ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ವಾರ್ಷಿಕ ಮಹೋತ್ಸವ ಸಂಪನ್ನ

ಮಾಲಂಬಿಹಯಲ್ಲಿ ಎರಡು ದಿನ ನಡೆದ ಉತ್ಸವದಲ್ಲಿ ನೂರಾರು ಮಂದಿ ಭಾಗಿ
Published 1 ಮೇ 2024, 5:36 IST
Last Updated 1 ಮೇ 2024, 5:36 IST
ಅಕ್ಷರ ಗಾತ್ರ

ಶನಿವಾರಸಂತೆ: ಇಲ್ಲಿಗೆ ಸಮೀಪದ ಮಾಲಂಬಿ ಗ್ರಾಮದ ಮಲ್ಲಿಕಾರ್ಜುನಸ್ವಾಮಿ, ಬಸವಣ್ಣ ದೇವರು ಮತ್ತು ಕನ್ನಂಬಾಡಿ ಅಮ್ಮ ದೇವರ ವಾರ್ಷಿಕೋತ್ಸವ ಮಂಗಳವಾರ ಸಂಪನ್ನಗೊಂಡಿತು.

ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರದಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿದ್ದವು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಗ್ರಾಮದ ದೇವಸ್ಥಾನಗಳಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ 7 ಗಂಟೆಗೆ ದೇವಸ್ಥಾನಗಳಲ್ಲಿ ಆರತಿಯೊಂದಿಗೆ ದೇವರ ಮೂರ್ತಿಗಳನ್ನು ಗಂಗಾಸ್ನಾನ ವಾದ್ಯಗೋಷ್ಠಿ, ಕುಂಭ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು.

ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವಣ್ಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ ಬಳಿಕ ರಾತ್ರಿಯಿಂದ ಮಂಗಳವಾರ ಬೆಳಗ್ಗೆಯವರೆಗೂ ದೇವರ ಉತ್ಸವವನ್ನು ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ 8.30ರಿಂದ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಕನ್ನಂಬಾಡಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು.

ಪೂಜಾ ಮಹೋತ್ಸವದಲ್ಲಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿತ್ತು.

ಮಾಲಂಬಿ ಗ್ರಾಮದ ವಿವಿಧ ದೇವರ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಭಕ್ತರು ನರ್ತಿಸಿದರು
ಮಾಲಂಬಿ ಗ್ರಾಮದ ವಿವಿಧ ದೇವರ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಭಕ್ತರು ನರ್ತಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT