ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಇಎಸ್‌ಐ ಆಸ್ಪತ್ರೆಯನ್ನು 'ಏಮ್ಸ್‌' ಮಟ್ಟಕ್ಕೆ ಮೇಲ್ದರ್ಗೇರಿಸುವಂತೆ ಒತ್ತಾಯ

Published 27 ಜೂನ್ 2023, 12:58 IST
Last Updated 27 ಜೂನ್ 2023, 12:58 IST
ಅಕ್ಷರ ಗಾತ್ರ

ಕಲಬುರಗಿ: ‘ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ದೇಶದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಕಲಬುರಗಿಯ ಇಎಸ್‌ಐ ಆಸ್ಪತ್ರೆಯನ್ನು ‘ಏಮ್ಸ್‌’ ಮಟ್ಟಕ್ಕೆ ಮೇಲ್ದರ್ಗೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಇಎಸ್ಐ ಆಸ್ಪತ್ರೆ ದಿನಗೂಲಿ ಕಾರ್ಮಿಕರ ಸಂಘ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಭಗವಾನ.ಎ.ಭೋವಿ, ಕಲಬುರಗಿಯ ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್‌ ಆಗಿ ಪರಿವರ್ತಿಸಿದರೆ, ಕಟ್ಟಡ ನಿರ್ಮಾಣಕ್ಕಾಗಿ ವೆಚ್ಚ ಮಾಡುವ ಸಾವಿರಾರು ಕೋಟಿ ಸರ್ಕಾರಕ್ಕೆ ಉಳಿತಾಯ ಆಗಲಿದೆ. ಅತಿದೊಡ್ಡ ಆಸ್ಪತ್ರೆಯ ಕಟ್ಟಡಗಳು ಈಗ ಕೇವಲ ಶೇ 40 ಭಾಗ ಬಳಕೆಯಾಗುತ್ತಿದೆ. ಶೇ 60ರಷ್ಟು ಕಟ್ಟಡ ಖಾಲಿ ಇದೆ. ಅಲ್ಲದೇ ಇಲ್ಲಿ ಮಹತ್ವದ ಆಪರೇಷನ್‌ಗಳು ನಡೆಯುತ್ತಿಲ್ಲ. ಹಾಗಾಗಿ ಏಮ್ಸ್‌ ಆಗಿ ಮೇಲ್ದರ್ಗೇರಿಸಿದರೆ ಇಡೀ ಕಲ್ಯಾಣ ಕರ್ನಾಟಕದ ಭಾಗವಲ್ಲದೇ ಇಡೀ ರಾಜ್ಯದ ಜನರಿಗೆ ಎಲ್ಲ ಬಗೆಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೂ ಇಲ್ಲಿ ಅವಕಾಶ ದೊರಕಲಿದೆ. ಅಲ್ಲದೇ 15–20 ಸಾವಿರ ಕಾರ್ಮಿಕರಿಗೆ ಉದ್ಯೋಗವೂ ಸಿಗಲಿದೆ ಎಂದು ಹೇಳಿದರು.

ಈ ಭಾಗದ ಸಂಸದರಾದ ಡಾ. ಉಮೇಶ ಜಾಧವ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜುಲೈ 30ರ ಒಳಗೆ ಏಮ್ಸ್‌ ಸ್ಥಾಪನೆಯ ಘೋಷಣೆ ಮಾಡಿಸಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಎಸ್‌ಐ ಆಸ್ಪತ್ರೆ ಸುಧಾರಣೆ ಮಾಡಲು ಎಲ್ಲಾ ತರಹದ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಸೆಕ್ಯೂರಿಟಿ ಗಾರ್ಡ್‌ಗಳಾಗಿ ಈಗ ನಿವೃತ್ತ ಯೋಧರನ್ನು ನೇಮಿಸಿಕೊಂಡಿದ್ದು, ಇದರ ಬದಲಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಸ್ಥಳೀಯ ಸದೃಢ ಪುರುಷ ಹಾಗೂ ಮಹಿಳೆಯರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದತ್ತು ಭೋವಿ, ಸುಭಾಷ ಭೋವಿ ತುಕಾರಂ ಭೋವಿ, ದೇವಪ್ಪ ಜಮಾದಾರ, ಭೀಮಷ್ಯಾ ಪಟ್ಟೇದಾರ, ಎಂ.ಡಿ.ಗೌಸ್‌, ಗಾಲಿದ್‌ ಪಟೇಲ್‌ ಹಾಜರಿದ್ದರು.

‘ಆಸ್ಪತ್ರೆ ಡೀನ್‌ ವಜಾಗೊಳಿಸಿ’

ಇಎಸ್‌ಐ ಆಸ್ಪತ್ರೆಯಲ್ಲಿ ಅಗತ್ಯ ಸಂಖ್ಯೆಯ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೇ ಕಾರ್ಮಿಕರ ಓವರ್ ಟೈಮ್‌ ಕೆಲಸ ತೋರಿಸಿ ಕೆಲಸ ಮಾಡದ ಕಾರ್ಮಿಕರ ಖಾತೆಗೆ ಹಣ ಹಾಕಿ ಅವರಿಂದ ಆಸ್ಪತ್ರೆಯ ಡೀನ್‌ ಡಾ.ತೀರಸಾಗರ ಆಸ್ಪತ್ರೆಯ ಉಪನಿರ್ದೇಶಕರು ಹಾಗೂ ಟೆಂಡರ್‌ದಾರರು ಹಣ ಹಂಚಿಕೊಳ್ಳುತ್ತಿದ್ದಾರೆ ಎಂದು ಭಗವಾನ್‌ ಭೋವಿ ಗಂಭೀರ ಆರೋಪ ಮಾಡಿದರು.

ಆಸ್ಪತ್ರೆಯ ಹೊರಗುತ್ತಿಗೆ ನೇಮಕದಲ್ಲಿ ಟೆಂಡರ್‌ದಾರರು ಹಾಗೂ ಆಸ್ಪತ್ರೆ ಅಧಿಕಾರಿಗಳು ಸೇರಿ ಪ್ರತಿ ಕಾರ್ಮಿಕನಿಂದ ₹ 80 ಸಾವಿರದಿಂದ 1 ಲಕ್ಷದವರೆಗೆ ವಸೂಲಿ ಮಾಡುತ್ತಿದ್ದಾರೆ. 4ರಿಂದ 6 ತಿಂಗಳು ಕೆಲಸ ಮಾಡಿದ ಕಾರ್ಮಿಕರಿಗೆ ಸಂಬಳ ನೀಡದೇ ಕೆಲಸಕ್ಕಾಗಿ ಕೊಟ್ಟ ಹಣವೂ ನೀಡದೇ ಗೂಂಡಾಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ ಎಂದು ದೂರಿದರು. 

ಆಸ್ಪತ್ರೆಯ ಆವರಣದಲ್ಲಿ ಕೂರಲು ಕುರ್ಚಿಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಫಿಲ್ಟರ್‌ ಮಷಿನ್‌ ಕೆಟ್ಟು ಹೋಗಿವೆ. ದೂರು ದುಮ್ಮಾನ ಹೇಳಲು ಡೀನ್‌ ಸಾರ್ವಜನಿಕರ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಹಾಗಾಗಿ ಈಗ ಇರುವ ಡೀನ್‌ ತೀರಸಾಗರ ಅವರನ್ನು ವಜಾಗೊಳಿಸಿ  ಆಸ್ಪತ್ರೆಯ ನಿರ್ವಹಣೆ ಒಬ್ಬರು ಹಾಗೂ ಚಿಕಿತ್ಸೆ ನಿರ್ವಹಣೆಗಾಗಿ ಮತ್ತೊಬ್ಬ ಡೀನ್‌ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು.ಆಸ್ಪತ್ರೆಯ ಒಳಗೆ ಇಂದಿರಾ ಕ್ಯಾಂಟೀನ್‌ ಆರಂಭಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT