ಗುರುವಾರ , ಮೇ 6, 2021
22 °C
ಸತ್ಯಮೇವ ಜಯತೆ ಸಾಮಾಜಿಕ ಸೇವಾ ಸಂಘದಿಂದ ವಿನೂತನ ಕಾರ್ಯ

ಪಕ್ಷಿಗಳ ರಕ್ಷಣೆಗೆ ಆಹಾರಧಾನ್ಯ, ನೀರಿನ ವ್ಯವಸ್ಥೆ

ಅವಿನಾಶ ಎಸ್. ಬೋರಂಚಿ Updated:

ಅಕ್ಷರ ಗಾತ್ರ : | |

Prajavani

ಮಳಖೇಡ (ಸೇಡಂ): ‌ಬಿಸಿಲಿನ ಪ್ರಖರತೆ ಜತೆಗೆ ಆಹಾರ ಮತ್ತು ನೀರಿನ ಸಮಸ್ಯೆ ಎದುರಿಸುತ್ತಿರುವ ಪಕ್ಷಿಗಳ ರಕ್ಷಣೆಗಾಗಿ ಇಲ್ಲಿನ ಮಳಖೇಡನ ಸತ್ಯಮೇವ ಜಯತೆ ಸಾಮಾಜಿಕ ಸೇವಾ ಸಂಘದ ಪದಾಧಿಕಾರಿಗಳು ಕಾರ್ಯನಿರತರಾಗಿದ್ದಾರೆ.

15 ಲೀಟರ್ ಸಾಮರ್ಥ್ಯದ 100ಕ್ಕೂ ಹೆಚ್ಚು ಖಾಲಿ ಎಣ್ಣೆ ಡಬ್ಬಗಳನ್ನು ಸಂಗ್ರಹಿಸಿರುವ ಅವರು ಒಂದೊಂದು ಡಬ್ಬಿಯನ್ನು ಚೌಕಾಕೃತಿಯಲ್ಲಿ ಕತ್ತರಿಸಿ ಅದರಲ್ಲಿ ಆಹಾರಧಾನ್ಯ ಮತ್ತು ನೀರು ಇಡಲಾಗುತ್ತದೆ. ಪಕ್ಷಿಗಳು ಡಬ್ಬಿಯಲ್ಲಿನ ಆಹಾರಧಾನ್ಯ, ನೀರು ಸೇವಿಸಬಹುದು.

‘ಪೊಲೀಸ್ ಠಾಣೆ, ಎಪಿಎಂಸಿ, ರಸ್ತೆ ಬದಿಗಳಲ್ಲಿ, ಮನೆಗಳ ಮಹಡಿಗಳಲ್ಲಿ, ಗಿಡಮರಗಳ ಪ್ರದೇಶದಲ್ಲಿ ಈ ಡಬ್ಬಿಗಳನ್ನು ಇಟ್ಟು ಎರಡು ದಿನಕ್ಕೊಮ್ಮೆ ಆಹಾರಧಾನ್ಯ, ನೀರು ಒದಗಿಸುತ್ತೇವೆ. ಬೇಸಿಗೆ ಮುಗಿಯುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದು ಸಂಘದ ಅಧ್ಯಕ್ಷ ನಾಗರಾಜ ಮಂಗಾ ತಿಳಿಸಿದರು.

‘ಪಕ್ಷಿಗಳ ಹಿತಕ್ಕಾಗಿ ವಿಶಿಷ್ಟ ಕಾರ್ಯ ಮಾಡುತ್ತೇವೆ ಎಂಬ ನಂಬಿಕೆಯಿಂದ ಗ್ರಾಮಸ್ಥರು ಖಾಲಿ ಡಬ್ಬಿಗಳನ್ನು ನೀಡಿದರು. ಪೊಲೀಸ್ ಇಲಾಖೆಯ ಮಲ್ಲಿಕಾರ್ಜುನ ಅವರು ಆಹಾರಧಾನ್ಯವನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ. ಆಹಾರಧಾನ್ಯವನ್ನು ದೇಣಿಗೆ ರೂಪದಲ್ಲಿ ಪಡೆಯುವುದರ ಜೊತೆಗೆ ಮಾರುಕಟ್ಟೆಯಲ್ಲಿ ಖರೀದಿಸಿಸುತ್ತೇವೆ’ ಎಂದು ಸಂಘದ ಪದಾಧಿಕಾರಿ ಕಲ್ಯಾಣಕುಮಾರ ನಂದೂರ ತಿಳಿಸಿದರು.

‘ಸಂಘದ ಕಾರ್ಯ ಎಲ್ಲರಿಗೂ ಮಾದರಿ’

ಸತ್ಯಮೇವ ಜಯತೆ ಸಾಮಾಜಿಕ ಸೇವಾ ಸಂಘದ ವಿನೂತನ ಕಾರ್ಯಕ್ಕೆ ಭಾನುವಾರ ಮಳಖೇಡನಲ್ಲಿ ಕಾರ್ತಿಕೇಶ್ವರ ಮಠದ ವೀರಗಂಗಾಧರ ಶಿವಾಚಾರ್ಯರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಂಘದ ಪದಾಧಿಕಾರಿಗಳ ಈ ಮಹತ್ವದ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ. ವಿಶಿಷ್ಟ ಆಲೋಚನೆ ಮತ್ತು ನಡೆಯು ಎಲ್ಲರಿಗೂ ಪ್ರೇರಣೆ ನೀಡುತ್ತದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಷ್ ಗುಡಿ, ಮಿರ್ಜಾ ಸರ್ಕಾರ ಸಾಹೇಬ್, ನಾರಾಯಣರಾವ ದೇಶಪಾಂಡೆ, ಕಲ್ಲಪ್ಪ ಮಂಗಾ, ರಮೇಶ ನಂದೂರ, ಹಣಮಂತ ಗೋಳಾ ಮತ್ತು ರಾಮು ಮುಡಬೂಳ ಇದ್ದರು.

*ಬಿಸಿಲಿನ ಪ್ರಖರತೆಗೆ ಪಕ್ಷಿಗಳು ನರಳುವುದು ಕಂಡು ನಾವು ಆಹಾರಧಾನ್ಯ, ನೀರಿನ ವ್ಯವಸ್ಥೆ ಮಾಡಲು ಮುಂದಾದೆವು. ಪಕ್ಷಿಗಳ ರಕ್ಷಣೆಯೇ ನಮ್ಮ ಏಕಮೇವ ಉದ್ದೇಶವಾಗಿದೆ.
– ನಾಗರಾಜ ಮಂಗಾ, ಅಧ್ಯಕ್ಷ, ಸತ್ಯಮೇವ ಜಯತೆ ಸಾಮಾಜಿಕ ಸೇವಾ ಸಂಘ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು