ಬುಧವಾರ, ಸೆಪ್ಟೆಂಬರ್ 30, 2020
25 °C
101 ಮೆಟ್ಟಿಲ ಏಣಿಯನ್ನು ಕೆಡವದಿರಿ: ಬೆಳಮಗಿ ಎಚ್ಚರಿಕೆ

ಪಟ್ಟಿಯಿಂದ 4 ಸಮುದಾಯ ಕೈಬಿಡುವ ಪ್ರಸ್ತಾವಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮು
ದಾಯವನ್ನು ಕೈಬಿಡುವಂತೆ ಮಾಜಿ ಸಚಿವ ಕೆ.ಬಿ.ಶಾಣಪ್ಪ ನೇತೃತ್ವದ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾ
ಸಭೆಯು ಒತ್ತಾಯಿಸಿದ್ದು ಸರಿಯಲ್ಲ. ಪರಿಶಿಷ್ಟರಲ್ಲಿ ಇಂತಹ ಒಡಕಿನ ಧ್ವನಿಗಳ ಸಲ್ಲದು ಎಂದು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1936ರಲ್ಲಿ ಮೈಸೂರು ಒಡೆಯರ ಕಾಲದಲ್ಲಿ 101 ಜಾತಿಗಳನ್ನು ರಾಜ್ಯದಲ್ಲಿ ಪರಿಶಿಷ್ಟರ ಪಟ್ಟಿಗೆ ಸೇರಿಸಲಾಗಿದ್ದು, ಅದರಲ್ಲಿ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳೂ ಸೇರಿವೆ ಎಂದರು.

‘ಆದರೆ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಶಾಣಪ್ಪ, ಭೀಮರಾವ ಟಿ.ವಿ. ಇತರರು ಈ ನಾಲ್ಕು ಸಮುದಾಯಗಳನ್ನು ಸ್ಪೃಶ್ಯ ಜಾತಿಗಳೆಂದು ಹೇಳುತ್ತಾ, ಇವುಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಹೇಳಿದ್ದಾರೆ. ಸ್ಪೃಶ್ಯ, ಅಸ್ಪೃಶ್ಯ ಎಲ್ಲರೂ ಪರಿಶಿಷ್ಟ ಜಾತಿಯಲ್ಲಿ ಒಂದರ ಮೇಲೊಂದು ಇರುವ ಮಣ್ಣಿನ ಮಡಿಕೆಗಳಂತೆ. ಒಂದು ಮಡಿಕೆ ಒಡೆದರೆ ಎಲ್ಲವೂ ಒಡೆದು ಮೀಸಲಾತಿ ಸಿಗದೇ ಎಲ್ಲ 101 ಜಾತಿಗಳು ಸೌಲಭ್ಯದಿಂದ ವಂಚಿತವಾಗುತ್ತವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಮತ್ತು ಕೆಲ ರಾಜ್ಯಗಳ ಹೈಕೋರ್ಟ್‌ಗಳು ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿವೆ. ಹಾಗಾಗಿ, ಸರ್ಕಾರ ನೀಡಿದ ಅವಕಾಶವನ್ನು ವಿವಾದಕ್ಕೆ ಆಸ್ಪದ ಕೊಡದಂತೆ ಬಳಸಿಕೊಳ್ಳುವುದನ್ನು ಕಲಿಯಬೇಕು’ ಎಂದರು.

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿಠ್ಠಲ ರಾಠೋಡ ಮಾತನಾಡಿ, ಬಂಜಾರ ಸಮುದಾಯವು ಹಿಮಾಚಲ ಪ್ರದೇಶ, ದೆಹಲಿ, ಬಿಹಾರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಕರ್ನಾಟಕ, ರಾಜಸ್ಥಾನದಲ್ಲಿ ಪರಿಶಿಷ್ಟ ಪಂಗಡದಲ್ಲಿ ಬರುತ್ತಾರೆ. ಕರ್ನಾಟಕದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಜನಾಂಗದವರನ್ನು ಅವರುಗಳ ಅಂದಿನ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಆಧಾರದ ಮೇಲೆ ಅತ್ಯಂತ ಶೋಷಿತ ಜನಾಂಗವೆಂದು ಅಂದಿನ ಮೈಸೂರು ಅರಸರ ಕಾಲದಿಂದಲೂ ಪ್ರಸ್ತುತ ಸ್ವಾತಂತ್ರ್ಯ ನಂತರದ ಭಾರತ ಸರ್ಕಾರದಲ್ಲಿಯೂ ಸಂವಿಧಾನದತ್ತವಾಗಿ ಪರಿಶಿಷ್ಟ ಜಾತಿಯಲ್ಲಿಯೇ ಇರುವುದನ್ನು ಅಸ್ಪೃಶ್ಯ ಮಹಾಸಭಾ ತಿಳಿದುಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಯಿಂದ ಯಾವುದೇ ಜಾತಿಯನ್ನು ಕೈಬಿಡುವುದಿಲ್ಲವೆಂದು ಮತ್ತು ಪರಿಶಿಷ್ಟ ಜಾತಿಯಲ್ಲಿ ಇರುವ ಯಾವುದೇ ಸಮುದಾಯಗಳನ್ನು ತೆಗೆಯುವುದಿಲ್ಲವೆಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೂ, ಅಸ್ಪೃಶ್ಯ ಮಹಾಸಭಾದವರು ಒಡಕಿನ ಧ್ವನಿಯನ್ನು ಹೊರಡಿಸುತ್ತಿರುವುದು ಖೇದಕರ ಎಂದರು.

ಎಐಬಿಎಸ್‌ಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಜಾಧವ, ಕಲ್ಯಾಣ ಕರ್ನಾಟಕ ಬಂಜಾರ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಬಿ. ನಾಯಕ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಶೀಲಾಬಾಯಿ, ಪ್ರೇಮಕುಮಾರ ರಾಠೋಡ, ಧೇನುಸಿಂಗ್ ಚವ್ಹಾಣ, ಪೋಮಾ ನಾಯಕ ರಾಠೋಡ, ಕೆ.ಟಿ. ರಾಠೋಡ, ಬಲದೇವಸಿಂಗ ರಾಠೋಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.