ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದಾರ್ಶನಿಕ ನಾಯಕ ಸಂತೋಷ ಬಿಲಗುಂದಿ

Last Updated 9 ಫೆಬ್ರುವರಿ 2023, 6:54 IST
ಅಕ್ಷರ ಗಾತ್ರ

ಸಮಾಜದ ಹೊಣೆಗಾರಿಕೆ ಅರಿತು, ಜನರ ನಡುವೆ ಇದ್ದು, ಅವರ ಕಷ್ಟಗಳನ್ನು ಆಲಿಸಬೇಕು. ಅವುಗಳಿಗೆ ಸಕಾಲದಲ್ಲಿ ‍ಪರಿಹಾರ ಸೂತ್ರಗಳನ್ನು ರೂಪಿಸಬೇಕು. ಸಮಸ್ಯೆಗಳ ಕೂಪದಿಂದ ಜನರನ್ನು ಪಾರು ಮಾಡುವ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವವನೇ ದಾರ್ಶನಿಕ ನಾಯಕ. ಹೀಗೆ ನಂಬಿದವರು ಕಾಂಗ್ರೆಸ್‌ನ ಯುವ ಮುಖಂಡ ಸಂತೋಷ ಬಿಲಗುಂದಿ.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅವರ ಪುತ್ರ ಸಂತೋಷ ಬಿಲಗುಂದಿ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

‘ಜನರು ಮತ ಹಾಕುವ ಮುನ್ನ ತಮ್ಮ ನಡುವಿನ ಸಾಮಾನ್ಯ ಮತ್ತು ದಾರ್ಶನಿಕ ನಾಯಕರ ಬಗ್ಗೆ ಯೋಚಿಸಬೇಕಿದೆ. ಇಂಥ ಮನೋಭಾವ ಜನರಲ್ಲಿ ರೂಪುಗೊಳ್ಳಬೇಕಿದೆ’ ಎನ್ನುತ್ತಾರೆ ಸಂತೋಷ ಬಿಲಗುಂದಿ.

ಕಲಬುರಗಿ ನಗರ ನಾಗಾಲೋಟದಲ್ಲಿ ಸಾಗುತ್ತಿದೆ. ಆದರೆ, ಮುಂದಿನ 10 ವರ್ಷಗಳಲ್ಲಿ ಕಲಬುರಗಿ ನಗರ ಹೇಗೆ ರೂಪುಗೊಳ್ಳಬೇಕು ಮತ್ತು ಈಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಸಮಗ್ರ ‘ಮಹಾ ಯೋಜನೆ’ (ಮಾಸ್ಟರ್ ಪ್ಲಾನ್) ಅಗತ್ಯವಿದೆ ಎಂಬುದು ಅವರ ಅಭಿಪ್ರಾಯ. ಅವರ ಕೆಲವಷ್ಟು ಸದಾಶಯ, ಕನಸುಗಳನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.

‘ನಗರದ ಚಹರೆ ಬದಲಿಸುವ ಸಣ್ಣ ಬ್ಲೂ ಪ್ರಿಂಟ್ ಇರದ ಕಾರಣ, ಕೆಲ ವರ್ಷಗಳಿಂದ ನಗರದ ಬೆಳವಣಿಗೆಯ ವೇಗ ತಗ್ಗಿದೆ. ಪ್ರತಿ ವಾರ್ಡ್‌ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ, ಪ್ರತಿ ಕ್ಷೇತ್ರಗಳ ಪರಿಣಿತರಿಂದ ಸಲಹೆ, ಸೂಚನೆ, ಮಾರ್ಗದದರ್ಶನ ಪಡೆದು ವಾರ್ಡ್‌ ಸಂಯೋಜಿತ ಸಮಗ್ರ ನಗರ ಪ್ರತಿನಿಧಿಸುವ ‘ಮಾಸ್ಟರ್‌ ಪ್ಲಾನ್‌’ ಜಾರಿಗೆ ಬರಬೇಕು. ಈಗಿರುವ ರಿಂಗ್‌ ರಸ್ತೆ ಜತೆಗೆ ಎರಡನೇ ರಿಂಗ್ ರಸ್ತೆ ನಿರ್ಮಾಣ ಆಗಬೇಕು’ ಎಂಬುದು ಅವರ ಆಶಯ.

ನಗರದ ಶೇ 90ರಷ್ಟು ನಿವಾಸಿಗಳು ಕೊಳವೆ ಬಾವಿಯ ನೀರು ಕುಡಿಯುತ್ತಾರೆ. ಆದರೆ, ಗಡಸುತನ ಮತ್ತು ಕಲುಷಿತದಿಂದ ಅದು ಕುಡಿಯಲು ಯೋಗ್ಯವಾಗಿಲ್ಲ. ಭೀಮಾ, ಬೆಣ್ಣೆತೊರಾ ನದಿಗಳು ಸಹ ಕಲುಷಿತವಾಗಿವೆ. ವಾರ್ಡ್‌ ಹಾಗೂ ಗ್ರಾಮದಲ್ಲಿನ ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಿ ಅದರ ಗುಣಮಟ್ಟ ಪತ್ತೆ ಮಾಡಬೇಕು. ಕಲುಷಿತ ಕಂಡುಬಂದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕುಸಿದಿರುವ ಅಂತರ್ಜಲ ಮಟ್ಟ ಹೆಚ್ಚಿಸಲು, ಕೊಳವೆ ಬಾವಿಗೆ ಜಲ ಮರುಪೂರಣಕ್ಕೆ ಮಳೆ ನೀರು ಸಂಗ್ರಹದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

‘ಸ್ವಾಸ್ಥ್ಯ ಆರೋಗ್ಯ ಕಾಪಾಡಲು ಪರಿಸರ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ನಗರ ವ್ಯಾಪ್ತಿಯ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಬಹಳ ಕಡಿಮೆ ಇದೆ. ತಾಪಮಾನ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ 200 ಎಕರೆಯ ಉದ್ಯಾನ ನಿರ್ಮಿ ಸ ಬೇಕು. ಎಲ್ಲ ಬಗೆಯ ಮರ, ಹಣ್ಣಿನ ಸಸಿಗಳನ್ನು ನೆಟ್ಟು ಪೋಷಿಸ ಬೇಕು. ರಜೆ ದಿನ ಗಳಲ್ಲಿ ಕುಟುಂಬ ಸದಸ್ಯರು ಬಂದು, ಮಕ್ಕಳೊಂದಿಗೆ ಕಾಲ ಕಳೆಯುವಂತಿರಬೇಕು’ ಎಂಬ ಕನಸು ಅವರದ್ದು.

2011ರ ಜನಗಣತಿ ಪ್ರಕಾರ, ನಗರ ಹಾಗೂ ಗ್ರಾಮೀಣ ಭಾಗದ ಸಾಕ್ಷರತೆ ಕ್ರಮವಾಗಿ ಶೇ 78 ಮತ್ತು ಶೇ 58ರಷ್ಟಿದೆ. ಮಹಿಳೆಯರದ್ದು ಶೇ 55 ಮತ್ತು ಪುರುಷರದ್ದು ಶೇ 74 ಇದೆ. ಇದು ರಾಜ್ಯದಲ್ಲೇ ಅತಿ ಕಡಿಮೆ ಸಾಕ್ಷರತೆ ಪ್ರಮಾಣವುಳ್ಳ ಜಿಲ್ಲೆ.

‘‍ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡದಿದ್ದರೆ ಉತ್ತಮ ಭವಿಷ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ, ಸರ್ಕಾರ ಅಧೀನದ ಶಿಕ್ಷಣ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲೆಯ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯ(ಸಿಎಸ್‌ಆರ್‌) ನಿಧಿ ಹಾಗೂ ಸರ್ಕಾರದ ಅನುದಾನ ಬಳಸಿಕೊಳ್ಳಬಹುದು. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಮತ್ತು ಉನ್ನತ್ತೀಕರಣದ ತಾಂತ್ರಿಕ ಶಿಕ್ಷಣವನ್ನು ಕೈಗೆಟುಕುವಂತೆ ಮಾಡಬಹುದು’ ಎಂದು ಹೇಳುತ್ತಾರೆ.

ಜಿಲ್ಲೆಯು ನುರಿತ ಮತ್ತು ಸಮೃದ್ಧ ಮಾನವ ಸಂಪನ್ಮೂಲ ಹೊಂದಿದೆ. ಆದರೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದನ್ನು ತಪ್ಪಿಸಲು ಕಲಬುರಗಿ ಕೇಂದ್ರವಾಗಿಸಿಕೊಂಡು ‘ಸ್ಟಾರ್ಟ್‌ಅಪ್‌ ಇಕೊ ಸಿಸ್ಟಮ್ ಕೇಂದ್ರ ಸ್ಥಾಪಿಸಿ’ ಮೂಲಸೌಕರ್ಯ ಒದಗಿಸಬೇಕು. ಸ್ಪಾರ್ಟ್‌ಅಪ್‌ಗಳಲ್ಲಿ ತೊಡಗಿಸಿಕೊಳ್ಳುವ ಯುವಜನರನ್ನು ಪ್ರೋತ್ಸಾಹಿಸಿ, ಅಗತ್ಯ ನೆರವು ನೀಡಬೇಕು. ಒಬ್ಬರಿಗೆ ಪ್ರೋತ್ಸಾಹ ದೊರೆತು ಬೆಳದರೆ, ಸಾವಿರಾರು ಯುವಜನರಿಗೂ ಪ್ರೇರಣೆಯಾಗುತ್ತಿದೆ. ಸ್ಟಾರ್ಟ್‌ಅಪ್‌ಗಳ ಯಶಸ್ಸನ್ನು ಪ್ರಚಾರ ಮಾಡಿ, ಹೂಡಿಕೆದಾರರನ್ನು ಸೆಳೆದು, ಯುವ ಚಿಂತನೆಗಳಿಗೆ ಬಲ ತುಂಬುವುದು ಅವಶ್ಯವಿದೆ.

‘ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಹೊರಗಿ ನಿಂದ ಸಿಮೆಂಟ್‌ ಬ್ಲಾಕ್‌ ತಂದು ಹಾಕಲಾಗುತ್ತದೆ. ಅದರ ಬದಲಿಗೆ ಸ್ಥಳೀಯವಾಗಿ ಲಭ್ಯವಿರುವ ಶಹಾಬಾದ್‌ ಕಲ್ಲುಗಳನ್ನೇ ಹಾಕಬಹುದು. ಇದರಿಂದ ಜನರಿಗೆ ಉದ್ಯೋಗ ಸಿಗುತ್ತದೆ, ರೋಗಗ್ರಸ್ತ ಉದ್ಯಮಗಳ ಪುನಶ್ಚೇತನವೂ ಆಗುತ್ತದೆ’ ಎಂದು ಅವರು ಹೇಳುತ್ತಾರೆ.

ಪರ್ಯಾಯ, ವೈಜ್ಞಾನಿಕ ಕೃಷಿಗೆ ಆದ್ಯತೆ

ಕಲಬುರಗಿ ದಕ್ಷಿಣ ಕ್ಷೇತ್ರದ ಗ್ರಾಮೀಣ ಭಾಗದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಪರ್ಯಾಯ ಮತ್ತು ವೈಜ್ಞಾನಿಕ ಬೇಸಾಯದಲ್ಲಿ ತೊಡಗುವಂತೆ ರೈತರನ್ನು ಪ್ರೇರೇಪಿಸಬೇಕು.

‘ಒಣ ಭೂಮಿ, ಕಡಿಮೆ ನೀರು ಬೇಡುವ ಖರ್ಜೂರ ಕೃಷಿಗೆ ಕಲಬುರಗಿ ಜಿಲ್ಲೆ ಸೂಕ್ತವಾಗಿದೆ. ಒಂದು ಎಕರೆಗೆ 100 ಖರ್ಜೂರ ಗಿಡಗಳು ನೆಡಬಹುದು. 5–6 ವರ್ಷಗಳ ನಂತರ ಒಂದು ಗಿಡ 50ರಿಂದ 75 ಕೆ.ಜಿ. ಖರ್ಜೂರವನ್ನು ಪ್ರತಿ ಸೀಸನ್‌ಗೆ ಕೊಡುತ್ತದೆ. ಇಂದಿನ ಪ್ರತಿ ಕೆಜಿಗೆ ₹200 ದರದಂತೆ, ಶೇ 50ರಷ್ಟೆ ಬೆಲೆ ಸಿಕ್ಕರೂ ಎಕರೆಗೆ ₹7 ಲಕ್ಷ ಆದಾಯ ಗಳಿಸಬಹುದು’ ಎಂಬುದು ಸಂತೋಷ ಬಿಲಗುಂದಿ ಅವರ ಚಿಂತನೆ.

‘28 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ‘ನೀರಿನ ಅಭಿಯಾನ’ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಸಕಲ ಕ್ರೀಡಾ ಸೌಕರ್ಯಗಳೊಂದಿಗೆ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಬೇಕು. ಗ್ರಾಮಗಳ ಜೀವಾಳವಾದ ಪ್ರದರ್ಶನ ಕಲೆಗಳು, ಜಾನಪದ, ಕೋಲಾಟ, ಕರಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಅವರು ಹೇಳುತ್ತಾರೆ.

ಅಪರಾಧ ತಗ್ಗಿಸಲು ಬೇಕು ಮೊಬೈಲ್‌ ಪೊಲೀಸ್ ಸೆಂಟರ್

ನಗರ ಪ್ರದೇಶ ವಿಸ್ತರಣೆಯಿಂದ ಪೊಲೀಸ್ ಠಾಣೆಗಳ ವ್ಯಾಪ್ತಿಯೂ ದೊಡ್ಡದಾಗಿದೆ. ಹೊಸ ಪೊಲೀಸ್ ಠಾಣೆಗಳನ್ನು ತೆರೆಯುವ ಬದಲು ಜನಸ್ನೇಹಿಯಾದ ಮೊಬೈಲ್‌ ಪೊಲೀಸ್ ಕೇಂದ್ರಗಳನ್ನು ತೆರೆಯಬೇಕು.

ಪೊಲೀಸ್‌ ಕೇಂದ್ರಗಳನ್ನು ಅಪರಾಧ ಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ನಿಯೋಜಿಸಬಹುದು. ಅಪರಾಧ ಪ್ರಮಾಣ ಇಳಿದ ನಂತರ ಬೇರೆಡೆ ಸ್ಥಳಾಂತರಿಸಬಹುದು. ಜನರು ಸಹ ಕೇಂದ್ರಕ್ಕೆ ಬಂದು ದೂರು ಸಲ್ಲಿಸಲು ಸರಳವಾಗುತ್ತದೆ ಎಂಬುದು ಸಂತೋಷ ಬಿಲಗುಂದಿ ಅವರ ಆಲೋಚನೆ

ನಗರ ಪ್ರದೇಶ ವಿಸ್ತರಣೆ ಆಗಲಿ

ನಗರದ ಸೆರಗಿನ ಹಲವು ಹಳ್ಳಿಗಳು ನಗರ ಮತ್ತು ಗ್ರಾಮೀಣ ವಿಭಾಗದ ನಡುವೆ ಸಿಲುಕಿ ಸೌಕರ್ಯಗಳಿಂದ ವಂಚಿತವಾಗಿವೆ. ಈಗಿರುವ ನಗರದ ವ್ಯಾಪ್ತಿಯನ್ನು ವಿಸ್ತರಿಸಿ ಅವುಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ತೆಕ್ಕೆಗೆ ಸೇರ್ಪಡೆ ಮಾಡಿಕೊಳ್ಳಬೇಕು.

ಸರ್ಕಾರದ ಅನುದಾನ ವಿನಿಯೋಗಿಸಿ ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಇತ್ಯರ್ಥಪಡಿಸಬೇಕು. ನಾಲ್ಕು ದಿಕ್ಕೂಗಳಿಗೆ ನಗರದ ಮಾಸ್ಟರ್ ಪ್ಲಾನ್‌ ವಿಸ್ತರಿಸಬೇಕು. ಚರಂಡಿ ನೀರು ಮರು ಶುದ್ಧೀಕರಿಸಬೇಕು. ಮಹಿಳೆಯರಿಗೆ ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ ಕೊಟ್ಟು, ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಕಲಬುರಗಿ ಸಿಟಿಜನ್ ಫೋರಂನಡಿ ವಿವಿಧ ಕ್ಷೇತ್ರಗಳ ಪರಿಣಿತರು, ನಿವೃತ್ತರನ್ನು ಸೇರ್ಪಡೆ ಮಾಡಿಕೊಂಡು ಕಾಮಗಾರಿಗಳ ಮೇಲ್ವಿಚಾರಣೆಗೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT