ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಅರಮಣಮಾಡ ಕ್ರಿಕೆಟ್

ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಚಿಮ್ಮಣಮಾಡ, ತಂಬುಕುತ್ತೀರಾ, ಕಳಕಂಡ, ಮಾಳೆಟೀರ, ನೆರವಂಡ, ಕಾಣತಂಡ, ಚೆಕ್ಕೆರ ತಂಡಗಳು
Published 17 ಮೇ 2024, 5:09 IST
Last Updated 17 ಮೇ 2024, 5:09 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿನ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್‌ ಟೂರ್ನಿಯಲ್ಲಿ ಚಿಮ್ಮಣಮಾಡ, ತಂಬುಕುತ್ತೀರಾ, ಕಳಕಂಡ, ಮಾಳೆಟೀರ, ನೆರವಂಡ, ಕಾಣತಂಡ ಹಾಗೂ ಚೆಕ್ಕೆರ ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಿದವು.

ಇಲ್ಲಿ ಗುರುವಾರ ನಡೆದ ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯಗಳಿಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ಸಾಕ್ಷಿಯಾದರು. ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು ಕಳಕಂಡ - ಮಾಚೆಟ್ಟೀರ (ಬಾಳುಗೋಡು) ತಂಡದ ಆಟಗಾರರಿಗೆ ಶುಭ ಹಾರೈಸಿದರು. ಕೆಲ ಸಮಯ ಆಟವನ್ನು ನೋಡಿ ಖುಷಿಪಟ್ಟರು.

ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯಗಳು ತೀವ್ರ ರೋಚಕ ಹಣಾಹಣಿಯಿಂದ ಕೂಡಿದ್ದವು. ಸೂಪರ್‌ ಓವರ್‌ನಂತಹ ರೋಮಾಂಚನದ ಘಟ್ಟವು ಪ್ರೇಕ್ಷಕರ ಮನ ತಣಿಸಿದವು. ಮಣವಟ್ಟಿರ ಮತ್ತು ಚಿಮ್ಮಣಮಾಡ ನಡುವೆ ನಡೆದ ಪಂದ್ಯವು ಇಂತಹದ್ದೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಎರಡೂ ತಂಡಗಳು 54 ರನ್‌ ಗಳಿಸಿ ಸಮಬಲ ಸಾಧಿಸಿದವು. ನಂತರ ನಡೆದ ಸೂಪರ್‌ ಓವರ್‌ನಲ್ಲಿ ಮಣವಟ್ಟಿರ ಒಂದು ಓವರ್‌ನಲ್ಲಿ 8 ರನ್‌ ಗಳಿಸಿದರೆ, ಚಿಮ್ಮಣಮಾಡ ಕೇವಲ 0.4 ಓವರ್‌ಗಳಲ್ಲಿಯೇ 12 ರನ್‌ ಗಳಿಸಿ ಜಯಶಾಲಿಯಾಯಿತು.

ಮಚ್ಚಮಾಡ ಮತ್ತು ಮಾಳೆಟೀರ ನಡುವಿನ ಪಂದ್ಯವೂ ರೋಚಕ ಹಣಾಹಣಿಯಿಂದ ಕೂಡಿತ್ತು. ಮಾಳೆಟೀರ 13 ರನ್‌ಗಳ ರೋಮಾಂಚನದ ಜಯ ಸಾಧಿಸಿತು. ಮಾಳೆಟೀರ ನಿಗದಿತ 8 ಓವರ್‌ಗಳಲ್ಲಿ ನೀಡಿದ 111 ರನ್‌ಗಳ ಗುರಿಗೆ ಪ್ರತಿಯಾಗಿ ಮಚ್ಛಮಾಡ 97 ರನ್‌ಗಳನ್ನಷ್ಟೇ ಗಳಿಸಿ ನಿರಾಶವಾಯಿತು.

ತಂಬುಕುತ್ತೀರಾ ತಂಡವು ಪಂದಿಯಂಡ ವಿರುದ್ಧ 70 ರನ್‌ಗಳ ಭಾರಿ ಜಯ ಪಡೆಯಿತು. ತಂಬುಕುತ್ತೀರಾ ನೀಡಿದ 106 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಂದಿಯಂಡ ಕೇವಲ 35 ರನ್‌ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡು ನಿರಾಶಗೊಂಡಿತು.

ಕಳಕಂಡ ತಂಡವು ಮಾಚೆಟ್ಟೀರ ವಿರುದ್ಧ 6 ವಿಕೆಟ್‌ಗಳ ಜಯ ಪಡೆಯಿತು. ಮಾಚೆಟ್ಟೀರ ನೀಡಿದ 37 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಳಕಂಡ 4 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ನೆರವಂಡ ತಂಡವು ಕುಂದಮಾಳೀಟೀರ ವಿರುದ್ಧ 35 ರನ್‌ಗಳ ಜಯ ಗಳಿಸಿತು. ನೆರವಂಡ ನೀಡಿದ 87 ರನ್‌ಗಳ ಗುರಿಯನ್ನು ಬೆನ್ನತ್ತಿದ ಕುಂದಮಾಳೀಟೀರ 50 ರನ್‌ ಮಾತ್ರವೇ ಗಳಿಸಿತು.

ಕಾಣತಂಡ ತಂಡವು ಬಲ್ಲಚಂಡ ವಿರುದ್ಧ 52 ರನ್‌ಗಳ ಜಯ ಗಳಿಸಿತು. ಕಾಣತಂಡ ನೀಡಿದ 93 ರನ್‌ಗಳ ಗುರಿಗೆ ಪ್ರತಿಯಾಗಿ ಬಲ್ಲಚಂಡ ಗಳಿಸಿದ್ದು ಕೇವಲ 40 ರನ್‌ ಮಾತ್ರ. ಚೆಕ್ಕೆರ ತಂಡವು ಗೀಜಿಗಂಡ ತಂಡದ ವಿರುದ್ಧ 56 ರನ್‌ಗಳ ಜಯ ಪಡೆಯಿತು. ಚೆಕ್ಕೆರ ನೀಡಿದ 107 ರನ್‌ಗಳ ಗುರಿಯನ್ನು ಬೆನ್ನತ್ತಿದ ಗೀಜಿಗಂಡ ತಂಡವು 50 ರನ್‌ಗಳನ್ನಷ್ಟೇ ಗಳಿಸಿತು.

ಮಚ್ಚಮಾಡ ತಂಡದ ಎದುರು ಮಾಳೆಟೀರ ತಂಡದ ಆಟಗಾರರೊಬ್ಬರು ಬ್ಯಾಟಿಂಗ್ ನಡೆಸಿದ ವೈಖರಿ ಹೀಗಿತ್ತು.
ಮಚ್ಚಮಾಡ ತಂಡದ ಎದುರು ಮಾಳೆಟೀರ ತಂಡದ ಆಟಗಾರರೊಬ್ಬರು ಬ್ಯಾಟಿಂಗ್ ನಡೆಸಿದ ವೈಖರಿ ಹೀಗಿತ್ತು.

ಮಹಿಳಾ ವಿಭಾಗದ ಸೆಮಿಫೈನಲ್ ಇಂದು

ಮೈದಾನ 1ರಲ್ಲಿ ಮಹಿಳಾ ವಿಭಾಗದ ಸೆಮಿಫೈನಲ್‌ ಪಂದ್ಯಗಳು ಮೇ 17ರಂದು ನಡೆಯಲಿದೆ. ಮುಕ್ಕಾಟೀರ- ಮಾಳೀಟಿರ ಮತ್ತು ಅರಮಣಮಾಡ - ಮಣವಟ್ಟಿರ ತಂಡಗಳು ಫೈನಲ್‌ ಪ್ರವೇಶಕ್ಕಾಗಿ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT