ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆಯನ್ನೇ ನಂಬಿದ ಅ‍ಪ‍ರೂಪದ ಕಲಾವಿದ ಈ.ರಾಜು

ಸ‌ರ್ಕಾರಿ ಯೋಜನೆಗಳ ಹಿಂದಿನ ಕಂಠಶಕ್ತಿ ಈ.ರಾಜು
Published 10 ಜುಲೈ 2024, 7:02 IST
Last Updated 10 ಜುಲೈ 2024, 7:02 IST
ಅಕ್ಷರ ಗಾತ್ರ

ಮಡಿಕೇರಿ: ‘ಕನ್ನಡ ನಾಡು ಚೆಂದ, ಕನ್ನಡ ಭಾಷೆ ಅಂದ, ಕನ್ನಡ ಜನ ಚೆಂದ, ನಮ್ಮ ಕನ್ನಡ ನುಡಿ ಅಂದ....’ ಈ ಹಾಡುಗಳ ಸಾಲುಗಳನ್ನು ಯಾವುದೇ ಸರ್ಕಾರಿ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮದಲ್ಲಿ ಕೇಳೇ ಇರುತ್ತೀರಿ. ಇದರ ಹಿಂದಿನ ಕಂಠಶಕ್ತಿ ಕಲಾವಿದ ಈ.ರಾಜು ಅವರದ್ದು.

ಕೇವಲ ಹಾಡುಗಾರರಾಗಿ ಮಾತ್ರವಲ್ಲ ಬೀದಿ ನಾಟಕಗಳ ನಿರ್ದೇಶಕರಾಗಿ, ನಟರಾಗಿ ಕೊಡಗು ಜಿಲ್ಲೆಯಲ್ಲಿ ಹೆಸರು ಗಳಿಸಿದವರು ಈ.ರಾಜು. ಇವರು ಬಹುತೇಕ ಮಂದಿಗೆ ಪರಿಚಯ ಇಲ್ಲ. ಆದರೆ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಕಾರ್ಯಗಳಲ್ಲಿ ಹಿಂದಿರುವ ದೊಡ್ಡ ಶಕ್ತಿ ಇವರೆಂದರೆ ತಪ್ಪಾಗಲಾರದು.

ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮದವರಾದ ಇವರು ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು. ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಮಾಡದೇ ಕಲೆಯೊಂದನ್ನೇ ನಂಬಿಕೊಂಡಿರುವ ಅವರು ಸರ್ಕಾರದ ಯೋಜನೆಗಳ ಅರಿವು ಜನರಿಗೆ ತಲುಪುವಂತೆ ಮಾಡುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಆದರೆ, ತಾವು ಮಾತ್ರ ಕಡುಕಷ್ಟದ ಜೀವನ ಸಾಗಿಸುತ್ತಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು, ‘ಕಳೆದ 28 ವರ್ಷಗಳ ಹಿಂದೆ ಸಾಕ್ಷರತಾ ಆಂದೋಲನದಲ್ಲಿ ಶಿಕ್ಷಣದ ಮಹತ್ವವನ್ನು ಕಲೆಯ ಮೂಲಕ ಜನರಿಗೆ ತಿಳಿಸುವ ಕಾರ್ಯಕ್ಕೆ ಕೈ ಹಾಕಿದೆ. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಕಲೆಯ ಮೂಲಕವೇ ತಿಳಿಸುವ ಕೆಲಸ ಮಾಡುತ್ತಿರುವೆ’ ಎಂದು ತಿಳಿಸಿದರು.

ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳು, ಅರಿವು ಮೂಡಿಸುವ ವಿಷಯಗಳನ್ನು ಫಲಕ ಹಾಕಿದರೆ, ಕರಪತ್ರ ಹಂಚಿದರೆ ಜನರಿಗೆ ಅರಿವಾಗುವುದು ಕಷ್ಟ. ಆದರೆ, ಅದಕ್ಕೆ ಕಲೆಯನ್ನೇ ಮಾಧ್ಯಮವಾಗಿಸಿದರೆ ಖಂಡಿತವಾಗಿಯೂ ಆ ಯೋಜನೆಯ ಮಹತ್ವ ಮನದಟ್ಟಾಗುತ್ತದೆ. ಇಂತಹ ಮಹತ್ವದ ಕೆಲಸವನ್ನು ಈ.ರಾಜು ಮಾಡುತ್ತಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇವರ ಮೂಲಕ ಬೀದಿನಾಟಕಗಳು, ಹಾಡುಗಳ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡಿ, ವ್ಯಾಪಕ ಪ್ರಚಾರವನ್ನು ನೀಡುತ್ತಿದ್ದಾರೆ.

ಇವರು ಜಿಲ್ಲೆಯಲ್ಲಿರುವ ಎಲ್ಲ 103 ಗ್ರಾಮ ಪಂಚಾಯಿತಿಗಳು, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಮಡಿಕೇರಿ ನಗರಸಭೆ, ವಿರಾಜಪೇಟೆ ಪುರಸಭೆ ವ್ಯಾಪ್ತಿಗಳಲ್ಲಿ ಮಳೆಯಲ್ಲೂ ಸಂಚರಿಸಿ, ಕೊಡೆ ಹಿಡಿದು ಬೀದಿನಾಟಕವಾಡಿ ಯೋಜನೆಯ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಪದವಿ ಪಡೆದರೂ ಇವರು ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಒಂದು ವೇಳೆ ಬೇರೆ ವೃತ್ತಿಯಲ್ಲಿದ್ದರೆ ಕಲಾಸೇವೆ ಮಾಡುವುದಕ್ಕೆ ವಿಘ್ನ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವರು ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಜಿಲ್ಲಾಡಳಿತವು ಇವರ ಕಲಾಸೇವೆಯನ್ನು ಪರಿಗಣಿಸಿ 2007ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನಿಸಿತು. ನಂತರ, ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ ಹಾಗೂ ವಿವಿಧ ಮಠಗಳು ಇವರನ್ನು ಗೌರವಿಸಿವೆ.

ಇವರ ಪತ್ನಿ ಶಾರದಾ ಅಂಗನವಾಡಿ ಕಾರ್ಯಕರ್ತೆಯಾಗಿ ನಿರ್ವಹಿಸುತ್ತಿದ್ದಾರೆ.

ಕುಶಾಲನಗರದಲ್ಲಿ ಈಚೆಗೆ ಕಲಾವಿದ ಈ.ರಾಜು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು
ಕುಶಾಲನಗರದಲ್ಲಿ ಈಚೆಗೆ ಕಲಾವಿದ ಈ.ರಾಜು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು
ಕಲಾವಿದ ಈ.ರಾಜು
ಕಲಾವಿದ ಈ.ರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT