ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆ ಕಡಿಮೆಯಾಗಿದ್ದರೂ, ಶೀತ, ಗೋಡೆ ಕುಸಿತ ಮೊದಲಾದ ಕಾರಣಗಳಿಂದ 4 ಜಾನುವಾರುಗಳು ಮೃತಪಟ್ಟಿವೆ. ಈ ಮೂಲಕ ಪ್ರಸಕ್ತ ಮುಂಗಾರಿನಲ್ಲಿ ಮೃತಪಟ್ಟ ಜಾನುವಾರುಗಳ ಸಂಖ್ಯೆ 21ಕ್ಕೆ ತಲುಪಿದೆ.
ಸದ್ಯ, ಪ್ರವಾಹ ಇಳಿಮುಖವಾಗಿದ್ದರೂ 4 ಕಡೆ ಕಾಳಜಿ ಕೇಂದ್ರಗಳು ಸಕ್ರಿಯವಾಗಿವೆ. ಭಾಗಮಂಡಲದ ಕಾಶಿಮಠ, ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆ, ಸೋಮವಾರಪೇಟೆಯ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹುದಿಕೇರಿಯ ಬಲ್ಯಮಂಡೂರು ಅಂಗನವಾಡಿ ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳು ಸಕ್ರಿಯವಾಗಿವೆ.
ಭಾನುವಾರ ಯಾವುದೇ ಮನೆಗಳೂ ಕುಸಿದಿಲ್ಲ. ಆದರೆ, 39 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.