ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಣ್ಣ ವಾಲೀಕಾರಗೆ ಭಾವಪೂರ್ಣ ವಿದಾಯ

ಹಿರಿಯ ಸಾಹಿತಿ ನೆನೆದು ಕಣ್ಣೀರಿಟ್ಟ ಒಡನಾಡಿಗಳು
Last Updated 25 ನವೆಂಬರ್ 2019, 14:18 IST
ಅಕ್ಷರ ಗಾತ್ರ

ಕಲಬುರ್ಗಿ: ಹಿರಿಯ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರ ಪಾರ್ಥಿವ ಶರೀರವಕ್ಕೆ ಸೋಮವಾರ ಒಡನಾಡಿಗಳು ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೆ ಸ್ವಗ್ರಾಮ ಶಹಾಬಾದ್‌ ತಾಲ್ಲೂಕಿನ ಶಂಕರವಾಡಿಗೆ ಒಯ್ಯುವ ಮುನ್ನ ಇಲ್ಲಿನ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅವರ ಬಾಲ್ಯ, ಯೌವ್ವನ, ಮುಪ್ಪಿನ ಕಾಲದ ಒಡನಾಡಿಗಳು ಚೆನ್ನಣ್ಣ ಅವರ ಅಂತಃಕರಣದ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಡಿಸಿಟ್ಟು ಕಣ್ಣೀರಿಟ್ಟರು. ಬಾರದ ಲೋಕಕ್ಕೆ ಪಯಣಿಸಿದ ಪತಿಯ ದೇಹವನ್ನು ಕಂಡು ರೋದಿಸಿದ ಪತ್ನಿ ಸಿದ್ದಮ್ಮ ಅವರ ಕಣ್ಣುಗಳೂ ಬತ್ತಿದ್ದವು.

ರಾಜ್ಯಸಭಾದ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ನನ್ನದು ಹಾಗೂ ವಾಲೀಕಾರ ಅವರದ್ದು ದಶಕಗಳ ಕಾಲದ ಒಡನಾಟವಿತ್ತು. ಅವರ ಮನೆಗೆ ಭೇಟಿ ನೀಡಿದಾಗ ಪ್ರೀತಿಯಿಂದ ಸತ್ಕರಿಸುತ್ತಿದ್ದರು. ದಲಿತ ಸಾಹಿತ್ಯ ರಚನೆಯಲ್ಲಿ ಅಗಾಧ ಸಾಧನೆ ಮಾಡಿದ ವಾಲೀಕಾರ ಹಾಗೂ ನನ್ನ ಮಧ್ಯೆ ಅತ್ಯಂತ ಆಪ್ತ ಒಡನಾಟವಿತ್ತು’ ಎಂದರು.

ಮಕ್ಕಳ ಸಾಹಿತಿ ಎ.ಕೆ.ರಮೇಶ್ವರ, ‘ವಿಶ್ವವಿದ್ಯಾಲಯದ ಗ್ರಂಥಾಲಯ ಸಮಿತಿ ಸದಸ್ಯರಾಗಿ, ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ವಾಲೀಕಾರ ಅವರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಅವರ ಅಗಲಿಕೆಯಿಂದ ಕಲ್ಯಾಣ ಕರ್ನಾಟಕದ ಗಟ್ಟಿ ದನಿಯೊಂದು ಕ್ಷೀಣಿಸಿದಂತಾಗಿದೆ’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಎಲ್ಲರನ್ನೂ ತನ್ನವರೆಂದು ಕರೆಯುವ ಆಪ್ತ ಗುಣ ನಮ್ಮೆಲ್ಲರ ಅಣ್ಣ ಚೆನ್ನಣ್ಣ ಬೆಳೆಸಿಕೊಂಡಿದ್ದರು. ಕಾದಂಬರಿಕಾರ, ಕವಿ, ಜನಪದ ಕಲಾವಿದರಾಗಿ ಅವರು ಏರಿದ ಎತ್ತರ ಬಹಳ ಮಹತ್ವದ್ದು. ಎಲ್ಲಿಯೇ ಭೇಟಿಯಾದರೂ ಉಭಯ ಕುಶಲೋಪರಿ ವಿಚಾರಿಸುತ್ತಿದ್ದ ಅವರ ಅಂತಃಕರಣದ ಗುಣ ನಮ್ಮೆಲ್ಲರಿಗೂ ಮಾದರಿಯಾಗಿದೆ’ ಎಂದರು.

ಒಡನಾಡಿ ಭೀಮಪ್ಪ ಗೋನಾಳ ಮಾತನಾಡಿ, ‘ಊಟದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಚೆನ್ನಣ್ಣ ಅವರಿಗೆ ಪತ್ನಿ ಸಿದ್ದಮ್ಮ ಅವರೂ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ಬಡಿಸುತ್ತಿದ್ದರು. ಯಾರೇ ಮನೆಗೇ ಹೋದರೂ ಚನ್ನಣ್ಣ ಅವರೊಂದಿಗೆ ಊಟ ಮಾಡಿ ಬರಬೇಕಿತ್ತು’ ಎಂದರು.

ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್‌.ಟಿ.ಪೋತೆ, ಹಿರಿಯ ಪತ್ರಕರ್ತ ರಂಜಾನ್‌ ದರ್ಗಾ,ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ, ಈಶ್ವರಯ್ಯ ಮಠ ಅವರು ನುಡಿನಮನ ಸಲ್ಲಿಸಿದರು.

ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ದಲಿತ ಮುಖಂಡ ವಿಠ್ಠಲ ದೊಡ್ಡಮನಿ, ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌, ಕುಲಸಚಿವ ಸಿ.ಸೋಮಶೇಖರ್, ಕೇಂದ್ರೀಯ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವಿಕ್ರಮ ವಿಸಾಜಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಅಪ್ಪಗೆರೆ ಸೋಮಶೇಖರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

ಜನಜಾಗೃತಿ ಮೂಡಿಸಿದ್ದ ದೈತ್ಯವ್ಯಕ್ತಿ

ತಮ್ಮ ಬರವಣಿಗೆ ಹಾಗೂ ಬದುಕಿನಲ್ಲಿ ಪ್ರಗತಿಪರ ಧೋರಣೆ ಹೊಂದಿದ್ದ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ಅವರು ನಾಡಿನಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮಾಡಿದ್ದ ದೈತ್ಯವ್ಯಕ್ತಿ. ಅವರ ಅಗಲಿಕೆಯಿಂದ ಕನ್ನಡದ ಪ್ರಗತಿಪರ ಚಿಂತನಾ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಕವಿ ಸಿದ್ದಲಿಂಗಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT