ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಮುದಾಯ ಆರೋಗ್ಯ ಕೇಂದ್ರ ಮಂಜೂರು

ಕೆಕೆಆರ್‌ಡಿಬಿಯ ಅಭಿವೃದ್ಧಿ ಕಾಮಗಾರಿ ಪ್ರಗತಿ ಕುರಿತು ಸಭೆ ನಡೆಸಿದ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ
Last Updated 14 ಮೇ 2021, 5:10 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿನ ಅರೋಗ್ಯ ವ್ಯವಸ್ಥೆ ಮತ್ತಷ್ಟು ಸುಧಾರಣೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಹಾಸಿಗೆಯ 2 ಸಮುದಾಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯಲ್ಲಿ‌ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳು ಮತ್ತು ಕೋವಿಡ್ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಕಲಬುರಗಿ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಆಸ್ಪತ್ರೆ ನಿರ್ಮಿಸಲಾಗುವುದು. ಇದಕ್ಕಾಗಿ ಮಂಡಳಿಯು ತಲಾ ₹ 5 ಕೋಟಿ ವೆಚ್ಚ ಮಾಡಲಿದೆ. ಒಂದು ವರ್ಷದಲ್ಲಿ ಇದನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಕೂಡಲೇ ನಿವೇಶನ ಗುರುತಿಸಿ ಮಾಹಿತಿ ನೀಡುವಂತೆ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ‌ ಲೋಖಂಡೆ ಅವರಿಗೆ ದತ್ತಾತ್ರೇಯ ಪಾಟೀಲ ಸೂಚಿಸಿದರು.

ಚಿತ್ತಾಪುರ, ವಾಡಿ, ಆಳಂದ, ಅಫಜಲಪೂರ, ಶಹಾಬಾದ ಸಮುದಾಯ, ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಇಲ್ಲಿ ಮಿನಿ ಆಮ್ಲಜನಕ ಪ್ಲಾಂಟ್ ಸ್ಥಾಪನೆಗೆ ಕ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿಯೂ ಆರೋಗ್ಯ ಸಂಸ್ಥೆಗಳು ಬಲವರ್ಧನೆಗೆ ಒತ್ತು ನೀಡಬೇಕಾಗಿರುವುದರಿಂದ ಕಲಬುರ್ಗಿ ತಾಲ್ಲೂಕಿನ ಹಿರೇಸಾವಳಗಿ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು. ಇದಕ್ಕೆ ಅಗತ್ಯಬಿದ್ದರೆ ಮಂಡಳಿಯಿಂದ ಅನುದಾನ‌ ನೀಡಲಾಗುವುದು ಎಂದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸ್ತುತ 40 ವೆಂಟಿಲೇಟರ್‌ಗಳಿದ್ದು, ಇಂದಿನ‌ ಪರಿಸ್ಥಿತಿಗೆ ಇವು ಸಾಕಾಗುವುದಿಲ್ಲ. ಇನ್ನೂ 25 ವೆಂಟಿಲೇಟರ್ ಖರೀದಿಗೆ ಪ್ರಸ್ತಾವ ಸಲ್ಲಿಸಿದಲ್ಲಿ ಮಂಡಳಿಯಿಂದ ಅನುದಾನ ನೀಡಲಾಗುವುದು. ಭವಿಷ್ಯದ ಮುಂದಾಲೋಚನೆಯಿಂದ ಜಿಮ್ಸ್‌ನಲ್ಲಿ ಪ್ರಸ್ತುತವಿರುವ ದ್ರವೀಕೃತ ಆಮ್ಲಜನಕ ಪ್ಲಾಂಟ್ ಜೊತೆಗೆ ಆಮ್ಲಜನಕ ಜನರೇಟರ್ ಘಟಕ ಸ್ಥಾಪನೆ ಮಾಡಲಾಗುವುದು. ಈ ಕುರಿತು ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಳಿಯು ಅನುಮೋದನೆ ನೀಡಲಿದೆ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರಿಗೆ ತಿಳಿಸಿದರು.

‘ಜಿಮ್ಸ್ ಆಸ್ಪತ್ರೆ ಸುತ್ತಮುತ್ತ ಗೋಡೆ ನಿರ್ಮಾಣಕ್ಕೆ ಪ್ರಸ್ತಾವ ಕೊಡಿ. ಕೊರೊನಾ ಸೋಂಕಿನಿಂದ ಜಿಲ್ಲೆ ತತ್ತರಿಸಿದ್ದು, ಜನರ ಜೀವ ಉಳಿಸಲು ಬೇಕಾಗಿರುವ ಅಗತ್ಯ ಉಪಕರಣಗಳ ಪಟ್ಟಿಯನ್ನು ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆಗಳು ಮಂಡಳಿಗೆ 2 ದಿನದಲ್ಲಿ ಪ್ರಸ್ತಾವ ಸಲ್ಲಿಸಬೇಕು. ಮಂಡಳಿಯೂ ಇದನ್ನು ಆದ್ಯತೆ ಮೇರೆಗೆ ಅನುಮೋದನೆ‌ ನೀಡಿ ಅನುದಾನ‌ ನೀಡಲಿದೆ’ ಎಂದರು.

ಕಲಬುರ್ಗಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಿಗೆ ಹರಡುತ್ತಿದ್ದು, ಇದರ ಕಡಿವಾಣಕ್ಕೆ ಪಾಲಿಕೆ ನಗರದಾದ್ಯಂತ ಸೋಡಿಯಂ ಹೈಪೊಕ್ಲೋರೈಡ್ ಸಿಂಪಡಣೆ‌ ಮಾಡಬೇಕು. ಇದಕ್ಕಾಗಿ ಅಗ್ನಿಶಾಮಕ ವಾಹನಗಳನ್ನು ಬಳಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ.ವಿನೋದ ಅವರಿಗೆ ಸೂಚಿಸಿದರು.

ಕಲಬುರ್ಗಿಯ ಪ್ರಶಾಂತ‌ ನಗರ, ಅಜಾದ್‌ ನಗರ ಹಾಗೂ ಕಪನೂರನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಶವಾಗಾರ ಕಾಮಗಾರಿಯನ್ನು 20 ದಿನದಲ್ಲಿ ಪೂರ್ಣಗೊಳಿಸುವಂತೆ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ ಅವರಿಗೆ ಸೂಚಿಸಿದರು.

373 ಕೋಟಿ ಬಿಡುಗಡೆ: 2021–22ನೇ ಸಾಲಿಗೆ ರಾಜ್ಯ ಸರ್ಕಾರ ಮಂಡಳಿಗೆ ₹ 1500 ಕೋಟಿ‌ ಅನುದಾನ ಘೋಷಿಸಿ ಮೊದಲನೇ‌ ಕಂತಿನ ರೂಪದಲ್ಲಿ ₹ 373 ಕೋಟಿ ಅನುದಾನ‌ ಬಿಡುಗಡೆ ಮಾಡಿದೆ. ಜಿಲ್ಲೆಯ ಕ್ರಿಯಾ ಯೋಜನೆ ಬೇಗ ಸಲ್ಲಿಸಿದಲ್ಲಿ ಅದಕ್ಕೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು‌ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ತಿಳಿಸಿದರು.

ಸಭೆಯಲ್ಲಿ ಡಿಸಿಪಿ ಡಿ. ಕಿಶೋರ ಬಾಬು, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ‌ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಇಎಸ್ಐಸಿ ಡೀನ್ ಡಾ.ಲೋಬೊ, ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸವ ಡಾ.ಅಂಬಾರಾಯ ರುದ್ರವಾಡಿ, ಆರ್‌ಸಿಎಚ್‌ಓ ಡಾ.ಪ್ರಭುಲಿಂಗ ಮಾನಕರ ಇದ್ದರು.

ಸಿ.ಟಿ. ಸ್ಕ್ಯಾನ್ ಕೇಂದ್ರ ಆರಂಭವಾಗಿಲ್ಲವೇಕೆ?

ಕೆಕೆಆರ್‌ಡಿಬಿಯಿಂದ ಜಿಮ್ಸ್ ಆಸ್ಪತ್ರೆಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಸಿ.ಟಿ ಸ್ಕ್ಯಾನ್ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಿದರೂ ಇದುವರೆಗೆ ಕೇಂದ್ರ ಏಕೆ ಸ್ಥಾಪನೆಯಾಗಿಲ್ಲ ಎಂದು ದತ್ತಾತ್ರೇಯ ಪಾಟೀಲ ಅವರು ಜಿಮ್ಸ್ ನಿರ್ದೇಶಕಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ. ಕವಿತಾ ಪಾಟೀಲ, ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಬಿಡ್ಡುದಾರರು 2015ರ ಉಪಕರಣಗಳನ್ನು ಇಂದಿನ ಮಾಡೆಲ್ ಎಂದು ತಪ್ಪಾಗಿ ನಮೂದಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದರು.

ಸೂಕ್ತವೆನಿಸದೇ ಇದ್ದಲ್ಲಿ ಈ ಟೆಂಡರ್ ರದ್ದುಗೊಳಿಸಿ ಮರು ಟೆಂಡರ್ ಕರೆದು ಬೇಗ ಕೇಂದ್ರ ಆರಂಭಿಸಿ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT