮಾರಾಟವಾದವು.

ತುಳಸಿ ಲಗ್ನಕ್ಕೆ ನೆಲ್ಲಿಕಾಯಿ ಮಾರಾಟವೇ ವಿಶೇಷವಾದದ್ದು. ಕಾರ್ತಿಕ ಸೋಮವಾರದ ಮರುದಿನ ಬರುವ ತುಳಸಿ ಲಗ್ನಕ್ಕೆ, ನೆಲ್ಲಿಕಾಯಿ ಇಟ್ಟು ಎಣ್ಣೆದೀಪ ಹಚ್ಚಿದರೆ ಹೆಣ್ಣುಮಕ್ಕಳಿಗೆ ಶುಭ ಎಂಬ ನಂಬಿಕೆಯಿಂದ ನೆಲ್ಲಿಕಾಯಿ ಖರೀದಿಸುತ್ತಾರೆ. ಹಲವು ರೈತರು ನೆಲ್ಲಿಕಾಯಿ ಗೊಂಚಲುಗಳನ್ನು ತಂದು ಭರ್ಜರಿ ವ್ಯಾಪಾರ ಮಾಡಿಕೊಂಡರು.

ಲಗ್ನದ ಬಳಿಕ ಉಡಿ ತುಂಬುವ ಸಂಪ್ರದಾಯ. ಮುತ್ತೈದೆಯರನ್ನು ಕರೆದು, ಸಿಹಿ ತಿನ್ನಿಸಿ, ಮಂಗಳ ದ್ರವ್ಯಗಳಿರುವ ಪೊಟ್ಟಣವನ್ನು ಅವರ ಉಡಿಯಲ್ಲಿ ಹಾಕಿ ಹರಸುತ್ತಾರೆ. ಇದಕ್ಕಾಗಿಯೇ ವ್ಯಾಪಾರಿಗಳು ಹಲವು ಮಂಗಳದ್ರವ್ಯಗಳ ಪೊಟ್ಟಣಗಳನ್ನೂ ಮಾರಾಟಕ್ಕೆ ಇಟ್ಟಿದ್ದು ಕಂಡುಬಂತು. ಹೋಳಿಗೆ, ಕರಿಗಡಬು, ಭಜ್ಜಿ, ಕರಿದ ಮೆಣಸಿನಕಾಯಿ, ನೆಲ್ಲಿಕಾಯಿಯ ಉಪ್ಪಿನಕಾಯಿ ಈ ಹಬ್ಬದ ವಿಶೇಷ ಖಾದ್ಯಗಳು. ಇವುಗಳ ಸಿದ್ಧತೆಗೂ ಜನ ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT