ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಗೋಡ: ಕುಡಿಯುವ ನೀರಿಗಾಗಿ ನಿತ್ಯ ಅಲೆದಾಟ

Last Updated 6 ಮೇ 2020, 20:00 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ಯಲಗೋಡ ಗ್ರಾಮದ ಜನರು ಕುಡಿಯುವ ನೀರಿಗಾಗಿ ನಿತ್ಯ ಅಲೆದಾಡುವಂತಾಗಿದೆ.
ಯಲಗೋಡ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದ್ದು, ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾಗಿದೆ.

ಗ್ರಾಮದಲ್ಲಿ 6 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದಲ್ಲಿರುವ 10 ಕೊಳವೆ ಬಾವಿಗಳಲ್ಲಿ ಎರಡರಲ್ಲಿ ಮಾತ್ರ ನೀರು ಬರುತ್ತದೆ. ಉಳಿದ 8ರಲ್ಲಿ ಕೆಲವು ಕೆಟ್ಟು ನಿಂತರೆ, ಇನ್ನು ಕೆಲವು ಕೊಳವೆ ಬಾವಿಗಳಲ್ಲಿ ನೀರೇ ಬರುತ್ತಿಲ್ಲ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಡಬ್ಬಿ ತಂದು ಇಡಲಾಗಿದೆ. ಆದರೆ ನೀರು ಶುದ್ಧ ಮಾಡುವ ಸಲಕರಣೆಗಳನ್ನು ಅಳವಡಿಸಿಲ್ಲ.

ಪಂಚಾಯಿತಿಯಲ್ಲಿ ಅವ್ಯವಹಾರ ಕುರಿತಂತೆ ಪಿಡಿಒ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ತಮ್ಮ ಮೇಲೆಯೂ ಕೇಸ್ ಆಗಬಹುದು ಎನ್ನುವ ಹೆದರಿಕೆಯಿಂದ ಅಧ್ಯಕ್ಷರು ಸಹ ಪಂಚಾಯಿತಿಗೆ ಆಗಮಿಸುತ್ತಿಲ್ಲ ಎಂಬ ಆರೋಪಗಳಿವೆ.

ಪಂಚಾಯಿತಿಯಲ್ಲಿ ಯಾವುದೇ ಸಭೆ ನಡೆಸದೆ ಮೌನವಾಗಿದ್ದರಿಂದ ಆಡಳಿತದಲ್ಲಿ ಏರುಪೇರಾಗಿದೆ. ಬೇಸಿಗೆಯಲ್ಲಿ ವಿಪರೀತ ಕುಡಿಯುವ ನೀರಿನ ಸಮಸ್ಯೆ ತಲೆದೂರಿದರೂ ಸಹ ಅಧ್ಯಕ್ಷರು ಪಂಚಾಯಿತಿಗೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಆಳಲು. ಗ್ರಾಮದ ಬಹುತೇಕ ವಾರ್ಡ್‍ಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಇಡೀ ಗ್ರಾಮದ ತುಂಬ ಖಾಲಿ ಕೊಡಗಳೇ ಕಂಡುಬಂದವು.

ಕೊಳವೆ ಬಾವಿಗಳಲ್ಲಿ ಒಂದು ಕೊಡ ನೀರು ತುಂಬಲು ಗಟ್ಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮಾಡುವ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ತಾ ಮುಂದು ನಾ ಮುಂದು ಎಂದು ನಿಲ್ಲಬೇಕಾದ ಸ್ಥಿತಿ ಇದೆ.

ಯಲಗೋಡ ಗ್ರಾಮಸ್ಥರು ಬೆಳಗಾದರೆ ಅಣಜಿಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ತರಲು ಬೈಕ್, ಎತ್ತಿನ ಬಂಡಿಗಳ ಮೂಲಕ ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ.

ಮಹಿಳೆಯರು, ಮಕ್ಕಳು, ವೃದ್ದರು, ಕುಡಿಯುವ ನೀರಿಗಾಗಿ ಅಲೆದಾಡಿ ಹೈರಾಣಾಗಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನದ್ದಷ್ಟೇ ಅಲ್ಲ, ಹಲವು ವರ್ಷದಿಂದ ಸಿಸಿ ರಸ್ತೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳು ಮರೀಚಿಕೆಯಾಗಿವೆ.

ಗ್ರಾಮದಲ್ಲಿ ಒಳಚರಂಡಿ ಸಮಸ್ಯೆಯೂ ತೀವ್ರವಾಗಿದೆ. ಜನಪ್ರತಿನಿಧಿಗಳು ಚುನಾವಣೆ ಸಮಯಕ್ಕೆ ಬಂದು ಹೋಗುತ್ತಾರೆ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT