ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಹೊಳೆಯಲ್ಲಿ ಹಸಿರಿನ ಹೊಳೆ...!

ಸುರಿಯುತ್ತಿರುವ ಮಳೆಗೆ ಮೈದಳೆದ ಹಸಿರ ಸಿರಿ, ಚಿಗುರೊಡೆದ ಗಿಡ, ಮರಗಳು
Published 25 ಮೇ 2024, 4:57 IST
Last Updated 25 ಮೇ 2024, 4:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು :

ಹಸುರತ್ತಲ್ ಹಸುರಿತ್ತಲ್
ಹಸುರೆತ್ತಲ್ ಕಡಲಿನಲಿ
ಹಸುರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!

ಇದು ಕುವೆಂಪು ಅವರ ‘ಹಸುರು’ ಕವನದ ಕೊನೆಯಲ್ಲಿ ಬರುವ ಸಾಲುಗಳು.  ಈ ಸಾಲುಗಳು ಇಲ್ಲಿನ ನಾಗರಹೊಳೆ ಅರಣ್ಯವನ್ನು ಕಂಡಾಗ ನೆನಪಿನ ಪಟಲದಲ್ಲಿ ಸುಳಿಯುತ್ತವೆ.

ಕೆಲವೇ ದಿನಗಳ ಹಿಂದೆಯಷ್ಟೇ ಸಂಪೂರ್ಣ ಒಣಗಿ ಹೋಗಿದ್ದ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಈಗ ಹಸಿರಿನಿಂದ ಕಂಗೊಳಿಸುತ್ತಿದೆ.

10 ದಿನಗಳಿಂದ ಬಿಟ್ಟು ಬಿಟ್ಟು ಬೀಳುತ್ತಿರುವ ಮುಂಗಾರು ಪೂರ್ವ ಮಳೆಗೆ ಅರಣ್ಯದ ಗಿಡಮರಗಳು ಚಿಗುರಿವೆ. ಲಂಟಾನ ಮತ್ತಿತರ ಸಸ್ಯಗಳ ಹಸಿರು ಇಡೀ ಅರಣ್ಯವನ್ನು ಸಸ್ಯಶ್ಯಾಮಲೆಯಾಗಿಸಿದೆ. 15 ದಿನಗಳ ಹಿಂದೆ ಬರಿ ಮಣ್ಣಿನಿಂದ ಕೂಡಿದ್ದ ನೆಲದಲ್ಲಿ ಈಗ ಹಸಿರು ಮೂಡಿ ಜಿಂಕೆ, ಕಾಡುಕೋಣ, ಕಾಡುಕುರಿ ಮತ್ತಿತರ ವನ್ಯಜೀವಿಗಳಿಗೆ ಉತ್ತಮ ಆಹಾರ ಲಭಿಸುತ್ತಿದೆ. ಆಹಾರಕ್ಕಾಗಿ ಅರಣ್ಯ  ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿದ್ದ ಇವುಗಳು ಮತ್ತೆ ತಮ್ಮ ತಮ್ಮ ಆವಾಸಸ್ಥಾನಗಳಿಗೆ ಮರಳುತ್ತಿವೆ.

ಮುಗಿಲೆತ್ತರ ಬೆಳೆದಿರುವ ಮರಗಳ ಹಸಿರಿನ ಸೊಬಗು ಪ್ರಕೃತಿ ಪ್ರಿಯರ ಮನ ಸೆಳೆಯುತ್ತಿದೆ. ಮತ್ತೊಂದು ಕಡೆ ಏಳೆಂಟು ವರ್ಷಗಳಿಂದ ಹೆಸರಿಲ್ಲದಂತಾಗಿದ್ದ ಬಿದಿರು ಈಗ ದಟ್ಟವಾಗಿ ಬೆಳೆದು ಆನೆಗಳಿಗೂ ಆಹಾರ ಒದಗಿಸುತ್ತಿವೆ.

ಮೇ 5ರವರೆಗೂ ತಿತಿಮತಿಯಿಂದ ಅಳ್ಳೂರುವರೆಗೆ, ಆನೆಚೌಕೂರಿನಿಂದ ಪಿರಿಯಾಪಟ್ಟಣದ ಬೂದಿತಿಟ್ಟುವರೆಗೆ ಹೆದ್ದಾರಿ ಬದಿಯ ಅರಣ್ಯ ಒಣಗಿ ಬೆಂಕಿಗೆ ಆಹುತಿಯಾಗುವಂತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಬೀಳುತ್ತಿರುವ ಉತ್ತಮ ಮಳೆಗೆ ಅರಣ್ಯದ ವಾತಾವರಣವೇ ಬದಲಾಗಿದೆ. ಈ ಮಾರ್ಗದ ರಸ್ತೆ ಬದಿಯಲ್ಲಿರುವ ಗುಲ್ ಮೊಹರ್ ಮರಗಳು ಹೂ ಬಿಟ್ಟು ಕೆಂಬಣ್ಣದ ರಂಗು ಚೆಲ್ಲಿವೆ.

ತಿತಿಮತಿ ಬಳಿಯ ಮಜ್ಜಿಗೆಹಳ್ಳದಿಂದ ಆರಂಭಗೊಳ್ಳುವ ರಾಷ್ಟ್ರೀಯ ಉದ್ಯಾನ ಪಿರಿಯಾಪಟ್ಟಣದ ಅಳ್ಳೂರುವರೆಗಿನ 11 ಕಿಮೀ ದೂರದ ಹೆದ್ದಾರಿ ಬದಿಯಲ್ಲಿ ಹುಲ್ಲು ಹಸಿರೊಡೆದು ಜಿಂಕೆಗಳನ್ನು ಆಕರ್ಷಿಸುತ್ತಿವೆ. ಬೇಸಿಗೆಯಲ್ಲಿ ಜಿಂಕೆಗಳ ಮುಖವನ್ನೇ ಕಾಣದ ಈ ಹೆದ್ದಾರಿ ಬದಿಯಲ್ಲಿ ಈಗ ಜಿಂಕೆಗಳು ಹಿಂಡು ಹಿಂಡಾಗಿ ಮೇಯುತ್ತಿವೆ. ಇದು ಪ್ರಯಾಣಿಕರಿಗೆ ಮುದ ನೀಡುತ್ತಿದ್ದು, ವಾಹನದಲ್ಲಿ ಸಂಚರಿಸುವಾಗಲೇ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಆನಂದಿಸುವುದು ಸಾಮಾನ್ಯವಾಗಿದೆ.

ಆನೆ ಮತ್ತು ಕಾಡುಕೋಣಗಳು ಕೂಡ ರಸ್ತೆ ಬದಿಯಲ್ಲಿ ಆಹಾರ ತಿನ್ನುತ್ತಾ ನಿಂತುಕೊಳ್ಳುವ ದೃಶ್ಯವೂ ಈಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ. ಇವುಗಳನ್ನು ಕೂಡ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಖುಷಿಪಡುತ್ತಿದ್ದಾರೆ.

ಅರಣ್ಯದಂಚಿನ ಕೆರೆಗಳಾದ ಬೂದುತಿಟ್ಟು, ಅಳ್ಳೂರು, ಮಾಲಂಗಿ, ಮುತ್ತೂರು, ಮಜ್ಜಿಗೆಹಳ್ಳ ಮೊದಲಾದ ಭಾಗಗಳ ಕೆರೆಗಳು ನೀರಿಲ್ಲದೆ ಒಣಗಿ ಹೋಗಿದ್ದವು. ಈಗ ಈ ಕೆರೆಗಳಲ್ಲಿ ನೀರು ತುಂಬಿ ಕಪ್ಪೆಗಳು ಅತ್ತಿತ್ತಂದ ನೆಗೆದಾಡುತ್ತಾ ಮನಸೋ ಇಚ್ಚೆ ಕೂಗುತ್ತಿವೆ.

ಒಣಗಿ ಹೋಗಿ ದೂಳು ಏಳುತ್ತಿದ್ದ ಭೂಮಿಯಲ್ಲಿ, ಒಣಗಿ ಹೋಗಿದ್ದ ಹುಲ್ಲುಗಳೇ ಕಾಣಿಸುತ್ತಿದ್ದ ಕಡೆಗಳಲ್ಲಿ ಈಗ ಬೀಜದಿಂದ ಮೊಳಕೆಯೊಡೆದ ಪೈರುಗಳು ಕಾಣಿಸುತ್ತಿವೆ. ಎಲ್ಲೆಲ್ಲೂ ಹಸಿರು ಕಾಣ ಬರುತ್ತಿದ್ದು, ಇಡೀ ಕಾಡೇ ಮಳೆಯಿಂದ ಉಲ್ಲಾಸಿತವಾಗಿದೆ.

ನಾಗರಹೊಳೆಯ ಅರಣ್ಯದಲ್ಲಿ ಈಚೆಗೆ ಕಂಡು ಬಂದ ಹಸಿರ ಸಿರಿ
ನಾಗರಹೊಳೆಯ ಅರಣ್ಯದಲ್ಲಿ ಈಚೆಗೆ ಕಂಡು ಬಂದ ಹಸಿರ ಸಿರಿ
ನಾಗರಹೊಳೆಯಲ್ಲಿ ಒಣಗಿ ಹೋಗಿದ್ದ ಕಡೆಯಲ್ಲೆಲ್ಲ ಹಸಿರು ಹುಲ್ಲು ಗಿಡಗಳು ಹುಟ್ಟಿ ಕಂಗೊಳಿಸುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ನಾಗರಹೊಳೆಯಲ್ಲಿ ಒಣಗಿ ಹೋಗಿದ್ದ ಕಡೆಯಲ್ಲೆಲ್ಲ ಹಸಿರು ಹುಲ್ಲು ಗಿಡಗಳು ಹುಟ್ಟಿ ಕಂಗೊಳಿಸುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ನಾಗರಹೊಳೆಯ ಆನೆಚೌಕೂರು ಸಮೀಪ ರಸ್ತೆಯುದ್ಧಕ್ಕೂ ಹಸಿರು ಕಂಗೊಳಿಸುತ್ತಿರುವ ದೃಶ್ಯ ಕಂಡು ಬಂತು
ನಾಗರಹೊಳೆಯ ಆನೆಚೌಕೂರು ಸಮೀಪ ರಸ್ತೆಯುದ್ಧಕ್ಕೂ ಹಸಿರು ಕಂಗೊಳಿಸುತ್ತಿರುವ ದೃಶ್ಯ ಕಂಡು ಬಂತು
ನಾಗರಹೊಳೆ ಅರಣ್ಯದಲ್ಲಿ ಹಸಿರು ಕಂಗೊಳಿಸುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ನಾಗರಹೊಳೆ ಅರಣ್ಯದಲ್ಲಿ ಹಸಿರು ಕಂಗೊಳಿಸುತ್ತಿರುವ ದೃಶ್ಯ ಈಚೆಗೆ ಕಂಡು ಬಂತು

ನಾಗರಹೊಳೆ ಭಾಗದಲ್ಲೆ ಹೆಚ್ಚು ಸುರಿದ ಮಳೆ ಕಳೆದ ವರ್ಷ ಇಲ್ಲಿ ಮಳೆ ಕಡಿಮೆ ಇತ್ತು ಹಸಿರ ಸಿರಿಗೆ ಮನಸೋತ ‍ಪ್ರವಾಸಿಗರು

ದೂರವಾದ ಬೆಂಕಿ ಆತಂಕ

ಪ್ರಸಕ್ತ ಬೇಸಿಗೆ ಹೇಗಿತ್ತೆಂದರೆ ಒಂದನಿ ಮಳೆಯೂ ಜನವರಿಯಿಂದ ಮೇವರೆಗೆ ಬಾರದೇ ಕಾಡೆಲ್ಲವೂ ಒಣಗಿ ಹೋದಂತೆ ಭಾಸವಾಗುತ್ತಿತ್ತು. ಒಣಗಿದ ಮರ ಗಿಡಗಳು ಜೀವ ಕಳೆದುಕೊಂಡಿವೆಯೋ ಏನೋ ಎಂಬಂತಿತ್ತು. ಸ್ವಲ್ಪ ಬೆಂಕಿಯ ಕಿಡಿ ಬಿದ್ದರೂ ಇಡೀ ಕಾಡೇ ಧಗಧಗಿಸಬಹುದು ಎಂಬ ಆತಂಕ ಮೂಡಿತ್ತು. ಅದಕ್ಕಾಗಿಯೇ ಅರಣ್ಯ ಇಲಾಖೆಯ ಸಿಬ್ಬಂದಿ ಹಗಲಿರುಳೂ ಬೆಂಕಿ ಬೀಳದಂತೆ ನಿಗಾ ವಹಿಸಿದ್ದರು. ಬೆಂಕಿಯ ಹೊಗೆ ಎಲ್ಲಿ ಕಾಣುವುದೋ ಎಂಬ ಆತಂಕದಲ್ಲೇ ಎಲ್ಲೆಡೆ ವೀಕ್ಷಿಸುತ್ತಿದ್ದರು. ಈಗ ಸತತವಾಗಿ ಸುರಿಯುತ್ತಿರುವ ಮಳೆ ಬೆಂಕಿ ಆತಂಕವನ್ನು ಸಂಪೂರ್ಣ ದೂರ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT