ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡೆಹೊಸೂರು: ಗ್ರಾಮಸಭೆಗೆ ಅಧಿಕಾರಿಗಳ ಗೈರು, ಸಭೆ ಮೊಟಕು

ಚರಂಡಿ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ ಗ್ರಾಮಸ್ಥರ ಆರೋಪ
Published 31 ಜನವರಿ 2024, 3:00 IST
Last Updated 31 ಜನವರಿ 2024, 3:00 IST
ಅಕ್ಷರ ಗಾತ್ರ

ಕುಶಾಲನಗರ: ಅಧಿಕಾರಿಗಳ ಗೈರು ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಗ್ರಾಮಸಭೆ ಮೊಡುಕುಗೊಳಿಸಿ ಮುಂದೂಡಲಾಯಿತು.

ಗ್ರಾಮಸಭೆ ಪಂಚಾಯತಿ ಅಧ್ಯಕ್ಷೆ ಪಿ.ಎಂ.ರುಕ್ಮಿಣಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಸಭೆಗೆ ಅಧಿಕಾರಿಗಳ ಗೈರು ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಯಬೇಕಿದೆ. ಇಲಾಖೆ ಅಧಿಕಾರಿಗಳ ಬದಲಿಗೆ ಗ್ರಾಮ ಪಂಚಾಯತಿ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಪಂಚಾಯತಿ ಆಡಳಿತ ವಹಿಸಿಕೊಂಡಲ್ಲಿ‌ ಮಾತ್ರ ಸಭೆ ಮುಂದುವರೆಸಿ. ಇಲ್ಲದಿದ್ದಲ್ಲಿ ಸಭೆ ಮುಂದೂಡಿ ಎಂದು ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಯಿತು.

ಈ ವೇಳೆ ಗುಡ್ಡೆಹೊಸೂರು- ರಸಲ್ ಪುರ ರಸ್ತೆ ಕಾಮಗಾರಿ ನಡೆಸುವಾಗ ರಸ್ತೆ ಬದಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಚರಂಡಿ ನಿರ್ಮಾಣ ಕೂಡ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿ ಪೂರ್ಣಗೊಂಡು‌ ಮೂರು ವರ್ಷ ಕಳೆದಿದೆ. ಅಧಿಕಾರಿ ಬದಲಿಗೆ ಸಹಾಯಕರು ಸಭೆಯಲ್ಲಿ ಪಾಲ್ಗೊಂಡಲ್ಲಿ ಅವರಿಂದ ಸಮಸ್ಯೆ‌ ನಿವಾರಣೆ ಸಾಧ್ಯವಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಕಡ್ಡಾಯವಾಗಿ ಸಭೆಗೆ ಕರೆಸುವಂತೆ ಒತ್ತಾಯಿಸಿದರು.

ಸಹಾಯಕ ಎಂಜಿನಿಯರ್ ಅವರ ಸಹಾಯಕರಿಂದ ಗ್ರಾಮಸ್ಥರ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆ ಮುಂದೂಡುವಂತೆ ಪಟ್ಟು ಹಿಡಿದರು.

ಅಧಿಕಾರಿಗಳ ಅನುಪಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಅವರನ್ನು ಸಭೆಗೆ ಕರೆಸಿ ನಂತರ ಸಭೆ ಮುಂದುವರೆಸಲು ಗ್ರಾಮಸ್ಥರಾದ ಜಗ, ಶಶಿಕುಮಾರ್, ಸಂತೋಷ್, ಸಲಿ ಒತ್ತಾಯಿಸಿದರು.

ಸಭೆಯ ನೋಡಲ್ ಅಧಿಕಾರಿ ಬಿಇಒ‌ ಕಚೇರಿಯ ಲೋಕೇಶ್, ‘ಸೋಮವಾರಪೇಟೆಯಲ್ಲಿ ರಾಜ್ಯಮಟ್ಟದ ಆಡಳಿತಾತ್ಮಕ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ. ಲೋಕೋಪಯೋಗಿ ಇಲಾಖೆ ಅಭಿಯಂತರರ ಸಹಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಗ್ರಾಮಸಭೆಗಳಿಗೆ ತಾಲ್ಲೂಕು‌ ಮಟ್ಟದ ಅಧಿಕಾರಿಗಳ ಹಾಜರಿಗೆ ಒತ್ತಾಯಿಸುವಂತಿಲ್ಲ. ಮುಂದೂಡಿದ ಸಭೆಗೂ ಅಧಿಕಾರಿಗಳು ಗೈರು ಹಾಜರಾದರೆ ಅಂತಹವರ ವಿರುದ್ಧ ಸಿಇಒಗೆ ದೂರು ಸಲ್ಲಿಸಬಹುದೇ ವಿನಾ ಯಾವುದೇ ರೀತಿಯ ಕ್ರಮಕೈಗೊಳ್ಳಲು ಗ್ರಾಪಂ ಆಡಳಿತ ಹಾಗೂ ಅಧಿಕಾರಿಗೆ ಅಧಿಕಾರವಿಲ್ಲ ಎಂದು
ಗ್ರಾಪಂ ಪಿಡಿಒ ಸುಮೇಶ್ ಸಭೆಯ ಗಮನಕ್ಕೆ‌ ತಂದರು. ಈ‌ ಹಿನ್ನಲೆಯಲ್ಲಿ ಗ್ರಾಮಸಭೆ ಮುಂದೂಡಲಾಯಿತು.

ಗ್ರಾಪಂ ಉಪಾಧ್ಯಕ್ಷ ಪಟ್ಟು‌ಮಾದಪ್ಪ, ಪಿಡಿಒ ಸುಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT