ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಅಭಿವೃದ್ಧಿ ಕಾಣದ ಉದ್ಯಾನಗಳು

Published 18 ಮಾರ್ಚ್ 2024, 4:53 IST
Last Updated 18 ಮಾರ್ಚ್ 2024, 4:53 IST
ಅಕ್ಷರ ಗಾತ್ರ

ಕಲಬುರಗಿ: ಉದ್ಯಾನಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧ ರಾದಿಯಾಗಿ ಎಲ್ಲರೂ ಉದ್ಯಾನದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹಿರಿಯರು ಬೆಳಗ್ಗೆ, ಸಂಜೆ ವಾಯುವಿಹಾರ ನಡೆಸಿದರೆ, ಮಕ್ಕಳು ಆಟವಾಡಲು ಹಾತೊರೆಯುತ್ತಿರುತ್ತಾರೆ.

‘ಪ್ರತಿ ಬಡಾವಣೆಗೆ ಒಂದು ಉದ್ಯಾನ’ ಎಂಬ ನಿಯಮ ರೂಪಿಸಿ ವರ್ಷಗಳೇ ಗತಿಸಿವೆ. ಆದರೆ, ನಗರದಲ್ಲಿ ಇಂದಿಗೂ ಹಲವು ಕಾಲೊನಿಗಳಲ್ಲಿ ಉದ್ಯಾನಗಳಿಲ್ಲ. ಸಾರ್ವಜನಿಕರಿಗೆ ತೆರೆಯಬೇಕಾದ ಉದ್ಯಾನಗಳಿಗಾಗಿ ನೂತನ ಬಡಾವಣೆಗಳಲ್ಲಿ ಶೇ 10ರಿಂದ 15ರಷ್ಟು ಭೂಮಿಯನ್ನು ಬಿಟ್ಟುಕೊಡಬೇಕು ಎಂದು ವಲಯ ನಿಯಮಗಳು ಹೇಳುತ್ತವೆ. ಆದರೆ ಕೆಲ ಬಡಾವಣೆಗಳು ಕೃಷಿಯೇತರ ಜಮೀನಾಗಿ ಪರಿವರ್ತನೆಗೊಂಡಿಲ್ಲ. ಹೀಗಾಗಿ ಕೆಲ ಬಡಾವಣೆಗಳಲ್ಲಿ ಉದ್ಯಾನಗಳಿಲ್ಲ’ ಎನ್ನುತ್ತಾರೆ ಮಹಾನಗರ ಪಾಲಿಕೆ ಉಪಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ್.

ಹಾಗಂತ ನಗರದಲ್ಲಿ ಉದ್ಯಾನಗಳಿಗೇನೂ ಕೊರತೆಯಿಲ್ಲ. ನಗರದಲ್ಲಿ ಸುಮಾರು 350ಕ್ಕೂ ಹೆಚ್ಚು ಉದ್ಯಾನಗಳಿವೆ. ಆದರೆ ನಗರದ ಜಗತ್ ವೃತ್ತದ ಸಾರ್ವಜನಿಕ ಉದ್ಯಾನವನ ಹೊರತುಪಡಿಸಿದರೆ ಉಳಿದೆಡೆ ಸಮರ್ಪಕ ನಿರ್ವಹಣೆಯಿಲ್ಲ. ಕಾಂಪೌಂಡ್‌, ನೀರಿನ ಸೌಲಭ್ಯ, ಆಸನಗಳ ಕೊರತೆ, ಮುರಿದ ಮಕ್ಕಳ ಆಟಿಕೆ ಸಾಮಾನುಗಳು ಕಂಡುಬರುತ್ತಿವೆ.

ಕಲಬುರಗಿ ನಗರ ಮಾತ್ರವಲ್ಲದೆ ಜಿಲ್ಲೆಯ ಹಲವು ಪಟ್ಟಣಗಳಲ್ಲಿ ಉದ್ಯಾನಗಳಿಲ್ಲ. ಯಡ್ರಾಮಿ ತಾಲ್ಲೂಕು ಆಗಿ 5 ವರ್ಷ ಕಳೆದರೂ ಪಟ್ಟಣದಲ್ಲಿ ಉದ್ಯಾನ ಇಲ್ಲ. ಕಮಲಾಪುರ, ಕಾಳಗಿಯದ್ದೂ ಅದೇ ಕತೆ. ಇಲ್ಲಿನ ನಿವಾಸಿಗಳು ಮನೆಗಳ ಬಳಿಯೇ ಓಡಾಡುತ್ತಾರೆ, ವಿಶ್ರಮಿಸುತ್ತಾರೆ. ವಿಶ್ರಾಂತಿಗೆ ಮರಗಳ ನೆರಳನ್ನೇ ನೆಚ್ಚಿಕೊಳ್ಳಬೇಕಿದೆ.

ಜೇವರ್ಗಿಯಲ್ಲಿ ಒತ್ತುವರಿ: ‘ಜೇವರ್ಗಿ ಪಟ್ಟಣದಲ್ಲಿ 88 ಉದ್ಯಾನಗಳಿವೆ. ಅದರಲ್ಲಿ 20 ಉದ್ಯಾನಗಳು ಸುಸ್ಥಿತಿಯಲ್ಲಿವೆ. 25ಕ್ಕೂ ಅಧಿಕ ಉದ್ಯಾನಗಳಲ್ಲಿ ಕುಡಿಯುವ ನೀರು, ನೆರಳು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ 10ಕ್ಕೂ ಅಧಿಕ ಉದ್ಯಾನಗಳಿಗೆ ಮೂಲ ಸೌಕರ್ಯವಿಲ್ಲ. ಇನ್ನೂ ಕೆಲ ಉದ್ಯಾನಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಆದರೆ ಸುಮಾರು ಉದ್ಯಾನಗಳು ಒತ್ತುವರಿಯಾಗಿವೆ’ ಎಂದು ಪೂರಸಭೆ ಮುಖ್ಯ ಅಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದ್ದಾರೆ.

ಉದ್ಯಾನ ವಂಚಿತ ಚಿತ್ತಾಪುರ: ಸ್ಥಳೀಯ ಪುರಸಭೆಯಲ್ಲಿ 23 ವಾರ್ಡುಗಳಿವೆ. ಆದರೆ, ಇಂದಿಗೂ ಒಂದೇ ಒಂದು ವಾರ್ಡಿನಲ್ಲಿ ಸಾರ್ವಜನಿಕರಿಗಾಗಿ ಸುಸಜ್ಜಿತ ಉದ್ಯಾನ ಇಲ್ಲ. ವಿವಿಧ ಬಡಾವಣೆಗಳಲ್ಲಿ ಒಟ್ಟು 19 ಸ್ಥಳಗಳನ್ನು ಉದ್ಯಾನಕ್ಕಾಗಿ ಮೀಸಲಿರಿಸಲಾಗಿದೆ. ಒಂದಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿದೆ. ಉದ್ಯಾನ ಮಾತ್ರ ಅಭಿವೃದ್ಧಿಪಡಿಸಿಲ್ಲ. ಹೂವಿನ ಗಿಡಗಳು, ಹುಲ್ಲುಹಾಸು ಇರುವ ಉದ್ಯಾನ ಇಲ್ಲದೇ ಪಟ್ಟಣದ ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ದಾಖಲೆಗೆ ಸೀಮಿತ: ಆಳಂದ ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೀಸಲಿರಿಸಿದ ಉದ್ಯಾನಗಳು ಪುರಸಭೆ ದಾಖಲೆಯಲ್ಲಿ ಮಾತ್ರ ಉಳಿದುಕೊಂಡಿವೆ. ಯಾವೊಂದು ಉದ್ಯಾನವನ್ನೂ ಅಭಿವೃದ್ಧಿಪಡಿಸುವಲ್ಲಿ ಸ್ಥಳೀಯ ಪುರಸಭೆ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ ಕೆಲ ಉದ್ಯಾನಗಳನ್ನು ಸುತ್ತಲಿನ ಜನರು ಅತಿಕ್ರಮಣ ಮಾಡಿದ್ದಾರೆ.

ಆಳಂದದಲ್ಲಿ ಹೊಸ ಬಡಾವಣೆ ರಚನೆ ಸಂದರ್ಭದಲ್ಲಿ ಒಟ್ಟು 34 ಉದ್ಯಾನಗಳ ನಿರ್ಮಾಣಕ್ಕಾಗಿ ಜಾಗ ಮೀಸಲಿಡಲಾಗಿದೆ. ಮಹಾದೇವ ಕಾಲೊನಿಯಲ್ಲಿನ ಉದ್ಯಾನದಲ್ಲಿ ಕೆಲ ಗಿಡಮರ ಬೆಳೆಸಲಾಗಿದೆ. ಐದು ಆಸನ ವ್ಯವಸ್ಥೆ ಇದೆ. ಒಟ್ಟು 8 ಉದ್ಯಾನಗಳಿಗೆ ಮಾತ್ರ ಕಾಂಪೌಂಡ್‌ ಹಾಕಲಾಗಿದೆ. ಉಳಿದ 28 ಉದ್ಯಾನಗಳಿಗೆ ಕಾಂಪೌಂಡ್‌ ಸಹ ಇಲ್ಲ. ಸಂಗಾ ಕಾಲೊನಿಯಲ್ಲಿನ ಉದ್ಯಾನವನ್ನು ಪುರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಬಳಕೆ ಮಾಡಲಾಗುತ್ತಿದೆ. ಕೆಲವು ಲೇಔಟ್‌ಗಳಲ್ಲಿನ ಉದ್ಯಾನಗಳನ್ನು ನೆರೆಹೊರೆಯವರು ಜಾನುವಾರು ಕಟ್ಟಲು, ಕಟ್ಟಿಗೆ, ಕಲ್ಲು ಮತ್ತಿತರ ಸಾಮಗ್ರಿ ಹಾಕಿರುವುದು ಕಂಡು ಬರುತ್ತಿದೆ.

ಅತಿಕ್ರಮಣ: ಅಫಜಲಪುರದಲ್ಲಿ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲೂ ಉದ್ಯಾನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳು ನಿರಂತರವಾಗಿ ಒತ್ತುವರಿಯಾಗುತ್ತಿದ್ದು ಕೆಲವೇ ವರ್ಷಗಳಲ್ಲಿ ಮಾಯವಾಗುತ್ತವೆ. ಇದಕ್ಕೆ ಪುರಸಭೆಯವರ ನಿರ್ಲಕ್ಷವೇ ಕಾರಣ ಎಂದು ನಾಗರಿಕರು ದೂರುತ್ತಾರೆ. ಉದ್ಯಾನಗಳಿಗೆ ಮೀಸಲಾಗಿಟ್ಟ ನಿವೇಶನಗಳನ್ನ ಹಂತ ಹಂತವಾಗಿ ಬಲಾಢ್ಯರು ಅತಿಕ್ರಮಣ ಮಾಡಿಕೊಂಡಿದ್ದು ಮನೆಗಳನ್ನು ಕಟ್ಟಿದ್ದಾರೆ. ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 36 ಉದ್ಯಾನಗಳಿವೆ. ಈ ಪೈಕಿ 32 ಉದ್ಯಾನಗಳ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. 4 ಉದ್ಯಾನ ಮಾತ್ರ ಸಾರ್ವಜನಿಕರಿಗೆ ಅನುಕೂಲವಾಗಿವೆ. ಎಲ್ಲಾ ಉದ್ಯಾನಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಪಟ್ಟಣದ ಚಂದ್ರಶೇಖರ ಕರಜಿಗಿ ಹಾಗೂ ಶ್ರೀಮಂತ ಬಿರಾದಾರ ಆಗ್ರಹಿಸಿದರು.

ಜೇವರ್ಗಿಯಲ್ಲಿ ಪಾಳು ಬಿದ್ದಿರುವ ಉದ್ಯಾನ
ಜೇವರ್ಗಿಯಲ್ಲಿ ಪಾಳು ಬಿದ್ದಿರುವ ಉದ್ಯಾನ
ಚಿಂಚೋಳಿ ತಾಲ್ಲೂಕಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಪಾಳು ಬಿದ್ದಿರುವುದು
ಚಿಂಚೋಳಿ ತಾಲ್ಲೂಕಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಪಾಳು ಬಿದ್ದಿರುವುದು
ಆಳಂದದ ಸಂಗಾ ಕಾಲೊನಿಯಲ್ಲಿನ ಉದ್ಯಾನವನ್ನು ಪುರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಬಳಸುತ್ತಿರುವುದು
ಆಳಂದದ ಸಂಗಾ ಕಾಲೊನಿಯಲ್ಲಿನ ಉದ್ಯಾನವನ್ನು ಪುರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಬಳಸುತ್ತಿರುವುದು
ಕಲಬುರಗಿಯ ಗೋದುತಾಯಿ ನಗರ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿ ಮುರಿದು ಬಿದ್ದಿರುವುದು
ಕಲಬುರಗಿಯ ಗೋದುತಾಯಿ ನಗರ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿ ಮುರಿದು ಬಿದ್ದಿರುವುದು
ಅಫಜಲಪುರದ ವಾರ್ಡ್‌ ನಂ.15ರಲ್ಲಿ ನಿರ್ಮಾಣವಾದ ಉದ್ಯಾನ
ಅಫಜಲಪುರದ ವಾರ್ಡ್‌ ನಂ.15ರಲ್ಲಿ ನಿರ್ಮಾಣವಾದ ಉದ್ಯಾನ

ರಸ್ತೆ ಹೊಲಗಳೇ ಉದ್ಯಾನ!

ಚಿತ್ತಾಪುರ ಪಟ್ಟಣ ಸಂಪರ್ಕಿಸುವ ರಾವೂರು ರಸ್ತೆ ಯರಗಲ್ ಭಾಗೋಡಿ ಮಳಖೇಡ ಮೊಗಲಾ ನಾಗಾವಿ ಯಲ್ಲಮ್ಮ ದೇವಸ್ಥಾನದ ರಸ್ತೆ ಕರದಾಳ ರಸ್ತೆ ಹೀಗೆ ವಿವಿಧ ರಸ್ತೆಗಳಲ್ಲಿ ಬೆಳಿಗ್ಗೆ ಸಾರ್ವಜನಿಕರು ವಾಕಿಂಗ್ ಜಾಗಿಂಗ್ ರನ್ನಿಂಗ್ ವ್ಯಾಯಾಮ ಮಾಡುವ ದೃಶ್ಯ ಕಾಣುತ್ತದೆ. ಜತೆಗೆ ರಸ್ತೆ ಪಕ್ಕದಲ್ಲಿನ ಹೊಲಗಳಲ್ಲಿ ಹೋಗಿ ಕೂಡುವುದು ಕಂಡು ಬರುತ್ತದೆ. ಪಟ್ಟಣದ ಹೊರಗಡೆಯ ರಸ್ತೆಗಳಲ್ಲಿ ಹೋಗಬೇಕಾಗಿದ್ದರಿಂದ ಹೆಚ್ಚಾಗಿ ಮಹಿಳೆಯರು ಯುವತಿಯರು ವಾಯುವಿಹಾರಕ್ಕೆ ಮನೆಯ ತಾರಸಿ ಮೇಲೆ ತಿರುಗಾಡುವ ಸ್ಥಿತಿಯಿದೆ.

ಉದ್ಯಾನಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಬೇಕು. ನಗರ ಅರಣ್ಯೀಕರಣ ಯೋಜನೆಗೆ ₹1 ಕೋಟಿ ಅಮೃತ ಯೋಜನೆಯಡಿ ₹ 35 ಲಕ್ಷದಲ್ಲಿ 5 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ
ಆರ್‌.ಪಿ.ಜಾಧವ್ ಉಪ ಆಯುಕ್ತ (ಅಭಿವೃದ್ಧಿ) ಮಹಾನಗರ ಪಾಲಿಕೆ
ಚಿತ್ತಾಪುರದಲ್ಲಿ ವೈಷ್ಣವಿ ಮಾರ್ಟ್ ಎದುರುಗಡೆಯ ಉದ್ಯಾನ ಅಭಿವೃದ್ಧಿಗಾಗಿ ₹15 ಲಕ್ಷ ಅನುದಾನ ಮೀಸಲಿಡಲಾಗಿದೆ. ಟೆಂಡರ್ ಕರೆದಿದ್ದು ಕಾಮಗಾರಿ ಪ್ರಾರಂಭಿಸಬೇಕಾಗಿದೆ
ಮನೋಜಕುಮಾರ ಗುರಿಕಾರ ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ
ಪುರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಇಲ್ಲಿವರೆಗೆ ಪಟ್ಟಣದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗಿಲ್ಲ. ಗಿಡ ನೆಡುವುದಿರಲಿ ನಿಷ್ಠ ಸ್ವಚ್ಛತೆ ಕೈಗೊಳ್ಳುವ ಕಾಳಜಿಯೂ ಪುರಸಭೆಗೆ ಇಲ್ಲ
ಪ್ರಕಾಶ ಕಾಳೆ ಆಳಂದ ನಿವಾಸಿ
ಪುರಸಭೆಯ ವ್ಯಾಪ್ತಿಯ ನಾಲ್ಕು ಉದ್ಯಾನಗಳನ್ನು ಸುಧಾರಣೆ ಮಾಡಲಾಗಿದೆ. ಇನ್ನುಳಿದ ಉದ್ಯಾನಗಳ ದುರಸ್ತಿ ಕಾರ್ಯ ಮಾಡಲಾಗುವುದು. ಸಾರ್ವಜನಿಕರೂ ಈ ಬಗ್ಗೆ ಕಾಳಜಿ ವಹಿಸಬೇಕು
ವಿಜಯ ಮಹಾಂತೇಶ ಹೂಗಾರ ಅಫಜಲಪುರ ಪುರಸಭೆ ಮುಖ್ಯಾಧಿಕಾರಿ
ನಮ್ಮ ಗೋದುತಾಯಿ ಉದ್ಯಾನವನದಲ್ಲಿ ಆಟಿಗೆ ಸಾಮಾನುಗಳೆಲ್ಲಾ ಮುರಿದಿವೆ. ನಾವು ಆಟ ಆಡಬೇಕೆಂದರೆ ಮನೆಯಿಂದ ಸಾಮಗ್ರಿ ತರಬೇಕು
ಈಶ್ವರ ವಿದ್ಯಾರ್ಥಿ

ಚಿಂಚೋಳಿಯಲ್ಲಿ ಅರಣ್ಯರೋದನ

ಚಿಂಚೋಳಿ ತಾಲ್ಲೂಕಿನಲ್ಲಿ ನೈಸರ್ಗಿಕ ಅರಣ್ಯ ಪ್ರದೇಶ ಬಿಟ್ಟರೆ ಉದ್ಯಾನವನವೇ ಇಲ್ಲ. ಇಲ್ಲಿನ ಜನರಿಗೆ ಉದ್ಯಾನವನ ಮರೀಚಿಕೆಯಾಗಿದೆ. ಚಂದಾಪುರದಲ್ಲಿ ವೀರೇಂದ್ರ ಪಾಟೀಲ ಉದ್ಯಾನವನವಿದ್ದು ಇದರಲ್ಲಿ ಖಾಸಗಿ ಜಮೀನು ಬರುತ್ತಿರುವುದರಿಂದ ಕೆಲವರು ಆಕ್ಷೇಪಣೆಯಿಂದಾಗಿ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ಇದಲ್ಲದೇ ಹೌಸಿಂಗ್‌ ಬೋರ್ಡ್‌ ಕಾಲೊನಿ ಸೇರಿದಂತೆ ಹಲವು ಬಡಾವಣೆಗಳಲ್ಲಿ  ಉದ್ಯಾನವನಕ್ಕೆ ಸ್ಥಳ ಮೀಸಲಿರಿಸಿದ್ದಾರೆ. ಆದರೆ ಅಲ್ಲಿ ಗಿಡಗಳನ್ನು ಬೆಳೆಸಿಲ್ಲ. ಪೋಲಕಪಳ್ಳಿ ಬಳಿ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಅಪೂರ್ಣವಾಗಿದೆ. ಚಂದ್ರಂಪಳ್ಳಿಯಲ್ಲಿ ಸಸ್ಯೋದ್ಯಾನ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ‌ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ₹ 5 ಕೋಟಿ ಮಂಜೂರಾಗಿತ್ತು. ಅನುದಾನ ಇನ್ನೂ ಬಂದಿಲ್ಲ. ಗೊಟ್ಟಂಗೊಟ್ಟದಲ್ಲಿ ದಶಕದ ಹಿಂದೆ ದೈವಿವನ ನಿರ್ಮಿಸಲಾಗಿದೆ. ನೀರಿನ ಕೊರತೆಯಿಂದ ಬಸವಳಿದಿದೆ.

45 ಎಕರೆ ವಿಸ್ತೀರ್ಣದ ಉದ್ಯಾನ

ಕಲಬುರಗಿಯ ಸಾರ್ವಜನಿಕ ಉದ್ಯಾನವನ 45 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು ಇಲ್ಲಿ ನೀರಿಗಾಗಿ 6 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ನಗರದಲ್ಲಿ ಹುಲ್ಲುಹಾಸು ಇದೊಂದೇ ಉದ್ಯಾನದಲ್ಲಿ ಕಂಡುಬರುತ್ತದೆ. ನಿತ್ಯ ನೂರಾರು ಜನ ಈ ಉದ್ಯಾನಕ್ಕೆ ಭೇಟಿ ನೀಡಿ ವಿಹರಿಸುತ್ತಾರೆ. ಆದರೆ ಡೈನೋಸಾರ್‌ ಆಕೃತಿ ಬಳಿಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್‌ ತಂತಿ ಕೈಗೆ ತಾಗುವಂತಿದೆ. ಆಟವಾಡಲು ಬರುವ ಮಕ್ಕಳು ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಐದಾರು ಶೌಚಾಲಯ ಕಟ್ಟಡಗಳಿದ್ದರೂ ಅದರಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಮುಚ್ಚಿಯೇ ಇರುತ್ತವೆ.

ಪೂರಕ ಮಾಹಿತಿ: ಸಂಜಯ ಪಾಟೀಲ, ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ವೆಂಕಟೇಶ ಹರವಾಳ, ಮಲ್ಲಿಕಾರ್ಜುನ ಎಂ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT