ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಕಾಡೊಳಗಿದ್ದ ಮೂರ್ತಿಗೆ ನೂತನ ಆಲಯ

ಚೇನಿವಾಡದ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ
Published 19 ಮಾರ್ಚ್ 2024, 5:32 IST
Last Updated 19 ಮಾರ್ಚ್ 2024, 5:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಾಫಿ ತೋಟದ ನಡುವಿನ ಕಾಡಿನಲ್ಲಿದ್ದ ಮೂರ್ತಿಗಳಿಗೆ 3.80 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನೂತನವಾಗಿ ನಿರ್ಮಿಸಿರುವ ಬೇಗೂರು ಚೇನಿವಾಡದ ವಿಷ್ಣುಮೂರ್ತಿ ದೇವಸ್ಥಾನದ ನೂತನ ಬಿಂಬಗಳ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ಮಾರ್ಚ್ 19ರಂದು ನಡೆಯಲಿದೆ.

ಭಕ್ತರು ಮತ್ತು ದಾನಿಗಳಿಂದ ಸಂಗ್ರಹಿಸಿದ ₹ 2 ಕೋಟಿ ವೆಚ್ಚದಲ್ಲಿ ಮಹಾವಿಷ್ಣು, ಗಣಪತಿ, ಸುಬ್ರಮಣ್ಯ ದೇವರ ಗುಡಿ ಹಾಗೂ ನಾಗಬನಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಕಟ್ಟಡ ಕಾರ್ಮಿಕರೊಂದಿಗೆ ಕೇರಳದ ವಿನ್ಯಾಸಕರು 2019ರಿಂದ ಈ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. 3 ವರ್ಷ ಕಾಲ ಕಾಡಿದ ಕೋವಿಡ್ 19ರ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಕೆಲಸ ಕುಂಟುತ್ತಾ ಸಾಗಿತ್ತು. 2 ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೆದು ಇದೀಗ ಮುಕ್ತಾಯದ ಹಂತ ತಲುಪಿದೆ.

ದೇವಾಲಯಗಳಿಗೆ ಕಾರ್ಕಳದಿಂದ ಕಲ್ಲಿನ ಕಂಬಗಳು, ಕೇರಳದಿಂದ ಮಣ್ಣಿನ ಇಟ್ಟಿಗೆಗಳನ್ನು ತರಿಸಲಾಗಿದೆ. ವಿಶಾಲವಾದ ದೇವಾಲಯದ ಪ್ರಾಂಗಣದಲ್ಲಿ ವಿವಿಧ ದೇವರ ಮೂರ್ತಿಗಳ ಗುಡಿಗಳಿವೆ. ಅವುಗಳ ಸುತ್ತಲೂ ಬಂಗಾರದ ಬಣ್ಣಗಳಿಂದ ಕೂಡಿದ ಸುಂದರ ಹಾಗೂ ವಿಶಾಲವಾದ ಕಟ್ಟಡಗಳ ಪ್ರಾಂಗಣವಿದೆ. ಪೂರ್ವ ದಿಕ್ಕಿನಲ್ಲಿರುವ ದೇವಾಲಯದ ಹೆಬ್ಬಾಗಿಲನ್ನು ಬೃಹತ್ ಸಂಪಿಗೆ ಮರದಿಂದ ಅಲಂಕೃತವಾಗಿ ಕೆತ್ತಲಾಗಿದೆ. ದೇವಾಲಯದ ಪ್ರಾಂಗಣದ ನೆಲ ಹಾಸಿಗೆಯಾಗಿ ಗ್ರಾನೈಟ್ ಹಾಕಲಾಗಿದೆ.

ದೇವಾಲಯಗಳ ಪಕ್ಕದಲ್ಲಿಯೇ 70 ಅಡಿ ಆಳದ ತೆರೆದ ಬಾವಿ ಇದೆ. ಇದಕ್ಕೆ ಸುಣ್ಣ ಬಣ್ಣ ಹಚ್ಚಿ ಅಲಂಕರಿಸಲಾಗಿದೆ. ಸೀಗೆಮುಳ್ಳು ಮೊದಲಾದ ಕಾಡುಬಳ್ಳಿ ಹಾಗೂ ವಿವಿಧ ಜಾತಿಯ ಮರಗಳಿಂದ ಕೂಡಿದ್ದು ದಟ್ಟ ಕಾಡಾಗಿದ್ದ ಜಾಗ ಈಗ ಬಯಲಾಗಿದೆ. ಕಾಂಕ್ರೀಟ್ ಕಟ್ಟಡದ ದೇವಾಲಯಗಳು ತಲೆ ಎತ್ತಿವೆ. ಸುತ್ತಲೂ ವಾಹನಗಳ ನಿಲುಗಡೆಗೆ ಮೈದಾನ ನಿರ್ಮಿಸಲಾಗಿದೆ.

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾವಿಷ್ಣು ದೇವಸ್ಥಾನದ ಮೂರ್ತಿಗಳು ಕಾಡು ಬೆಳೆದು ಮುಚ್ಚಿ ಹೋಗಿದ್ದವು. ಕಾಡೊಳಗೆ ಇದ್ದ ತೆರೆದ ಬಾವಿಯಲ್ಲಿ ಕೆಲವು ಮೂರ್ತಿಗಳು ಭಗ್ನಗೊಂಡು ಬಿದ್ದಿದ್ದವು. ಅವುಗಳನ್ನು ಮೇಲೆ ತೆಗೆದು ಶುದ್ಧಿಗೊಳಿಸಿ ಪ್ರತಿಷ್ಠಾಪಿಸಲಾಗುತ್ತಿದೆ. ಭಗ್ನಗೊಂಡ ಮೂರ್ತಿಗಳ ಬದಲಾಗಿ ನೂತನ ಮೂರ್ತಿಗಳನ್ನು ಹೊಸದಾಗಿ ರೂಪಿಸಲಾಗಿದೆ’ ಎಂದು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಹೇಳಿದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾಗಿ ಮತ್ರಂಡ ರಾಜೇಂದ್ರ, ಚೋಡುಮಾಡ ರವಿ, ಮಲ್ಲಂಡ ಸುಬ್ರಮಣಿ, ಮಲ್ಲಂಡ ಮಧು ದೇವಯ್ಯನ ಹಾಗೂ 23 ಮಂದಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ದೇವಸ್ಥಾನದ ಹೆಬ್ಬಾಗಿಲು
ದೇವಸ್ಥಾನದ ಹೆಬ್ಬಾಗಿಲು
ದೇವಸ್ಥಾನದ ಒಳಗಿರುವ ಗಣಪತಿ ಗರ್ಭಗುಡಿ
ದೇವಸ್ಥಾನದ ಒಳಗಿರುವ ಗಣಪತಿ ಗರ್ಭಗುಡಿ

ವಿವಿಧ ಪೂಜಾ ಕಾರ್ಯ ಇಂದಿನಿಂದ

ಮಾರ್ಚ್ 19ರಂದು ಸಂಜೆ 4 ಗಂಟೆಗೆ ಬೃಹತ್ ಹೊರೆ ಕಾಣಿಕೆಗೆ ಚಾಲನೆ ದೊರಕಲಿದೆ. 6.30ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. 20ರಂದು ಸಂಜೆ 6 ಗಂಟೆಗೆ ಗಣಪತಿ ಮಹಾಪೂಜೆ 5 ಗಂಟೆಗೆ ವಾಸ್ತು ಹವನ ಬಲಿ ಪೂಜೆ ಜರುಗಲಿದೆ. 21ರಂದು ಸಂಜೆ ಗಂಟೆಗೆ ಗಣಪತಿ ಸುಬ್ರಮಣ್ಯ ಮಹಾವಿಷ್ಣು ಬಿಂಬ ಚಾಲನೆ 22ರಂದು ಸಂಜೆ 6ಕ್ಕೆ ಜೀವಕಲಶ ಸ್ಥಾಪನೆ ನಡೆಯಲಿದೆ. 23ರಂದು ಸಂಜೆ 6 ಗಂಟೆಗೆ ನಾಗಸನ್ನಿಧಿಯಲ್ಲಿ ಸಪ್ತಶುದ್ಧಿ 24ರಂದು ಸಂಜೆ 6 ಗಂಟೆಗೆ ಗೋಪೂಜೆ ವಿಷ್ಣುಯಾಗ 25ರಂದು ಮಧ್ಯಾಹ್ನ ಸಭಾ ಕಾರ್ಯಕ್ರಮ ಸಂಜೆ 6 ಗಂಟೆಗೆ ದೀಪಾರಾಧನೆ ರಂಗಪೂಜೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT