ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲನಿವಾಸಿಗಳಾದ ನಾವೇಕೆ ದಾಖಲೆ ಕೊಡಬೇಕು:ಉರಿಲಿಂಗ ಪೆದ್ದಿ ಮಠದ ಸ್ವಾಮೀಜಿ

ಸಿಎಎ ವಿರೋಧಿ ಸಮಾವೇಶದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನೆ
Last Updated 24 ಜನವರಿ 2020, 16:17 IST
ಅಕ್ಷರ ಗಾತ್ರ

ಕಲಬುರ್ಗಿ: ಈ ದೇಶದಲ್ಲಿರುವ 40 ಕೋಟಿ ದಲಿತರು, 28 ಕೋಟಿ ಅಲ್ಪಸಂಖ್ಯಾತರು ಇಲ್ಲಿನ ಮೂಲನಿವಾಸಿಗಳು. ಇಲ್ಲಿನ ಪೌರರು ಎಂದು ಸಾಬೀತುಪಡಿಸಲು ನಾವೇಕೆ ಸರ್ಕಾರಕ್ಕೆ ದಾಖಲೆ ಸಲ್ಲಿಸಬೇಕು ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ದಲಿತ ಹಾಗೂ ಅಲ್ಪಸಂಖ್ಯಾತರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದ ಜಗತ್‌ ವೃತ್ತದಲ್ಲಿ ಆಯೋಜಿಸಿದ್ದ ‘ಪೌರತ್ವ (ತಿದ್ದುಪಡಿ) ವಿರೋಧಿ ಜನಾಂದೋಲನ’ದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಚಳವಳಿಯಲ್ಲಿ 61 ಸಾವಿರ ಮುಸ್ಲಿಮರು, 10 ಸಾವಿರ ದಲಿತರು ರಕ್ತ ಹರಿಸಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಮುಖಂಡರಿಗೆ ಸೇರಿದ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಸತ್ತಿಲ್ಲ. ಮತ್ತೆ ನಮ್ಮನ್ನೀಗ ಪೌರತ್ವದ ದಾಖಲೆ ಕೇಳುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷಗಳು ತುಂಬಲಿವೆ. ಆ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದು ಬಿಜೆಪಿ ಉದ್ದೇಶ. ಅದಕ್ಕಾಗಿ ಸಿಎಎ, ಎನ್ಆರ್‌ಸಿ, ಎನ್‌ಪಿಆರ್‌ ನಂತಹ ಕಸರತ್ತುಗಳನ್ನು ಮಾಡುತ್ತಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ಆರ್‌ಎಸ್‌ಎಸ್‌ನಲ್ಲಿದ್ದ ವಿ.ಡಿ.ಸಾವರ್ಕರ್‌ದಾಗಿತ್ತು. ಸಾವರ್ಕರ್‌ ಬ್ರಿಟಿಷರಿಗೆ ಬೂಟು ನೆಕ್ಕಿದ ಗುಲಾಮ’ ಎಂದು ಟೀಕಿಸಿದರು.

ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ದೇಶದ ಜನತೆಯ ಶಾಂತಿ ನೆಮ್ಮದಿ ಕೆಡಸುತ್ತಿದೆ.ಜಾತಿ–ಜಾತಿ ನಡುವೆ ಭೇದವ ಹುಟ್ಟಿಸಿ ಜಗಳ ಹೆಚ್ಚಿ ರಾಜಕೀಯ ಮಾಡುತ್ತಿದೆ. ಸಿಎಎ ಅಪಾಯಕಾರಿಯಾ ಕಾಯ್ದೆಯಾಗಿದ್ದು, ಪೌರತ್ವ ಸಾಬೀತಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳನ್ನು ಕೇಳಿದರೂ ಕೊಡುವುದು ಬೇಡ ಎಂದು ಪ್ರತಿಜ್ಞೆ ಮಾಡೋಣ. ಜೈಲಿಗೆ ಹೋದರೂ ಪರವಾಗಿಲ್ಲ. ನೀವ್ಯಾರೂ ಹೆದರಬೇಡಿ’ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆಮಾಡಲು ಸಾಕಷ್ಟು ಕೆಲಸ ಇದ್ದರೂ ಕೆಲಸಕ್ಕೆ ಬಾರದ ಮುಸ್ಲಿಂ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಸೇರಿ ಮೋದಿ, ಅಮಿತ್‌ ಶಾಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೂ ಮೋದಿ ಅವರಿಗೆ ಬುದ್ಧಿ ಬರುತ್ತಿಲ್ಲ.ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮೋದಿ ಓಡಿಸಿ ನಾವೆಲ್ಲರೂ ಕೂಡಿ ದೇಶ ಆಳೋಣ’ ಎಂದು ಹೇಳಿದರು.

ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿ, ‘ಪುಲ್ವಾಮ ದಾಳಿ ನಡೆಯದಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇ ಬರುತ್ತಿರಲಿಲ್ಲ.ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ವಾಮ ಮಾರ್ಗ ಹಿಡಿದು ಹಣ ಹಂಚಿ ಅಧಿಕಾರ ಹಿಡಿದಿದ್ದಾರೆ.ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಜಿ.ಡಿ.ಪಿ ಎಷ್ಟು ಕುಸಿದಿದೆ ಎಂದರೆ ನೆರೆ ದೇಶ ನೇಪಾಳಕ್ಕಿಂತ ಕೆಳಗಿಳಿದಿದೆ.

ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ, ಚಿಂತಕ ಆರ್‌.ಕೆ.ಹುಡಗಿ, ಸಂಜಯ್‌ ಮಾಕಲ್, ನಾಸಿರ್‌ ಹುಸೇನ್‌ ಇತರರು ವೇದಿಕೆಯಲ್ಲಿದ್ದರು.

***

ಅಭಿವೃದ್ಧಿ ಮಾಡುವುದು ಬಿಟ್ಟು ಮೋದಿ, ಅಮಿತ್‌ ಶಾ ದಾರಿ ತಪ್ಪಿದ ಮಕ್ಕಳಂತೆ ಓಡಾಡುತ್ತಿದ್ದಾರೆ. ಈ ದೇಶದಲ್ಲಿ ಭಗವಾ ಝಂಡಾ ಹಾರಿಸುವುದೇ ಅವರ ಅಜೆಂಡಾ

–ಎಂ.ವೈ.ಪಾಟೀಲ, ಶಾಸಕ

ಲೋಕಸಭಾ ಚುನಾವಣೆಗೂ ಮುನ್ನ ಮೋದಿ, ಅಮಿತ್‌ ಶಾ ಈ ಕಾಯ್ದೆ ಜಾರಿಗೆ ತರಬೇಕಿತ್ತು. ಆಗ ಅವರನ್ನು ಎಲ್ಲಿಗೆ ಕೂರಿಸಬೇಕೋ ಅಲ್ಲಿ ಕೂರಿಸುತ್ತಿದ್ದೆವು

ಸುಷ್ಮಾ ಅಂಧಾರೆ, ಚಿಂತಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT