ಶನಿವಾರ, ಜೂನ್ 19, 2021
28 °C
ಜಿಲ್ಲಾ ಪಂಚಾಯಿತಿ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿಗೆ ಅವಿರೋಧ ಆಯ್ಕೆ, ಕಾರ್ಯಕರ್ತರ ಹರ್ಷ

ಸ್ಥಾಯಿ ಸಮಿತಿಗಳಿಗೆ ಗೌತಮ, ದಿಲೀಪ್, ಗುರುಶಾಂತ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಲಬುರ್ಗಿ ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದಿಲೀಪ್ ಆರ್. ಪಾಟೀಲ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೌತಮ ವೈಜನಾಥ ಪಾಟೀಲ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗುರುಶಾಂತಗೌಡ ಶಾಲಿವಾನ ಪಾಟೀಲ ಅವರು ಶುಕ್ರವಾರ ಆಯ್ಕೆಯಾದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ, 2020-21ನೇ ಸಾಲಿನ ಉಳಿದ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆ ನಡೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿಗಳಾಗಿದ್ದ ಸಿಇಒ ಡಾ.ಪಿ. ರಾಜಾ ಅವರು ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ಚುನಾವಣೆ ನಡೆಸಿದರು.

ಸಾಮಾಜಿಕ ಸ್ಥಾಯಿ ಸಮಿತಿಯ ಹೊಣೆ ಹೊತ್ತ ದಿಲೀಪ್ ಅವರು ಫರಹತಾಬಾದ ಕ್ಷೇತ್ರದ ಕಾಂಗ್ರೆಸ್ ಸದಸ್ಯ. ಆರೋಗ್ಯ ಸಮಿತಿ ಅಧ್ಯಕ್ಷರಾದ ಗೌತಮ ಪಾಟೀಲ ಅವರು ಚಿಂಚೋಳಿ ತಾಲ್ಲೂಕಿನ ಐನೊಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗುರುಶಾಂತಗೌಡ ಅವರ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದಾರೆ. ಮೂರು ಸಮಿತಿಗಳಿಗೆ ಅಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿಗ ಕಟಿಸಿದರು.

ಬೆಂಬಲಿಗರ ಹರ್ಷ: ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದ ಮುಂದೆ ಸೇರಿದ್ದ ಅವರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದರು. ಆಯ್ಕೆಯಾದವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು. ಮೆರೆವಣಿಗೆ ಮೂಲಕ ತಮ್ಮ ಪಕ್ಷಗಳ ಕಚೇರಿಗೆ ತೆರಳಿದರು.

ಬಳಿಕ ತಮ್ಮ ಕ್ಷೇತ್ರದ ಶಾಸಕರ ಮನೆಗಳಿಗೆ ಭೇಟಿ ನೀಡಿದರು. ದಿಲೀಪ್ ಪಾಟೀಲ ಅವರು ಅಫಜಲಪುರ ಶಾಸಕ ಎಂ.ವೈ.ಪಾಟೀಲ್‍ ಅವರ ಮನೆಗೆ ತೆರಳಿ ಕೃತಜ್ಞತೆ ಸಲ್ಲಿಸಿದರು.

ಹೀಗಿದ್ದಾರೆ ಸ್ಥಾಯಿ ಸಮಿತಿ ಸದಸ್ಯರು: ಐದು ಸ್ಥಾಯಿ ಸಮಿತಿಗಳಲ್ಲಿ ಹಣಕಾಸು ಮತ್ತು ಯೋಜನೆ ಸ್ಥಾಯಿ ಸಮಿತಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೇ ಆದ ಸುವರ್ಣಾ ಮಲಾಜಿ ಅಧ್ಯಕ್ಷರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿಗೆ ಉಪಾಧ್ಯಕ್ಷರಾದ ಶೋಭಾ ಸಿದ್ದು ಸಿರಸಗಿ ಅಧ್ಯಕ್ಷರಾಗಿರುತ್ತಾರೆ. ಹೀಗಾಗಿ ಉಳಿದ ಮೂರು ಸಮಿತಿಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಚುನಾವಣೆ ಕಾಲಕ್ಕೆ ಒಬ್ಬ ಸದಸ್ಯ ಗೈರಾಗಿದ್ದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಅನಸೂಯಾ ಶರಣಪ್ಪ ತಳವಾರ, ಗಂಗಮ್ಮ ಮಹಾದೇವಪ್ಪ ದೇಸಾಯಿ, ಗುರುಶಾಂತಗೌಡ ಶಾಲಿವಾನ, ಭೌರಮ್ಮ ಮಹಾದೇವಗೌಡ ಕರೂಟಿ, ರಾಮಲಿಂಗರೆಡ್ಡಿ ದೇಶಮುಖ, ರೇವಣಸಿದ್ದಪ್ಪ ಸಂಕಾಲಿ, ಶಾರದಮ್ಮ ಜೈಪಾಲರಡ್ಡಿ ಸದಸ್ಯರಾಗಿದ್ದಾರೆ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ ದಿಲೀಪ್ ಪಾಟೀಲ, ಶಿವರುದ್ರಪ್ಪ ಭೀಣಿ, ದೆವಮ್ಮ ಕರೆಪ್ಪ ಪಿಲ್ಲಿ, ಶಶಿಕಲಾ ರಾಜಶೇಖರ ತಿಮ್ಮನಾಯಕ, ನಾಗೇಶಪ್ಪ ಭವನಪ್ಪ ಕಾಳಾ, ದಂಡಪ್ಪ ಸಾಹು ಕುರಳಗೇರಾ, ವಿಜಯಲಕ್ಷ್ಮೀ ಮಹಾದೇವ ರಾಗಿ ಅವರು ಸದಸ್ಯರಾಗಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಅನ್ನಪೂರ್ಣ ಹೀರಾಪುರ, ರಾಜೇಶ ಗುತ್ತೇದಾರ, ಹೀರಾಬಾಯಿ ರಾಮಚಂದ್ರ ಜಾಧವ, ಸಂತೋಷಕುಮಾರ ವಿಠಲರಾವ ಮಾಲಿಪಾಟೀಲ, ಗೌತಮ ವೈಜನಾಥ ಪಾಟೀಲ, ಕಮಲಾಬಾಯಿ ಮರೆಪ್ಪ ಬಡಿಗೇರ, ತೈತನಿ ಸಲ್ಮಾಂ ಬೇಗಂ ಮೆಹಬೂಬ ಸದಸ್ಯರಾಗಿದ್ದಾರೆ.

ರೈತರ ಸಮಸ್ಯೆಗೆ ಶೀಘ್ರ ಸ್ಪಂದನೆ: ಚುನಾವಣೆ ನಂತರ ಮಾತನಾಡಿದ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಅವರು, ’ಮೂಲತ ನಾನು ರೈತ ಮನೆತನದಿಂದ ಬಂದಿದ್ದು, ಕೃಷಿಯನ್ನೇ ಮುಂದುವರಿಸಿದ್ದೇನೆ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ನನ್ನ ಭಾಗ್ಯ. ಈ ಬಾರಿ ರೈತರು ಕೊರೊನಾ ಹಾಗೂ ಮಳೆಯ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗುವ ಅವಶ್ಯಕತೆ ಹೆಚ್ಚಿದೆ. ಹಿಂದಿಗಿಂತ ಈಗ ಜವಾಬ್ದಾರಿ ಹೆಚ್ಚಾಗಿದೆ‘ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು