ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಭತ್ತದ ಉತ್ತಮ ಫಸಲು ತೆಗೆದ ರೈತ

ಲೋಕೇಶ್. ಡಿ.ಪಿ
Published 24 ನವೆಂಬರ್ 2023, 7:42 IST
Last Updated 24 ನವೆಂಬರ್ 2023, 7:42 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡಗು ಜಿಲ್ಲೆಯ ಎಲ್ಲೆಡೆ ಬರ ವ್ಯಾಪಕವಾಗಿ ಆವರಿಸಿದ್ದರೂ ಇಲ್ಲೊಬ್ಬರು ರೈತರು ಸಮೃದ್ಧವಾಗಿ ಭತ್ತ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ತಾಲ್ಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಗತಿಪರ ಕೃಷಿಕ ಲಕ್ಷ್ಮೀಶೆಟ್ಟಿ ಉತ್ತಮ ಭತ್ತದ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ತಾಲ್ಲೂಕಿ ನಲ್ಲಿ‌ ಮಳೆ‌ ಕೊರತೆಯಿಂದ ಮಳೆಯಾಶ್ರಿತ ಹಾಗೂ ನೀರಾವರಿ ಆಶ್ರಿತ ಎಲ್ಲ ಬೆಳೆಗಳ‌ ಇಳುವರಿ ಕುಂಠಿತಗೊಂಡಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಭತ್ತದ ಫಸಲು ಜೊಳ್ಳಾಗಿದ್ದು, ಎಲ್ಲೆಡೆ ನೀರಿನ ಕೊರತೆ ಎದುರಾಗಿದೆ.

ಮಳೆಯ ಕಣ್ಣಾಮುಚ್ಚಾಲೆಯಿಂದ ಯೋಜಿತ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ. ಜುಲೈ ತಿಂಗ ಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದಂತೆ ಸರಿಯಾಗಿ ಮಳೆಯೇ ಆಗಲಿಲ್ಲ. ಇರುವ ನೀರಿನ ಸೌಲಭ್ಯದೊಂದಿಗೆ ಭತ್ತದ ಕೃಷಿ ಮಾಡಿದವರ ಗದ್ದೆ ಬಿಸಿಲಿನ ತಾಪಕ್ಕೆ ಒಣಗುತ್ತಿದೆ.

ಇಂತಹ ಹೊತ್ತಿನಲ್ಲಿ ಲಕ್ಷ್ಮೀಶೆಟ್ಟಿ ಅವರು ತಮ್ಮ 1.5 ಎಕರೆ ಗದ್ದೆಯಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದು, 40 ಕ್ವಿಂಟಲ್ ಭತ್ತದ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಕಾಫಿ ಮತ್ತು ಕಾಳು ಮೆಣಸನ್ನು ಬೆಳೆಯುತ್ತಿರುವ ಇವರು, ಭತ್ತದ ಬೆಳೆಯಲ್ಲೂ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

‘ನಮ್ಮ ಗದ್ದೆಯಲ್ಲಿ ಒಂಟಿ ಕಾಳು ಭತ್ತವನ್ನು ಬೆಳೆಯಲಾಗಿದೆ. ಎಲ್ಲೆಡೆ ಒಂದು ಗಿಡವನ್ನು ನೆಟ್ಟರೆ, ನಾವು 2 ಗಿಡಗಳನ್ನು ನಾಟಿ ಮಾಡಿದ್ದೆವು. ಎಲ್ಲ ಗಿಡಗಳಲ್ಲೂ ಉತ್ತಮ ತೆನೆಗಳು ಬಂದಿದ್ದು, ಈ ಬಾರಿ ಒಳ್ಳೆಯ ಆದಾಯ ಸಿಗಬಹುದು’ ಎಂದು ಕೃಷಿಕ ಲಕ್ಷ್ಮೀಶೆಟ್ಟಿ ಹೇಳುತ್ತಾರೆ.

ಒಂದು ಗುಣಿಗೆ ಸಾಮಾನ್ಯವಾಗಿ ಎಲ್ಲರೂ ಒಂದು ಸಸಿಯನ್ನು ನೆಡುತ್ತಾರೆ. ಆದರೆ, ಇವರು ಒಂದೇ ಗುಣಿಗೆ ಎರಡು ಸಸಿಗಳನ್ನು ನೆಟ್ಟಿದ್ದಾರೆ. ಇದ ರಿಂದ ಎರಡೂ ಸಸಿಗಳು ಒಂದೇ ಗುಣಿಯಲ್ಲಿ ಬೆಳೆದು ಈಗ ಉತ್ತಮವಾಗಿ ಕಾಳುಕಟ್ಟಿವೆ. ಈ ಭಾಗದಲ್ಲಿ ಇವರು ನಡೆಸಿದ ಪ್ರಯೋಗ ಬರದಲ್ಲೂ ಯಶಸ್ವಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಷ್ಟದ ಕೃಷಿ ಯೆಂದೇ ಪರಿಗಣಿತವಾಗಿರುವ ಭತ್ತದ ಕೃಷಿಯಿಂದ ಬಹುತೇಕ ಮಂದಿ ಹಿಂದೆ ಸರಿಯುತ್ತಿರುವ ಈ ಸಮಯದಲ್ಲಿ ಭತ್ತದ ಕೃಷಿಯನ್ನು ಉಳಿಸಿಕೊಳ್ಳಬೇಕಾದರೆ, ಸರ್ಕಾರ ರೈತರ ನೆರವಿಗೆ ಬಂದು, ಸಹಾಯಧನ ಘೋಷಿಸಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT