‘ಭಕ್ತಿಯಿಂದ ಹೊರಬಂದು ದಾಸ ಸಾಹಿತ್ಯ ಓದಿ’

ಕಲಬುರ್ಗಿ: ‘ದಾಸ ಸಾಹಿತ್ಯ ಸಾರ್ವತ್ರಿಕ, ಸಾರ್ವಕಾಲಿಕ ಸಾಹಿತ್ಯವಾಗಿದೆ. ಆದರೆ, ಪ್ರಚಾರದ ಕೊರತೆಯಿಂದಾಗಿ ಪ್ರಪಂಚಕ್ಕೆ ಹೆಚ್ಚು ಪ್ರಚಾರವಾಗಲಿಲ್ಲ’ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅಭಿಪ್ರಾಯ ಪಟ್ಟರು.
ಹರಿದಾಸ ಸಾಹಿತ್ಯ, ಸಂಗೀತ ಪ್ರತಿಷ್ಠಾನ ಹಾಗೂ ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ನಗದರಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರು ರಚಿಸಿದ ‘ದಾಸಾಯಣ’ ಮತ್ತು ‘ಪುರಂದರ ದಾಸರ ಬಂಡಾಯ ಪ್ರಜ್ಞೆ; ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ದಾಸರು ಭಕ್ತಿ ಪಂಥದ ಜತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು. ಅಂದಿನ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ದಾಸರು ವಿರೋಧಿಸಿದ್ದಾರೆ. ಅಸ್ಪೃಶ್ಯತೆ, ಜಾತಿ ತಾರತಮ್ಯ ವಿರುದ್ಧ ಧ್ವನಿ ಎತ್ತಿದ್ದಾರೆ. ಜತೆಗೆ, ಎಲ್ಲ ಸಮುದಾಯಗಳಿಂದಲೂ ದಾಸರು ಬೆಳೆದುಬಂದಿದ್ದಾರೆ. ಹೀಗಾಗಿ, ದಾಸ ಸಾಹಿತ್ಯವನ್ನು ಯಾವುದೇ ಒಂದು ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು ಸಮಂಜಸವಲ್ಲ’ ಎಂದರು.
‘ದಾಸ ಸಾಹಿತ್ಯವು ಆರಂಭದಲ್ಲಿ ಕೀರ್ತನೆಗಳ ರೂಪದಲ್ಲಿ ರಚನೆಗೊಂಡಿದೆ. ನಂತರ ಭಜನೆ ರೂಪ ಪಡೆದಿದೆ. ಆಗ ದಾಸ ಸಾಹಿತ್ಯ ಇನ್ನಷ್ಟು ಜನಪ್ರಿಯವಾಯಿತು. ಕೆಲವರ್ಗಕ್ಕೆ ಸೀಮಿತವಾಗಿದ್ದ ದಾಸ ಸಾಹಿತ್ಯಕ್ಕೆ ಸಿರನೂರಕರ್ ಅವರು ಸಾಮಾಜಿಕ ರೂಪ ಕೊಟ್ಟಿದ್ದಾರೆ’ ಎಂದರು.
‘ದಾಸಾಯಣ’ ಕೃತಿ ಕುರಿತು ಶೈಲಜಾ ಕೊಪ್ಪರ ಹಾಗೂ ‘ಪುರಂದರ ದಾಸರ ಬಂಡಾಯ ಪ್ರಜ್ಞೆ’ ಕುರಿತು ಅನ್ನಪೂರ್ಣ ಗಂಗಾಣಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಹಿರಿಯ ಸಾಹಿತಿ ಸುಬ್ರಾವ್ ಕುಲಕರ್ಣಿ, ಬಿ.ಎಚ್.ನಿರಗುಡಿ, ಚಿ.ಸಿ.ನಿಂಗಣ್ಣ, ಕೆಪಿ.ಗಿರಿಧರ, ಮಹಿಪಾಲರೆಡ್ಡಿ ಮುನ್ನೂರ ಇದ್ದರು.
ಸಂಸ್ಕೃತಿ ಪ್ರಕಾಶನದಿಂದ ಲೇಖಕ ಶ್ರೀನಿವಾಸ ಸಿರನೂರಕರ್ ಅವರನ್ನು ಸನ್ಮಾನಿಸಲಾಯಿತು. ವ್ಯಾಸರಾಜ ಸಂತೆಕೆಲ್ಲೂರ ಪ್ರಾರ್ಥಿಸಿದರು. ವೆಂಕಟೇಶ ಮುದಗಲ್ ಸ್ವಾಗತಿಸಿದರು. ನಾರಾಯಣ ಕುಲಕರ್ಣಿ ನಿರೂಪಣೆ ಮಾಡಿದರು.
ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಅಗಲಿಕೆಗೆ ಎರಡು ನಿಮಿಷ ಮೌನಾಚರಣೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.