ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರಸಂತೆ | ಆಧ್ಯಾತ್ಮಿಕ ತಳಹದಿಯ ಜೀವನ ನಡೆಸಲು ಯತೀಶ್ವರ ಸಲಹೆ

ಜೀರ್ಣೋದ್ದಾರಗೊಂಡ ಬಾಗೇರಿ ಶ್ರೀ ರಾಮೇಶ್ವರ ದೇಗುಲ; ಕಾರ್ಯಕ್ರಮದಲ್ಲಿ ಡಾ.ಯತೀಶ್ವರ ಹೇಳಿಕೆ
Published 5 ಜೂನ್ 2024, 6:33 IST
Last Updated 5 ಜೂನ್ 2024, 6:33 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಧಾರ್ಮಿಕ ಮತ್ತು ಆಧ್ಯಾತ್ಮಿಕದ ತಳಹದಿಯ ಮೇಲೆ ಜೀವನ ನಡೆಸಿದರೆ ಪ್ರತಿಯೊಬ್ಬರ ಬದುಕು ಸಾರ್ಥಕಗೊಳ್ಳುತ್ತದೆ’ ಎಂದು ಹಾಸನದ ಎ.ವಿ.ಶಾಂತಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮತ್ತು ಸಾಹಿತಿ ಡಾ.ಯತೀಶ್ವರ ಅಭಿಪ್ರಾಯಪಟ್ಟರು.

ಅವರು ಸಮಿಪದ ಬಾಗೇರಿ ಗ್ರಾಮದ ಪುರಾತನ ಶ್ರೀ ರಾಮೇಶ್ವರಸ್ವಾಮಿ ಮೂಲ ದೇವಾಲಯವನ್ನು ₹ 39 ಲಕ್ಷದಲ್ಲಿ ಜೀರ್ಣೋದ್ದಾರಗೊಳಿಸಿ, ನಿರ್ಮಿಸಿರುವ ನೂತನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಧಾರ್ಮಿಕ, ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆಯುಳ್ಳ ಮತ್ತು ಮುಕ್ಕೋಟಿ ದೇವರನ್ನು ಪ್ರತಿನಿಧಿಸಿರುವ ಜಗತ್ತಿನ ಏಕೈಕ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ನಾವು ದೇಗುಲ, ಶಾಲೆ, ವನ, ಪ್ರಕೃತಿ, ನದಿ, ಬೆಟ್ಟ ಮುಂತಾದವುಗಳನ್ನು ಭಕ್ತಿಯಿಂದ ಪೂಜೆಸುತ್ತೇವೆ. ಈ ಎಲ್ಲಾ ಪರಂಪರೆಯ ತಳಹದಿಯಲ್ಲಿ ನಾವು ಬದುಕು ಸಾಗಿಸಿದರೆ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು ಎಂದರು.

ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ‘ಗ್ರಾಮದಲ್ಲಿ ದೇವಸ್ಥಾನ, ಶಾಲೆಗಳು ಇರುವುದರಿಂದ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ದೇಗುಲ, ಶಾಲೆಗಳು ನಿರ್ಮಾಣವಾಗಬೇಕಿದೆ. ಬಾಗೇರಿ ಗ್ರಾಮದಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವ ಪುರಾತನ ದೇವಸ್ಥಾನವನ್ನು ದಾನಿಗಳು, ಭಕ್ತಾದಿಗಳು, ದೇವಸ್ಥಾನ ಸಮಿತಿಯಿಂದ ಜೀರ್ಣೋದ್ದಾರಗೊಳಿಸಿ ನೂತನವಾಗಿ ನಿರ್ಮಿಸಿರುವ ಕಾರ್ಯ ಅತ್ಯಂತ ಶ್ಲಾಘನಿಯಕರವಾಗಿದೆ’ ಎಂದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ದೇಗುಲಗಳ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸುವುದರಿಂದ ಧಾರ್ಮಿಕ ಸಂಸ್ಕೃತಿ ಉಳಿಯುತ್ತದೆ ಎಂದರು.

ಶನಿವಾರಸಂತೆ ಆರ್‌ಎಫ್‍ಒ ಗಾನಶ್ರೀ ಮಾತನಾಡಿ, ಅರಣ್ಯ ಹಾಗೂ ವನಶ್ರೀ ಸಂಪತ್ತು ಶಿವನ ಪ್ರತಿರೂಪವಾಗಿದೆ. ದೇವರಿಗೆ ಪ್ರಿಯವಾದ ಸಸ್ಯಗಳು ಸಹ ವನ ಸಂಪತ್ತುಗಳಾಗಿರುವುದರಿಂದ ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಮರಗಿಡವನ್ನು ಬೆಳೆಸಬೇಕು. ಇದರಿಂದ ಉತ್ತಮವಾದ ಆಮ್ಲಜನಕ ಸಿಗುತ್ತದೆ ಎಂದರು.

ಹಾಸನ ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯ ಮತ್ತು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಕ್ಯಾತಿ ಯತೀಶ್, ಹಂಡ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಧಾ ಈರೇಶ್, ಸದಸ್ಯೆ ಸುವರ್ಣ ರಮೇಶ್, ಮುಖಂಡರಾದ ಮಾಲತೇಶ್, ಪುರುಷೋತ್ತಮ್, ಸಂತೋಷ್, ಗಿರೀಶ್, ಕೆ.ಪಿ.ಜಯಕುಮಾರ್ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ನೂತನ ದೇವಸ್ಥಾನದ ಉದ್ಘಾಟನೆ ಅಂಗವಾಗಿ ಭಾನುವಾರ ಮತ್ತು ಸೋಮವಾರ ಬೆಳಗ್ಗೆ ಪೂಜೆ, ವಿವಿಧ ಹೋಮ ಇನ್ನು ಮುಂತಾದ ಧಾರ್ಮಿಕ ಕೈಂಕರ್ಯಗಳು ನಡೆದವು. ಧಾರ್ಮಿಕ ಸಮಾರಂಭದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT