ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕ್ಷೇತ್ರೀಯ ಕಾರ್ಯಾಲಯದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹ ಕಾರ್ಯಕ್ರಮ ಆಚರಿಸಲಾಯಿತು.
ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ನಿಬಂಧ ಸ್ಪರ್ಧೆ ಹಾಗೂ ಸಿಬ್ಬಂದಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಗಡ್ಡಪರ್ತಿ ಮನಿಶಾ ಪ್ರಥಮ ಸ್ಥಾನ, ಪ್ರಶಾಂತ ತಮದಡ್ಡಿ ದ್ವಿತೀಯ ಸ್ಥಾನ ಹಾಗೂ ಸುಜಯ ಬಿಸ್ವಾಸ್ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರವಿ ಯಾದವ, ‘ಕೇಂದ್ರ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಬಹಿರಂಗಪಡಿಸುವಿಕೆ ಮತ್ತು ಮಾಹಿತಿದಾರರ ರಕ್ಷಣೆ(ಪಿಐಡಿಪಿಐ) ನಿರ್ಣಯದ ಅಡಿಯಲ್ಲಿ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ರಚಿಸಿದೆ. ಇದು ಸಾರ್ವಜನಿಕರಿಂದ ಭ್ರಷ್ಟಾಚಾರದ ಲಿಖಿತ ದೂರುಗಳನ್ನು ಸ್ವೀಕರಿಸಿ ಅಧಿಕಾರಿಗಳ ವಿರುದ್ಧ ಕ್ರಮವಹಿಸುತ್ತದೆ. ಇದರಲ್ಲಿ ದೂರು ಸಲ್ಲಿಸುವವರ ಗುರುತನ್ನು ಗೋಪ್ಯವಾಗಿಡಲಾಗುತ್ತದೆ’ ಎಂದರು.