ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಜನಾಥ ಪಾಟೀಲ ಪುತ್ಥಳಿ ನರ್ಮಿಸಿ’

ವೈಜನಾಥ ಪಾಟೀಲರ ಪ್ರಥಮ ಪುಣ್ಯಸ್ಮರಣೆ, 371ನೇ ಕಲಂ ಅನುಷ್ಠಾನ ಕುರಿತ ವಿಚಾರ
Last Updated 2 ನವೆಂಬರ್ 2020, 12:55 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದ ಸುಸ್ಥಿರ ಅಭಿವೃದ್ಧಿಗೆ ವೈಜನಾಥ ಪಾಟೀಲ ಅವರು ಮಾಡಿದ ಹೋರಾಟ ಅವಿಸ್ಮರಣೀಯವಾದುದು. ಮುಂದಿನ ಪೀಳಿಗೆಗೂ ಈ ಧೀಮಂತ ನಾಯಕನ ಪರಿಚಯ ಆಗಬೇಕೆಂದರೆ ನಗರದಲ್ಲಿ ಒಂದು ಕಡೆ ಅವರ ಪುತ್ಥಳಿ ನಿರ್ಮಿಸಬೇಕು’ ಎಂದು ಸುಲಫಲ ಮಠದ ಸಾರಗಂಧರ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಸಂವಿಧಾನದ 371ನೇ ಕಲಂ ಅನುಷ್ಠಾನ ಕುರಿತ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಮ್ಮ ಮಠದಿಂದಲೇ ಮುಂದಿನ ವರ್ಷದಿಂದ ಇಬ್ಬರಿಗೆ ವೈಜನಾಥ ಪಾಟೀಲ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಇದು ತಲಾ ₹ 10 ಸಾವಿರ ನಗದು ಬಹುಮಾನ ಹೊಂದಿರುತ್ತದೆ’ ಎಂದೂ ಶ್ರೀಗಳು ಘೋಷಿಸಿದರು.‌

‘ವೈಜನಾಥ ಪಾಟೀಲರು ಇಲ್ಲಿ ಹುಟ್ಟಿದ್ದು ಕಲ್ಯಾಣ ಕರ್ನಾಟಕದವರ ಭಾಗ್ಯ. ಕಲ್ಯಾಣ ಕರ್ನಾಟಕದಲ್ಲೇ ಹುಟ್ಟಿದ್ದ ವೈಜನಾಥವರ ದೌರ್ಭಾಗ್ಯ. ಅವರು ಅಗಲಿ ಒಂದು ವರ್ಷವಾದರೂ ಜನರು ಅವರನ್ನು ಸ್ಮರಿಸುವ ಸೌಜನ್ಯವನ್ನೂ ತೋರಲಿಲ್ಲ. ಈ ಭಾಗದ ಉಳಿವಿಗೆ, ಅಭಿವೃದ್ಧಿಗೆ, ಜನರಿಗಾಗಿ ವೈಜನಾಥ ಎಲ್ಲವನ್ನೂ ತ್ಯಾಗ ಮಾಡಿದರು. ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆಯಾದರೂ ಅವರ ಹೋರಾಟ ಹಾಗೂ ಸಾಧನೆಗಳ ಕುರಿತು ಮೆಲುಕು ಹಾಕುವಂತಾಗಬೇಕು’ ಎಂದರು.

‘ವೈಜನಾಥ ಅವರು ಹಿಂದುಳಿದ ಐದೂ ಜಿಲ್ಲೆಗಳ ನಾಯಕರನ್ನು ಸೇರಿಸಿಕೊಂಡು ಹಲವು ಬಾರಿ ನಮ್ಮ ಮಠದಲ್ಲಿಯೇ ಸಭೆ ಮಾಡಿದರು. ಅವರ ಹೋರಾಟ ಜನರಲ್ಲಿ ಕೆಚ್ಚು ಮೂಡಿಸಿತ್ತು. ‘ಕೇಂದ್ರ ಸರ್ಕಾರದ ಕಚೇರಿಗಳಗೆ ಬೆಂಕಿ ಹೆಚ್ಚಿ ಸುಟ್ಟುಬಿಡಿ, ಆಗ ಮಾತ್ರ ನಿಮ್ಮ ಹೋರಾಟ ಅವರ ಕಣ್ಣಿಗೆ ಕಾಣುತ್ತದೆ’ ಎಂದು ನಾನೇ ಆಗ ಹೇಳಿದ್ದೆ. ಅಷ್ಟರಮಟ್ಟಿಗೆ ಅವರು ನಿರಂತರತೆ ಕಾಯ್ದುಕೊಂಡಿದ್ದರು. 371ನೇ ಕಲಂ ಜಾರಿ ಮಾಡಿದ ಮೇಲೆಯೂ ಅವರು ವಿಶ್ರಮಿಸಲಿಲ್ಲ. ಅವರ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿ ಮಟ್ಟದಲ್ಲಿ ಈ ಕಲಂ ಜಾರಿಗೆ ಶ್ರಮಿಸಿದರು’ ಎಂದೂ ಶ್ರೀಗಳು ಸ್ಮರಿಸಿದರು.‌

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಬಿ. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ ಸಜ್ಜನ್‌, ಮಾಜಿ ಸದಸ್ಯ ರಾಜೇಂದ್ರ ಕರೇಕಲ್ ಮಾತನಾಡಿದರು. ಸಮಿತಿ ಅಧ್ಯಕ್ಷ ಚಂದ್ರಶೇಖರ ಹರಸೂರ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.

ಎಂ.ಎಸ್‌.ಪಾಟೀಳ ನರಿಬೋಳ ಸ್ವಾಗತಿಸಿದರು, ದೇವೇಂದ್ರ ಆವಂಟಿ ಕಾರ್ಯಕ್ರಮ ನಿರೂಪಿಸಿದರು. ರಜನಿಕಾಂತ ಸುರಪೂರಕರ್‌, ವಿಜಯಕುಮಾರ ತೇಗಲತಿಪ್ಪಿ ಇದ್ದರು.

‘ವೈಜನಾಥ ಒಳಗಿನ ಮುತ್ಸದ್ದಿ ಅಜರಾಮರ’

‘ವೈಜನಾಥ ಪಾಟೀಲ ಅವರಲ್ಲಿ ಎರಡು ವ್ಯಕ್ತಿತ್ವ ಇದ್ದವು. ಒಂದು ರಾಜಕಾರಣಿ, ಇನ್ನೊಂದು ಮುತ್ಸದ್ದಿ. ಅವರೊಳಗಿದ್ದ ಧೀಮಂತ ರಾಜಕಾರಣಿ ಸಂದರ್ಭಕ್ಕೆ ಕಟಿಬಿದ್ದು ಸುಮ್ಮನಿದ್ದರೂ, ಅವರಲ್ಲಿನ ಮುತ್ಸದ್ದಿ ಯಾವತ್ತೂ ಸುಮ್ಮನೇ ಕುಳಿತುಕೊಳ್ಳಲಿಲ್ಲ, ರಾಜೀ ಮಾಡಿಕೊಳ್ಳಲಿಲ್ಲ‘ ಎಂದು ಹಿರಿ ಪತ್ರಕರ್ತ ಶ್ರೀನಿವಾಸ ಸಿರನೂರಕರ ಅಭಿಪ್ರಾಯ ಪಟ್ಟರು.

ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ‘ತಾತ್ವಿಕ ಹಾಗೂ ಸೈದ್ಧಾಂತಿಕ ರಾಜಕಾರಣಿಗಳನ್ನು ಈಗ ಹುಡುಕುವುದೇ ವ್ಯರ್ಥ. ವೈಜನಾಥ ಅವರೂ ಏಳು ಪಕ್ಷಗಳನ್ನು ಬದಲಾಯಿಸಿದರು. ಮೊದಲು ಸೋಷಿಯಲಿಸ್ಟ್ ಪಕ್ಷ, ಆಮೇಲೆ ಸಮಾಜವಾದಿ ಪಾರ್ಟಿ, ಅಲ್ಲಿಂದ ಜನತಾ ದಳ, ನಂತರ ಜೆಡಿಎಸ್‌, ಕಾಂಗ್ರೆಸ್‌ ಬಳಿಕ ಬಿಜೆಪಿ... ಹೀಗೆ ಎಲ್ಲಿಯೂ ಅವರು ನೆಲೆ ನಿಲ್ಲಲಿಲ್ಲ. ಅವರಲ್ಲಿನ ತಾತ್ವಿಕ ಹಾಗೂ ಸೈದ್ಧಾಂತಿಕ ರಾಜಕಾರಣಕ್ಕೆ ಪಕ್ಷಗಳು ಬೆಲೆ ಕೊಡದೇ ಇದ್ದಾಗ ಬಿಟ್ಟು ಹೊರಬಂದರು’ ಎಂದು ಸ್ಮರಿಸಿದರು.‌

‘ಚುನಾವಣೆಯಲ್ಲಿ ಗೆದ್ದಾಗ ಶಾಸನ ಸಭೆಯಲ್ಲಿ ಹೋರಾಡಿದರು. ಸೋತಾಗ ಜನರ ಮಧ್ಯೆ ರಸ್ತೆಯಲ್ಲಿ ನಿಂತು ಹೋರಾಡಿದರು. ಈ ಭಾಗದ ಬಗ್ಗೆ ಸರ್ಕಾರಗಳು ತೋರುತ್ತಿದ್ದ ನಿರ್ಲಕ್ಷ್ಯದಿಂದ ರೋಸಿಹೋದ ಅವರು ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಹಾಕಿದರು. ಅದಕ್ಕೆ ಮಣಿದ ಕೇಂದ್ರ ಸರ್ಕಾರ 371ನೇ ಕಲಂ ಅನ್ನು ಜಾರಿ ಮಾಡಿತು’ ಎಂದೂ ಹೇಳಿದರು.

‘ಸಮಾನತೆ ಎಂದರೆ ಕೇವಲ ಸಂಪನ್ಮೂಲಗಳ ಹಂಚಿಕೆ ಮಾತ್ರವಲ್ಲ; ಈ ಭಾಗದ ಜನರ ತಲಾ ಆದಾಯ ಹೆಚ್ಚಬೇಕು, ಗುಣಾತ್ಮಕ ಶಿಕ್ಷಣ, ಶುದ್ಧ ನೀರು– ಗಾಳಿ, ಸಾರಿಗೆ ಸಂಪರ್ಕ, ಉದ್ಯೋಗ... ಹೀಗೆ ಎಲ್ಲದರಲ್ಲೂ ಸಮಾನತೆ ಕಂಡುಬರಬೇಕು ಎಂಬುದು ಅವರ ನಿಲುವಾಗಿತ್ತು. 371ನೇ ಕಲಂ ಜಾರಿಯಾದ ಮಾತ್ರಕ್ಕೆ ಎಲ್ಲವೂ ಆಯಿತು ಎಂದು ಅವರು ಎಂದೂ ಸಮಾಧಾನ ಮಾಡಿಕೊಳ್ಳಲಿಲ್ಲ. ಇನ್ನಷ್ಟು ಹೋರಾಡಬೇಕಿದೆ ಎಂದೇ ಕಾಯುತ್ತಿದ್ದರು’ ಎಂದು ಸಿರನೂರಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT