ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಚವಳೆ, ಅವರೆಕಾಯಿ ದರ ಏರಿಕೆ ಪೈಪೋಟಿ

ಗುಲಾಬಿ ದುಬಾರಿ; ಗ್ರಾಹಕರಿಗೆ ‘ಖಾರ’ವಾದ ಡಬ್ಬು ಮೆಣಸಿನಕಾಯಿ
Last Updated 2 ಅಕ್ಟೋಬರ್ 2020, 13:25 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತರಕಾರಿ ದರದಲ್ಲಿ ಈ ವಾರ ಅಲ್ಪ ಏರಿಳಿಕೆ ಕಂಡಿದೆ. ನಗರದ ಸೂಪರ್‌ ಮಾರುಕಟ್ಟೆಯಲ್ಲಿ ವ್ಯಾಪಾರವೂ ಜೋರಾಗಿ ಇರಲಿಲ್ಲ.

ಕಳೆದ ವಾರಕ್ಕೆ ಹೋಲಿಸಿದರೆ ಬೆಂಡೆಕಾಯಿ, ಡಬ್ಬು ಮೆಣಸಿನಕಾಯಿ, ಬದನೆಕಾಯಿ, ಅವರೆಕಾಯಿ, ಎಲೆಕೋಸು, ಈರುಳ್ಳಿ, ಗೋಬಿ, ಚವಳೆಕಾಯಿ ದರ ಏರಿಸಿಕೊಂಡಿವೆ. ಅದರಲ್ಲೂ ಚವಳೆಕಾಯಿ, ಅವರೆಕಾಯಿ, ಹೀರೆಕಾಯಿ ಕೆ.ಜಿ.ಗೆ ₹60ರಿಂದ ₹100ವರೆಗೆ ಮಾರಾಟವಾಗುತ್ತಿದ್ದು, ಒಂದಕ್ಕಿಂತ ಒಂದು ದರ ಏರಿಸಿಕೊಳ್ಳುತ್ತಿವೆ.

ಹೀರೆಕಾಯಿ, ಹಸಿಮೆಣಸಿನಕಾಯಿ, ಆಲೂಗಡ್ಡೆ ದರದಲ್ಲಿ ಈ ವಾರ ಕುಸಿತ ಕಂಡಿದೆ.

ಗಜ್ಜರಿ, ಸೌತೆಕಾಯಿ, ಟೊಮೆಟೊ, ನುಗ್ಗೆಕಾಯಿ ದರ ಯಥಾಸ್ಥಿತಿಯಲ್ಲಿದೆ..

‘ಅನ್‌ಲಾಕ್‌ ಬಳಿಕ ವ್ಯಾಪಾರ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೆ ಮಳೆ ಹಾಗೂ ಕೋವಿಡ್‌ ಕಾರಣದಿಂದ ಹದಿನೈದು ದಿನಗಳಿಂದ ವ್ಯಾಪಾರದಲ್ಲಿ ಮತ್ತೆ ಕುಸಿತ ಕಂಡಿದೆ. ಮೊದಲಿನಂತೆ ಮಾರುಕಟ್ಟೆ ಸಂಪೂರ್ಣವಾಗಿ ಆರಂಭವಾಗಿದ್ದರೂ ವ್ಯಾಪಾರ ಮಾತ್ರ ಮೊದಲಿನಂತಿಲ್ಲ. ಜನ ಹೆಚ್ಚಾಗಿ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ಎಫ್‌ಕೆಟಿ ತರಕಾರಿ ಅಂಗಡಿ ಮಾಲೀಕ ಅಲಿ ಹೇಳಿದರು.

ಸೊಪ್ಪುಗಳ ದರ ಸ್ಥಿರ: ಸೊಪ್ಪುಗಳ ದರದಲ್ಲಿ ಈ ವಾರ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಕೊತ್ತಂಬರಿ, ಪುದೀನಾ ಸೊಪ್ಪುಗಳ ಕಟ್ಟು ₹10ಕ್ಕೆ ಮಾರಾಟವಾಗುತ್ತಿದೆ. ಮೆಂತ್ಯೆ ₹ 30, ಪುಂಡಿಪಲ್ಯ ₹5ಕ್ಕೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಮಹಮ್ಮದ್ ಮಸ್ತಾನ್ ತಿಳಿಸಿದರು.

ಬಾಡಿದ ಹೂವು ವ್ಯಾಪಾರ: ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೆ ಹೂವು ವ್ಯಾಪಾರಿಗಳು ಬೇಸರದಲ್ಲಿರುವುದು ಕಂಡು ಬಂತು. ಗುಲಾಬಿ ಹೊರತಾಗಿ ಬೇರೆಲ್ಲಾ ಹೂವುಗಳ ದರ ಈ ವಾರ ಸ್ಥಿರವಾಗಿದೆ. ಸೇವಂತಿಗೆ ಮೊಳಕ್ಕೆ ₹20, ಕನಕಾಂಬರ ₹5, ಕಾಕಡ ₹5ಕ್ಕೆ ಮಾರಾಟ ಆಗುತ್ತಿವೆ. ಗುಲಾಬಿ ಹೂವು ಕಳೆದ ವಾರ ಕೆ.ಜಿ.ಗೆ ₹60 ಇತ್ತು. ಈ ವಾರ ಕೆ.ಜಿ. ₹160ಕ್ಕೆ ಮಾರಾಟವಾಗುತ್ತಿದೆ.

‘ಸದ್ಯ ಹೂವು ಖರೀದಿ ಪ್ರಮಾಣ ಭಾರಿ ಕಡಿಮೆ ಇದೆ. ಕೊರೊನಾ ಕಾರಣದಿಂದ ಕಾರ್ಯಕ್ರಮಗಳೇ ನಡೆಯುತ್ತಿಲ್ಲ. ಹಬ್ಬ ನಡೆದರೆ ಮಾತ್ರ ಹೂವು ಖರೀದಿ ಜೋರಾಗುತ್ತೆ. ದಸರಾ, ದೀಪಾವಳಿ ಹಬ್ಬಗಳು ಬರುವವರೆಗೂ ಹೂವಿನ ವ್ಯಾಪಾರದಲ್ಲಿ ಹೆಚ್ಚಿನ ಬದಲಾವಣೆ ಆಗಲ್ಲ. ದಸರಾ ಹಬ್ಬ ಬರುತ್ತಿದ್ದು, ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೂವು ವ್ಯಾಪಾರಿ ಸಾಬೀರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT