ಮಂಗಳವಾರ, ಜನವರಿ 31, 2023
27 °C

ಆದರ್ಶ ನಗರ ನಿರ್ಮಾಣಕ್ಕೆ ವಾರ್ಡ್ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನಗರವಾಸಿಗಳು ಸಾಂವಿಧಾನಿಕ ಕಾಯ್ದೆ ಬಲದ ಮೇಲೆ ವಾರ್ಡ್ ಸಮಿತಿ ರಚಿಸಿಕೊಂಡು ಮಹಾನಗರ ಪಾಲಿಕೆ ಅಧಿಕಾರಿಗಳ ಜತೆಗೂಡಿ ಆದರ್ಶ ನಗರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ಜನಾಗ್ರಹ ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಂತೋಷ ನರಗುಂದ ಹೇಳಿದರು.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಕಲಬುರಗಿ ವಾರ್ಡ್ ಸಮಿತಿ ಬಳಗ ಆಯೋಜಿಸಿದ್ದ ವಾರ್ಡ್ ಸಮಿತಿ ಬಳಗದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಗರಾಡಳಿತ ಸಂಸ್ಥೆಗಳ ರಚನೆ ಸಂಬಂಧ ಸಂವಿಧಾನಕ್ಕೆ 74ನೇ ತಿದ್ದುಪಡಿ ತರಲಾಯಿತು. ನಗರ ಆಡಳಿತದಲ್ಲಿ ಸ್ಥಳೀಯರು ಭಾಗವಹಿಸಿ, ತಮಗೆ ಬೇಕಾದ ಅಭಿವೃದ್ಧಿಯನ್ನು ತಾವೇ ನಿರ್ಧರಿಸಿಕೊಳ್ಳಲು ವಾರ್ಡ್ ಸಮಿತಿಗೆ ಸೇರ್ಪಡೆ ಆಗಬಹುದು. ವಾರ್ಡ್ ಸಮಿತಿ ಹೊಂದುವುದು ಪ್ರತಿ ವಾರ್ಡ್‌ನ ಸಾಂವಿಧಾನಿಕ ಹಕ್ಕು’ ಎಂದರು.

‘ಗ್ರಾಮ ಪಂಚಾಯಿತಿಯಲ್ಲಿನ ಹಳ್ಳಿಗರಿಗೆ ಇರುವಷ್ಟು ಅಧಿಕಾರ ನಗರವಾಸಿಗಳಿಗೆ ಇಲ್ಲ. ಆದರೆ, ವಾರ್ಡ್ ಸಮಿತಿಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಅಧಿಕಾರ ಪಡೆಯಬಹುದು. ವಾರ್ಡ್‌ಗಳಿಗೆ ಬೇಕಾದ ಅಭಿವೃದ್ಧಿ ಯೋಜನೆ ರೂಪಿಸುವುದು, ಯೋಜನೆಗಳ ಆದ್ಯತಾ ಪಟ್ಟಿ ತಯಾರಿ, ವಿವಿಧ ಸರ್ಕಾರಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಯೋಜನೆಗಳ ಮೇಲ್ವಿಚಾರಣೆ ಮಾಡುವುದು, ಯೋಜನೆಗಳಲ್ಲಿನ ಭ್ರಷ್ಟಾಚಾರಗಳನ್ನು ಸಹ ತಡೆಯಬಹುದು’ ಎಂದು ಅವರು ವಿವರಿಸಿದರು.

‘1992ರಲ್ಲಿ ಜಾರಿಯಾದ ವಾರ್ಡ್ ಸಮಿತಿ ರಚನೆಯನ್ನು ರಾಜ್ಯ ಸರ್ಕಾರ 2011ರಲ್ಲಿ ಅಳವಡಿಸಿಕೊಂಡಿತ್ತು. ಕಾಯ್ದೆ ಜಾರಿಯಾಗಿ 30 ವರ್ಷಗಳು ಕಳೆದರೂ ವಾರ್ಡ್ ಸಮಿತಿ ರಚನೆಗೆ ಮಹಾನಗರ ಪಾಲಿಕೆಗಳು ಮೀನಾಮೇಷ ಎಣಿಸುತ್ತಿವೆ. ಹೋರಾಟದ ಮೂಲಕ ಅದನ್ನು ಜಾರಿಗೆ ತರುವುದು ನಮ್ಮೆಲ್ಲರ ಹೊಣೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ವಾಲಿ ಮಾತನಾಡಿ, ‘ಬಿಬಿಪಿಎಂಪಿಯಲ್ಲಿ ಸದಸ್ಯರ ಅವಧಿ ಮುಗಿದ ಬಳಿಕ, ಅಲ್ಲಿನ ಆಯುಕ್ತರು ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ವಾರ್ಡ್ ಸಮಿತಿ ರಚಿಸಿದ್ದಾರೆ. ಕಲಬುರಗಿ ಪಾಲಿಕೆಯ ಕಾರ್ಪೊರೇಟರ್‌ಗಳು ಪ್ರಮಾಣ ವಚನ ಸ್ವೀಕರಿಸದೆ ಇದ್ದರೂ ಬಿಬಿಎಂಪಿ ಮಾದರಿಯಲ್ಲಿ ವಾರ್ಡ್ ಸಮಿತಿ ರಚನೆಗೆ ಇಲ್ಲಿನ ಅಧಿಕಾರಿಗಳು ಮುಂದಾಗಬೇಕು’ ಎಂದರು.

‘ಆರಂಭದಲ್ಲಿ ವಾರ್ಡ್ ಸಮಿತಿ ರಚನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬರಲಿಲ್ಲ. ನಿರಂತರ ಪ್ರಚಾರ, ಜನ ಜಾಗೃತಿ, ಅವಧಿ ವಿಸ್ತರಣೆಯಿಂದ ಈಗ 800ಕ್ಕೂ ಅಧಿಕ ಅರ್ಜಿಗಳು ಬಂದಿವೆ. 2–3 ವಾರ್ಡ್‌ಗಳು ಹೊರತುಪಡಿಸಿ ಉಳಿದ ವಾರ್ಡ್‌ಗಳಿಗೆ ಅರ್ಹ ಅರ್ಜಿಗಳು ಸಲ್ಲಿಕೆಯಾಗಿವೆ. ಕೂಡಲೇ ವಾರ್ಡ್ ಸಮಿತಿ ರಚನೆಯಾಗಬೇಕು’ ಎಂದು ಹೇಳಿದರು.

ಬಳಗದ ಸಂಚಾಲಕ ಪ್ರಭುಲಿಂಗ ಮಹಾಗಾಂವ್ಕರ್, ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ರಾಜ್ಯ ಅಧ್ಯಕ್ಷೆ ಡಾ. ವಿಶಾಲಾಕ್ಷಿ ವಿ.ಕರಡ್ಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಅಧ್ಯಕ್ಷೆ ಡಾ. ಸುಧಾ ಹಾಲಕಾಯಿ, ಜನಾಗ್ರಹ ಸಂಸ್ಥೆ ಸಂಯೋಜಕ ಶ್ರಾವಣಯೋಗಿ ಹಿರೇಮಠ ಇದ್ದರು.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು