ಗುರುವಾರ , ಜನವರಿ 20, 2022
15 °C

ಕಲಬುರ್ಗಿ: ಕೆಟ್ಟು ನಿಂತ ಬಸ್; ಟಿಕೆಟ್ ಮಷಿನ್‌ ಕಸಿದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ (ಕಲಬುರಗಿ ಜಿಲ್ಲೆ): ಸಮೀಪದ ಮಾದನ ಹಿಪ್ಪರಗಾ ಗ್ರಾಮದ ಬಸ್‌ ನಿಲ್ದಾಣದಲ್ಲಿ ಸೋಮವಾರ ಕಲಬುರಗಿ–ಸೊಲ್ಲಾಪುರ ಮಾರ್ಗದ ಬಸ್‌ ಕೆಟ್ಟು ನಿಂತಿದ್ದು, ಪ್ರಯಾಣದ ಹಣ ವಾಪಸ್‌ ಮಾಡದ್ದರಿಂದ ಆಕ್ರೋಶಗೊಂಡ ಮಹಿಳಾ  ಪ್ರಯಾಣಿಕರೊಬ್ಬರು ನಿರ್ವಾಹಕ ಬಳಸುವ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್‌ (ಇಟಿಎಂ) ಕಿತ್ತುಕೊಂಡ ಘಟನೆ ನಡೆದಿದೆ.

ಈ ಮಹಿಳೆ ಕಲಬುರಗಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದರು. ‘ನಾನು ಸೊಲ್ಲಾಪುರಕ್ಕೆ ಆಸ್ಪತ್ರೆಗೆ ಹೋಗುತ್ತಿದ್ದೇನ. ಬಸ್‌ ಹೊರಡಲು ವಿಳಂಬವಾದರೆ ಆರೋಗ್ಯ ತಪಾಸಣೆ, ಚಿಕಿತ್ಸೆಗೂ ತಡವಾಗುತ್ತದೆ. ಬೇರೆ ಬಸ್‌ ವ್ಯವಸ್ಥೆ ಮಾಡಿ. ಇಲ್ಲದಿದ್ದರೆ ಖಾಸಗಿ ವಾಹನಗಳಲ್ಲಿ ತೆರಳುತ್ತೇವೆ, ನಮ್ಮ ಟಿಕೆಟ್‌ ಹಣ ಮರಳಿಸಿ’ ಎಂದು ಕೆಲ ಪ್ರಯಾಣಿಕರು ಚಾಲಕ ಮತ್ತು ನಿರ್ವಾಹಕರನ್ನು ಒತ್ತಾಯಿಸಿದರು.

‘ಎರಡು ಗಂಟೆಯ ಬಳಿಕ ಪುಣೆ ಬಸ್‌ ಬರುತ್ತದೆ. ಆಗ ಪ್ರಯಾಣ ಮುಂದುವರೆಸಬಹುದು’ ಎಂದು ನಿರ್ವಾಹಕ ಪ್ರಯಾಣಿಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಇದರಿಂದ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ನಿರ್ವಾಹಕನ ಕೈಯಲ್ಲಿದ್ದ ಟಿಕೆಟ್‌ ಮಷಿನ್‌ ಕಸಿದುಕೊಂಡು ನಿಲ್ದಾಣದಿಂದ ಹೊರ ನಡೆದರು.

ನಿಲ್ದಾಣದ ನಿಯಂತ್ರಣಾಧಿಕಾರಿ ಶ್ರೀಶೈಲ ಸ್ವಾಮಿ ಅವರು ಮಹಿಳೆಯ ಮನವೊಲಿಸಿದ ಬಳಿಕ ಮಷಿನ್‌ ಹಿಂದಿರುಗಿಸಿದರು.

‘ಈ ಮಾರ್ಗದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ಬಸ್‌ಗಳು ಆಗಾಗ ಕೆಟ್ಟು ನಿಲ್ಲುತ್ತಿವೆ. ಬದಲಿ ವ್ಯವಸ್ಥೆಗೆ ನಮ್ಮಲ್ಲಿ ಹೆಚ್ಚುವರಿ ಬಸ್‌ಗಳಿಲ್ಲ. ಸಿಬ್ಬಂದಿ ವಿರುದ್ಧ ಪ್ರತಿಭಟಿಸುವ ಬದಲು ಸಮರ್ಪಕ ರಸ್ತೆ ಒದಗಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಿ. ಆಗ ಉತ್ತಮ ಸೇವೆ ನೀಡಲು ನಮಗೂ ಅನುಕೂಲ ಆಗುತ್ತದೆ’ ಎಂದು ಶ್ರೀಶೈಲ ಸ್ವಾಮಿ ಹೇಳಿದರು.

50ಕ್ಕೂ ಅಧಿಕ ಪ್ರಯಾಣಿಕರು ಎರಡು ಗಂಟೆಗಳ ಕಾಲ ನಿಲ್ದಾಣದಲ್ಲಿ ಕಾದರು. ಕೆಲವರು ಖಾಸಗಿ ವಾಹನಗಳಲ್ಲಿ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು