ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನ ಧ್ವನಿಯಾಗಲು ಅವಕಾಶ ಕೊಡಿ: ರಘುಪತಿ ಭಟ್

ರಾಜ್ಯ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್ ಮನವಿ
Published 25 ಮೇ 2024, 4:55 IST
Last Updated 25 ಮೇ 2024, 4:55 IST
ಅಕ್ಷರ ಗಾತ್ರ

ಮಡಿಕೇರಿ: ‘ನನ್ನ ಮುಂದೆ ರಾಜಕೀಯ ನಿವೃತ್ತಿ ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸುವುದು ಈ ಎರಡೇ ಆಯ್ಕೆಗಳಿದ್ದವು. ಅದರಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧಿಸುವುದನ್ನೇ ಆಯ್ಕೆ ಮಾಡಿಕೊಂಡಿದ್ದು, ವಿಧಾನಪರಿಷತ್ತಿನಲ್ಲಿ ಕೊಡಗಿನ ಧ್ವನಿಯಾಗಲು ಅವಕಾಶ ಮಾಡಿಕೊಡಬೇಕು’ ಎಂದು ಉಡುಪಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಹಾಗೂ ಪ್ರಸಕ್ತ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ರಘುಪತಿ ಭಟ್ ಮನವಿ ಮಾಡಿದರು.

ಅವರು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.

2013, 2023 ಮತ್ತು ಈಗ ಟಿಕೆಟ್ ತಪ್ಪಿದೆ. ಈ ಮೂರೂ ಬಾರಿಯೂ ನನಗೆ ಏಕೆ ಟಿಕೆಟ್ ನಿರಾಕರಿಸಲಾಯಿತು ಎಂಬ ಕಾರಣವನ್ನು ಪಕ್ಷ ನೀಡಿಲ್ಲ. ಆದರೆ, 2023ರಲ್ಲಿ ವಿಧಾನಸಭೆಗೆ ಟಿಕೆಟ್ ಕೈತಪ್ಪಿದಾಗ ವಿಧಾನಪರಿಷತ್ತಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈಗಲೂ ನನಗೆ ಟಿಕೆಟ್ ತಪ್ಪಿಸಲಾಯಿತು. ಈಗ ನನ್ನ ಮುಂದೆ ರಾಜಕೀಯ ನಿವೃತ್ತಿಯೊಂದೇ ಉಳಿದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ, ನನಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಷ್ಟು ವಯಸ್ಸಾಗಿಲ್ಲ. ಬೆಂಬಲಿಗರು ನಿವೃತ್ತಿ ತೆಗೆದುಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಒತ್ತಾಯಿಸಿದರು. ಹಾಗಾಗಿ, ಸ್ಪರ್ಧಿಸಿರುವೆ ಎಂದು ಹೇಳಿದರು.

ಉಡುಪಿಯಲ್ಲಿ 3 ಬಾರಿ ಶಾಸಕನಾಗಿ, ಒಮ್ಮೆ ನಗರಸಭೆ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿರುವೆ. ನಾನು ಕೇದೋರೋತ್ಥಾನ ಟ್ರಸ್ಟ್ ಮೂಲಕ ಬರಡು ಬಿದ್ದಿದ್ದ ಒಂದೂವರೆ ಸಾವಿರ ಎಕರೆಯಲ್ಲಿ ಮತ್ತೆ ಕೃಷಿ ನಡೆಸುವಂತೆ ಮಾಡಿದೆ. ‘ಸಾಧಕ ಶಿಕ್ಷಕ ಪ್ರಶಸ್ತಿ’ ಮೂಲಕ ಹೆಚ್ಚು ಅಂಕ ಗಳಿಸಿದ ಶಾಲೆಗಳ ಶಿಕ್ಷಕರನ್ನು ನಗದು ಪುರಸ್ಕಾರದ ಮೂಲಕ ಗೌರವಿಸಿರುವೆ. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಕ್ಷೇತ್ರದ ಎಲ್ಲ ಪ್ರೌಢಶಾಲೆಗಳಲ್ಲಿ ಯಕ್ಷಗಾನ ಆರಂಭಿಸಿ ವರ್ಷಕ್ಕೆ ಒಂದೂವರೆ ಸಾವಿರಕ್ಕೂ ಅಧಿಕ ಜಿಲ್ಲಾ ಹಾಗೂ ಹೊರಜಿಲ್ಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿರುವೆ’ ಎಂದು ಅವರು ವಿವರಿಸಿದರು.

ಈ ಬಾರಿ ಆಯ್ಕೆಯಾದರೆ ನಾನು ಪದವೀಧರರ ಹಿತರಕ್ಷಣೆಗೆ ದುಡಿಯುವೆ. ಪದವೀಧರರ ದತ್ತಾಂಶ ಸಂಗ್ರಹಿಸಿ ಅವರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುವೆ. ಪದವೀಧರರಿಗೆ ಸ್ವ ಉದ್ಯೋಗಕ್ಕೆ ಸಾಲ, ಕೌಶಲ ತರಬೇತಿ,  ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ ಹೀಗೆ ಅನೇಕ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿರುವೆ ಎಂದರು.

ಮಡಿಕೇರಿಯ ಕ್ರಿಸ್ಟಲ್‌ ಕೋರ್ಟ್‌ ಸಭಾಂಗಣದಲ್ಲಿ ಸಭೆ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ರಘುಪತಿ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT