ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ:ಬರದಲ್ಲೂ ಗದ್ದೆ ಗುತ್ತಿಗೆ ಪಡೆದ ರೈತ, ಹೋಬಳಿಯಲ್ಲೊಬ್ಬ ಅಪರೂಪದ ಕೃಷಿಕ

ಶರಣ್ ಎಚ್.ಎಸ್.
Published 8 ಡಿಸೆಂಬರ್ 2023, 5:09 IST
Last Updated 8 ಡಿಸೆಂಬರ್ 2023, 5:09 IST
ಅಕ್ಷರ ಗಾತ್ರ

ಶನಿವಾರಸಂತೆ: ಹೋಬಳಿ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಯಲ್ಲೇ ಬರ ವ್ಯಾಪಕವಾಗಿ ಆವರಿಸಿದೆ. ಭೂಮಿ ಉಳ್ಳವರೇ ಬರಕ್ಕೆ ಅಂಜಿ ಕೃಷಿ ಮಾಡದೇ ಬಿಟ್ಟಿದ್ದಾರೆ. ಸತತವಾಗಿ ಏರುತ್ತಿರುವ ಉತ್ಪಾದನಾ ವೆಚ್ಚದಿಂದ ಭತ್ತದ ಕೃಷಿಯಿಂದಲೇ ಹಲವು ಮಂದಿ ವಿಮುಖರಾಗಿದ್ದಾರೆ. ಈ ಸನ್ನಿವೇಶದಲ್ಲೂ ಇಲ್ಲೊಬ್ಬರು ಭೂಮಿಯನ್ನು ಗುತ್ತಿಗೆಗೆ ಪಡೆದು ಭರಪೂರ ಭತ್ತ ಬೆಳೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಲ್ಲಿಗೆ ಸಮೀಪದ ಕಾಜೂರು ಗ್ರಾಮದ ಕೆ.ಬಿ.ಮಲ್ಲಪ್ಪ ಅವರ ಪುತ್ರ ಚಂದ್ರಣ್ಣನೇ ಈ ಅಪರೂಪದ ಕೃಷಿಕ. ಇವರು 14 ಎಕರೆ ಗದ್ದೆಯನ್ನು ಗುತ್ತಿಗೆ ಪಡೆದು ಭತ್ತದ ಬೇಸಾಯ ಮಾಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಗದ್ದೆ ಬೇಸಾಯ ಮಾಡಲು ಆಸಕ್ತಿ ತೋರದ ರೈತರ ಗದ್ದೆಗಳನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿ ಬೆಲೆ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ಈ ವರ್ಷ ಮಳೆ ವಿಳಂಬವಾದರೂ, ಹಿಂದೆ ಸರಿಯದೆ ಭತ್ತ ಬೇಸಾಯ ಮಾಡಿ ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಒಂದು ಎಕರೆಗೆ ಅಂದಾಜು 25-28 ಕ್ವಿಂಟಲ್ ಭತ್ತ ಪಡೆಯುವ ವಿಶ್ವಾಸ ಚಂದ್ರಣ್ಣ ಅವರದು. ಸುತ್ತಮುತ್ತಲಿನ ಹಳ್ಳಿಯ ರೈತರು ಆಗಮಿಸಿ ವಿವಿಧ ತಳಿಯ ಭತ್ತ ಬೇಸಾಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ತಮ್ಮ ಇಳಿ ವಯಸ್ಸಿನಲ್ಲಿಯೂ ಬೇಸಾಯ ಬಿಡದೆ, ಗದ್ದೆಗಳನ್ನು ಹಾಳು ಬೀಳದಂತೆ ನೋಡಿಕೊಂಡು, ನಿತ್ಯ ಬೇಸಾಯ ಮಾಡುವುದೇ ಇವರ ಕಾಯಕ. ಇತರರಿಂದ ಗುತ್ತಿಗೆಗೆ ಪಡೆದು ಭತ್ತ ಬೇಸಾಯ ಮಾಡಿ ಆದಾಯಗಳಿಸುವ ವಿಧಾನವನ್ನು ತಿಳಿಸಿಕೊಟ್ಟು ಮಾದರಿಯಾಗಿದ್ದಾರೆ. ಸುತ್ತಮುತ್ತಲಿನ ಜನರು ಸಮೃದ್ಧಿಯಾಗಿ ಅನ್ನವನ್ನು ಸೇವಿಸಬೇಕು ಎಂಬುದು ಇವರ ಅಭಿಪ್ರಾಯ.

‘ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ಭತ್ತ ಬೇಸಾಯವು ಹೆಚ್ಚು ಖರ್ಚು ತರುವ ಬೇಸಾಯವಾಗಿದೆ’ ಎಂದು ಬೇಸರದಿಂದಲೆ ಅವರು ಹೇಳುತ್ತಾರೆ.

‘ತಾಂತ್ರಿಕತೆಯ ಮೊರೆ ಹೋಗಿ ಇಂದಿನ ಕಾಲದಲ್ಲಿ ಭತ್ತ ಬೇಸಾಯದ ಪದ್ಧತಿಯು ಬದಲಾವಣೆಯಾಗಿದೆ. ಈ ವರ್ಷದ ಬಿತ್ತನೆ ಬೀಜದ ಬೆಲೆಯು ಕೂಡ ಏರಿಕೆಯಾಗಿದೆ’ ಎಂದು ತಿಳಿಸಿದರು.

ಇವರು ಕೊಯ್ಲಿನ ಸಂದರ್ಭದಲ್ಲಿ ಬೃಹತ್ ಗಾತ್ರದ ಕಟಾವು ಯಂತ್ರ ಬಳಸದೆ ಸಣ್ಣಮಟ್ಟದ ಕಟಾವು ಯಂತ್ರವನ್ನು ಬಳಸುತ್ತಿದ್ದಾರೆ. ಏಕೆಂದರೆ, ದೊಡ್ಡ ಯಂತ್ರದಿಂದ ಭತ್ತ ಕಟಾವು ಮಾಡಿದರೆ ಅದರಿಂದ ಸಿಗುವ ಹುಲ್ಲನ್ನು ಗೋವುಗಳು ತಿನ್ನಲು ಹಿಂಜರಿಯುತ್ತವೆ. ಭತ್ತದ ಹುಲ್ಲುಗಳು ತುಂಡು ತುಂಡಾಗಿದ್ದ ಕಾರಣ ದೀರ್ಘಕಾಲಕ್ಕೆ ಇದು ಬಳಕೆಗೆ ಬರುವುದಿಲ್ಲ, ಸಣ್ಣ ಮಟ್ಟದಲ್ಲಿ ಭತ್ತ ಕಟಾವು ಯಂತ್ರದಿಂದ ಮಾಡಿದರೆ ಮಾತ್ರ ದನ ತಿನ್ನಲು ಯೋಗ್ಯವಾಗಿರುತ್ತದೆ’ ಎನ್ನುತ್ತಾರೆ ಅವರು.

ಇವರು ಈ ಹಿಂದೆ 25 ರಿಂದ 30 ಎಕರೆ ಪ್ರದೇಶದಲ್ಲಿ ಭತ್ತ ಬೇಸಾಯ ಮಾಡುತ್ತಿದ್ದರು. ವಿವಿಧ ತಳಿಯ ಭತ್ತಗಳನ್ನು ಬೆಳೆದಿದ್ದಾರೆ. ಹೆಚ್ಚು ಬೇಡಿಕೆಯನ್ನು ಹೊಂದಿದ್ದ ಕುಚುಲಕ್ಕಿ ಭತ್ತವನ್ನು ಬೆಳೆದಿದ್ದಾರೆ. ಭತ್ತ ಬೇಸಾಯ ಮಾಡುವ ವೇಳೆಯಲ್ಲಿ ಉತ್ತಮ ವಾತಾವರಣ, ಸರಿಯಾದ ಸಮಯಕ್ಕೆ ಮಳೆ ಬಂದರೆ 30 ರಿಂದ 32 ಕ್ವಿಂಟಲ್ ಉತ್ತಮವಾದ ಇಳುವರಿಯನ್ನು ಪಡೆಯಬಹುದು ಎಂದು ಅವರು ಹೇಳುತ್ತಾರೆ.

ಇಷ್ಟೆಲ್ಲ ಅನುಭವ ಹೊಂದಿರುವ ಇವರು ಕಲಿತಿರುವುದು ಕೇವಲ 3ನೇ ತರಗತಿ. ಕಲಿಕೆ ಕಡಿಮೆಯಾದರೂ ಬೇಸಾಯದಲ್ಲಿ ಇತರರಿಗೆ ಮಾದರಿ ಎನ್ನುವಂತಿದ್ದಾರೆ.

ಚಂದ್ರಣ್ಣ ಅವರು ಗುತ್ತಿಗೆ ಪಡೆದು ಬೆಳೆದಿರುವ ಭತ್ತ
ಚಂದ್ರಣ್ಣ ಅವರು ಗುತ್ತಿಗೆ ಪಡೆದು ಬೆಳೆದಿರುವ ಭತ್ತ
ಹಿರಿ ವಯಸ್ಸಿನಲ್ಲೂ ಬೇಸಾಯ ಮಾಡುತ್ತಿರುವುದು ವಿಶೇಷ. ಇವರಿಂದ ಮಾಹಿತಿ ಪಡೆದು ಅನೇಕ ಜನರು ಕೂಡ ಭತ್ತದ ಬೇಸಾಯದ ಬಗ್ಗೆ ಆಸಕ್ತಿಯನ್ನು ತೋರುತ್ತಿದ್ದಾರೆ.
–ಎಂ. ಪಿ. ಅರುಣ್ ಕೃಷಿಕ ಮಾದ್ರೆ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT