ಬುಧವಾರ, ಆಗಸ್ಟ್ 4, 2021
26 °C
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಘೋಷಣೆ: ₹ 8 ಲಕ್ಷ ಬಹುಮಾನ

ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಆಳಂದ ರಸ್ತೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ 2020ನೇ ಸಾಲಿನ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿಯು ₹ 8 ಲಕ್ಷ ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರ ಹೊಂದಿದ್ದು, ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವರ್ಚುವಲ್ ವೇದಿಕೆಯ ಮೂಲಕ ಪ್ರಶಸ್ತಿಯನ್ನು ಘೋಷಿಸಿದರು.

ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ. ದೇಶದಲ್ಲಿರುವ ಒಟ್ಟು 722 ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರವು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೊಗರಿ ಬೆಳೆಯಲ್ಲಿ ಮುಖ್ಯವಾಗಿ ಕಂಡು ಬರುವ ನೆಟೆ ಮತ್ತು ಗೊಡ್ಡುರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ, ಪಲ್ಸ್‍ಮ್ಯಾಜಿಕ್ ತಂತ್ರಜ್ಞಾನದ ಬಳಕೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ತಂತ್ರಜ್ಞಾನಗಳನ್ನು ರೈತರಿಗೆ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದ್ದರು. ಇದರಿಂದ ಹೆಚ್ಚಿನ ಹಾಗೂ ಗುಣಮಟ್ಟದ ತೊಗರಿ ಇಳುವರಿ ಪಡೆದು ಆರ್ಥಿಕವಾಗಿ ಬಲಗೊಳ್ಳುವಲ್ಲಿ ಕೇಂದ್ರ ತೊಗಡಿಸಿಕೊಂಡಿತ್ತು.

ಹವಾಮಾನ ಮುನ್ಸೂಚನೆ, ಬೀಜೋಪಚಾರ ಆಂದೋಲನ, ಸಿರಿಧಾನ್ಯಗಳ ಮೌಲ್ಯವರ್ಧನೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಮತ್ತು ನೀರಿನ ಪರೀಕ್ಷೆಯ ಆರೋಗ್ಯ ಕಾರ್ಡ್‌, ವೈಜ್ಞಾನಿಕ ಹೈನುಗಾರಿಕೆ, ಕೊಟ್ಟಿಗೆ ಪದ್ಧತಿಯಲಿ ಆಡು ಸಾಕಾಣಿಕೆ, ಸಿರೋಹಿ ಹೋತದಿಂದ ಸ್ಥಳೀಯ ಆಡುಗಳ ಉನ್ನತಿಕರಣ, ಆಧುನಿಕ ತೋಟಗಾರಿಕೆ, ಪುಷ್ಪಕೃಷಿ, ಹಣ್ಣು ಮತ್ತು ತರಕಾರಿ ಮೌಲ್ಯವರ್ಧನೆ, ತಾರಸಿ ಕೈತೋಟ, ಸಸ್ಯ ಅಭಿವೃದ್ದಿ ತಾಂತ್ರಿಕತೆ, ಒಣ ಬೇಸಾಯ ತೋಟಗಾರಿಕೆ, ಅರಣ್ಯ ಕೃಷಿ, ಎರೆಹುಳು ಗೊಬ್ಬರ ಘಟಕ, ಅಜೋಲಾ ಘಟಕ, ಜಲಕೃಷಿ ಘಟಕ ಹಾಗೂ ಇ-ಸ್ಯಾಪ್ ತಂತ್ರಜ್ಞಾನಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿದೆ. ಈ ಸಾಧನೆಯ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವರ್ಚುವಲ್ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿ.ವಿ. ಕುಲಪತಿ ಡಾ. ಕೆ.ಎನ್. ಕಟ್ಟೀಮನಿ, ವಿಸ್ತರಣಾ ನಿರ್ದೇಶಕ ಡಾ. ಡಿ.ಎಂ. ಚಂದರಗಿ, ಕಲಬುರ್ಗಿ ಕೆವಿಕೆ ಮುಖ್ಯಸ್ಥ ಡಾ. ರಾಜು ತೆಗ್ಗಳ್ಳಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು