ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ ಲಕ್ಷಣ ಕಂಡರೆ ಮಣಿಪಾಲಕ್ಕೆ ಕಳುಹಿಸಿ: ಶಾಸಕ ಹರತಾಳು ಹಾಲಪ್ಪ

ಶಾಸಕ ಎಚ್‌. ಹಾಲಪ್ಪ ಹರತಾಳು ಕಟ್ಟುನಿಟ್ಟಿನ ಸೂಚನೆ
Last Updated 21 ಮಾರ್ಚ್ 2020, 13:57 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಯಾವುದೇ ಭಾಗದಲ್ಲಿ ಯಾವುದೇ ವ್ಯಕ್ತಿಗೆ ಮಂಗನ ಕಾಯಿಲೆ ಲಕ್ಷಣ ಕಂಡುಬಂದರೆ ರಕ್ತ ಪರೀಕ್ಷೆಯ ವರದಿ ಬರುವವರೆಗೂ ಕಾಯದೆ ಕೂಡಲೇ ರೋಗಿಯನ್ನು ಮಣಿಪಾಲದ ಆಸ್ಪತ್ರೆಗೆ ಕಳುಹಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಮೊಗ್ಗದಿಂದ 80 ರಿಂದ 100 ಕಿ.ಮೀ. ದೂರದಲ್ಲಿರುವ ಕಾರ್ಗಲ್, ಅರಳಗೋಡು, ತುಮರಿ ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚಾಗಿ ಕಾಣಿಸಿಕೊಂಡಿದೆ. ಇಲ್ಲಿನ ರೋಗಿಗಳ ರಕ್ತದ ಮಾದರಿ ತೆಗೆದು ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿ ಅಲ್ಲಿಂದ ವರದಿ ಬರುವವರೆಗೆ ಕಾಯುತ್ತ ಕುಳಿತರೆ ಅಲ್ಲಿಯವರೆಗೆ ರೋಗಿಯ ಆರೋಗ್ಯ ಸ್ಥಿತಿ ಸಾಕಷ್ಟು ಬಿಗಡಾಯಿಸಿರುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಸಲಹೆ ನೀಡಿದರು.

‘ಕಾರ್ಗಲ್, ಅರಳಗೋಡು ಭಾಗದಲ್ಲಿ ಸದಾ ಕೃತಕ ಉಸಿರಾಟಕ್ಕೆ ಆಮ್ಲಜನಕ ಒದಗಿಸುವ ಸೌಲಭ್ಯವಿರುವ ಮೂರು ಆಂಬುಲೆನ್ಸ್ ಸಿದ್ದವಿರಬೇಕು. ಇದರಿಂದ ಆ ಭಾಗದ ರೋಗಿಗಳ ಆತ್ಮಸ್ಥೈರ್ಯ ಹೆಚ್ಚುತ್ತದೆ. ತುರ್ತಾಗಿ ಗ್ರಾಮೀಣ ಭಾಗದ ರೋಗಿಗಳನ್ನು ದೂರದ ಊರಿನ ಆಸ್ಪತ್ರೆಗೆ ಕಳುಹಿಸಲು ಸಹಕಾರಿಯಾಗುತ್ತದೆ.ಕಳೆದ ವರ್ಷ ದೊಡ್ಡ ಪ್ರಮಾಣದಲ್ಲಿ ಮಂಗನ ಕಾಯಿಲೆಯಿಂದಾಗಿ ಸಾವು ಸಂಭವಿಸಿದೆ. ಈ ವರ್ಷ ಆ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ಕಾರದಿಂದ ಯಾವುದೇ ಸೌಲಭ್ಯ ಬೇಕಾದರೂ ಒದಗಿಸಲು ಸಿದ್ದ. ಆದರೆ ಇಂತಹ ಸೌಲಭ್ಯ ಬೇಕು ಎಂದು ನೀವು ಕೇಳದೆ ಇದ್ದರೆ ಅಥವಾ ವಿಷಯ ಮುಚ್ಚಿಟ್ಟರೆ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕೆಎಫ್‌ಡಿ ಘಟಕದ ಡಾ.ಕಿರಣ್, ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಂಗನ ಕಾಯಿಲೆ ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಾಯಿಲೆ ತಡೆಯಲು ಲಸಿಕೆ ಹಾಕುವ, ಡಿಎಂಪಿ ತೈಲ ವಿತರಿಸುವ ಕೆಲಸ ಸತತವಾಗಿ ನಡೆದಿದೆ’ ಎಂದರು.

‘ಮಂಡವಳ್ಳಿ ಗ್ರಾಮದ ಸುಮಿತ್ರಾ ಎಂಬುವವರಿಗೆ ಮಂಗನ ಕಾಯಿಲೆ ಸೋಂಕು ತಗುಲಿದ್ದರೂ ಅವರು ಮಣಿಪಾಲ ಆಸ್ಪತ್ರೆಗೆ ತೆರಳಲು ನಿರಾಕರಿಸುತ್ತಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಹೇಗಾದರೂ ಅವರ ಮನವೊಲಿಸಿ ಮಣಿಪಾಲಕ್ಕೆ ಕಳುಹಿಸಬೇಕು’ ಎಂದು ಕೆಎಫ್‌ಡಿ ವಿಶೇಷಾಧಿಕಾರಿ ಡಾ.ರಾಜು ಹೇಳಿದರು.

ಉಪ ವಿಭಾಗಾಧಿಕಾರಿ ಡಾ.ಎಲ್.ನಾಗರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್, ಡಿಎಫ್ಒ ಮೋಹನ್ ಕುಮಾರ್, ಡಿವೈಎಸ್‌ಪಿ ವಿನಾಯಕ ಎನ್. ಶೆಟ್ಟಿಗಾರ್, ನಗರಸಭೆ ಪೌರಾಯುಕ್ತ ಎಸ್.ರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT