ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಗೆ ಭಾರವಾದ ಪ್ರಭಾರ ಅಧಿಕಾರಿಗಳು !

ತಾಲ್ಲೂಕು ಪಂಚಾಯಿತಿಯಲ್ಲಿ ಹಲವು ಹುದ್ದೆಗಳು ಖಾಲಿ
Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕು ಕೇಂದ್ರದಲ್ಲಿ ಪ್ರಭಾರ ಅಧಿಕಾರಿಗಳದ್ದೇ ಕಾರುಬಾರು ಹೆಚ್ಚಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ ರಾಠೋಡ್ ಅವರಿಗೆ ಮೂರು ಜವಾಬ್ದಾರಿಗಳಿವೆ. ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರ ಹುದ್ದೆಯ ಜತೆಗೆ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ಜವಾಬ್ದಾರಿ ನಿಬಾಯಿಸುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಮತ್ತು ಸಹಾಯಕ ನಿರ್ದೇಶಕ ಹುದ್ದೆಗಳಿಗೂ ಸಹಾಯಕ ಲೆಕ್ಕಾಧಿಕಾರಿಗೆ ಒಬ್ಬರೇ ಅಧಿಕಾರಿ ಇದ್ದಾರೆ. ತಾಲ್ಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕ ಹುದ್ದೆಯೂ ಪ್ರಭಾರ ಜವಾಬ್ದಾರಿಯಲ್ಲಿಯೇ ನಡೆದಿದೆ. 4 ಪ್ರಥಮ ದರ್ಜೆ ಸಹಾಯಕರು, 3 ದ್ವಿತೀಯ ದರ್ಜೆ ಸಹಾಯಕರು, 1 ಪ್ರಗತಿ ಸಹಾಯಕ -1 ಖಾಲಿಯಿವೆ. ಇಡಿ ತಾ.ಪಂ.ಯಲ್ಲಿ ಕೇವಲ ಒಬ್ಬರೇ ಪ್ರಥಮ ದರ್ಜೆ ಸಹಾಯಕರಿದ್ದಾರೆ.

ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ ಹುದ್ದೆ ಖಾಲಿಯಿದ್ದು, ಎರಡು ವರ್ಷಗಳಿಂದ ಆಹಾರ ಇಲಾಖೆಯ ಶಿರಸ್ತೇದಾರರೇ ಪ್ರಭಾರ ವಹಿಸಿಕೊಂಡಿದ್ದಾರೆ. ಎರಡು ವರ್ಷಗಳಿಂದ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಎಇಇ) ಹುದ್ದೆ ಖಾಲಿಯಿದೆ. ಸೇಡಂನ ಎಇಇಗೆ ಚಿಂಚೋಳಿಯ ಪ್ರಭಾರ ವಹಿಸಲಾಗಿದೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಯೂ ಖಾಲಿ ಇದ್ದು ಪ್ರಸ್ತುತ ಇಲಾಖೆ ಯೋಜನೆಯ ಮೇಲ್ವಿಚಾರಕಿಯೊಬ್ಬರಿಗೆ ಯೋಜನಾಧಿಕಾರಿ ಪ್ರಭಾರ ವಹಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಭಾರ ಜವಾಬ್ದಾರಿಯಲ್ಲಿದ್ದಾರೆ.

ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯೂ ಪ್ರಭಾರ ಜವಾಬ್ದಾರಿಯಲ್ಲಿಯೇ ಇದ್ದಾರೆ. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಯೂ ಖಾಲಿ ಇದೆ. ಪುರಸಭೆಯಲ್ಲಿ 4 ತಿಂಗಳಿನಿಂದ ಎಂಜಿನಿಯರ್ ಹುದ್ದೆ ಖಾಲಿ ಇದೆ. ಪಂಚಾಯಿತಿರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಂಜಿನಿಯರ್ ಪ್ರಭಾರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತಾಲ್ಲೂಕಿನ ಕುಂಚಾವರಂ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ.

29 ಗ್ರಾಮ ಪಂಚಾಯಿತಿಗಳ ಪೈಕಿ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಇದರಿಂದ ಗ್ರೇಡ್-1 ಮತ್ತು ಗ್ರೇಡ್-2 ಕಾರ್ಯದರ್ಶಿಗಳಿಗೆ ಒಬ್ಬೊಬ್ಬರಿಗೆ 2– 3 ಗ್ರಾಮ ಪಂಚಾಯಿತಿ ಪ್ರಭಾರ ಜವಾಬ್ದಾರಿ ನೀಡಲಾಗಿದೆ. ಒಟ್ಟು 29 ಅಭಿವೃದ್ಧಿ ಅಧಿಕಾರಿಗಳ ಪೈಕಿ 11 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 6 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇದ್ದು ಒಬ್ಬೊಬ್ಬರಿಗೆ ಹೆಚ್ಚಿನ ಪ್ರಭಾರ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ ದೂರ ಇರುವುದರ ಜತೆಗೆ ಅಧಿಕಾರಿಗಳಿಗೆ ಇಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದಿರುವುದರಿಂದ ಅವರು ಇಲ್ಲಿಗೆ ಬರಲು ನಿರಾಕರಿಸುತ್ತಿದ್ದಾರೆ. ಒಮ್ಮೆ ಇಲ್ಲಿಗೆ ಬಂದರೆ ಮರಳಿ ಬೇರೆ ಕಡೆ ಹೋಗಲು ಯಾವ ಅಧಿಕಾರಿಯೂ ಇಷ್ಟಪಡುವುದಿಲ್ಲ. ಆದರೆ ತಾಲ್ಲೂಕಿನಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಾರೆ ಎಂಬ ಕಳಂಕ ಇದೆ. ಆದರೆ ಇದು ಆಧಾರರಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT