ಸೋಮವಾರಪೇಟೆ: ‘ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಅದ್ದೂರಿಯಾಗಿ ಆಯುಧ ಪೂಜೆ ಅ.11ರಂದು ನಡೆಸಲಾಗುವುದು’ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ತಿಳಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 7 ಗಂಟೆಗೆ ಸಂಘದ ಕಚೇರಿಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, 8-30ಕ್ಕೆ ಆಸ್ಪತ್ರೆಯ ಹಣ್ಣು ಹಂಪಲು ವಿತರಣೆ ಮಾಡಲಾಗುವುದು. 9 ಗಂಟೆಗೆ ಕಾರ್ಯಕ್ರಮವನ್ನು ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಸಂಸದ ಯುದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಮುಖಂಡ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಪ್ರಮುಖರಾದ ಕೆ.ಪಿ. ಚಂದ್ರಕಲಾ, ಎಸ್.ಜಿ. ಮೇದಪ್ಪ, ಆಯಾತಾನ್ ರೆಸಾರ್ಟ್ ಟೋನಿ ವಿನ್ಸೆಂಟ್, ಬಿ.ಜೆ. ದೀಪಕ್,ಕೆ.ಎಂ. ಲೋಕೇಶ್, ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಉಪಸ್ಥಿತರಿರುವರು. 10-30ಕ್ಕೆ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆಯುವುದು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ, ಸಂಜೆ 4-30ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಶಾಸಕ ಡಾ.ಮಂತರ್ ಗೌಡ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಮೈಸೂರಿನ ಗೋಪಾಲಗೌಡ ಆಸ್ಪತ್ರೆ ಡಾ.ಶುಶ್ರುತ್ ಗೌಡ, ಉದ್ಯಮಿಗಳಾದ ಜಯರಾಮ್, ಸತೀಶ್, ಮಿಥುನ್ ಹಾನಗಲ್ಲು ಪಾಲ್ಗೊಳ್ಳಲಿದ್ದಾರೆ. ನಂತರ 8 ಗಂಟೆಗೆ ಬೆಂಗಳೂರಿನ ರಿಶು ಪುರುಷೋತ್ತಮ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯುವುದು.
ಕಾರ್ಯಕ್ರಮದ ಪ್ರಯುಕ್ತ ಸಂಘದ ಹಿರಿಯ ಸದಸ್ಯರಾದ ವಿದ್ಯಾ ನರ್ಸಿಂಗ್ ಇನ್ ಸ್ಟಿಟ್ಯೂಟ್ ಕೆ.ಇ.ಸುಲೈಮಾನ್, ಸ್ವಾಮಿ ಟ್ರಾವೆಲ್ಸ್ ರಾಮಚಂದ್ರ, ಸೆಸ್ಕ್ ಲೈನ್ ಮೆನ್ ಸದಾಶಿವು ಜಾದವ್, ರಾಷ್ಟ್ರೀಯ ಜೂನಿಯರ್ ಹಾಕಿ ತಂಡದ ತರಬೇತುದಾರ ಜನಾರ್ಧನ್ ಅವರನ್ನು ಸನ್ಮಾನಿಸಲಾಗುವುದು.
ಆಯುಧಾ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಂಘದ ಸದಸ್ಯರಿಗೆ ಸೆ.29ರಂದು ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9844461134, 9740508181 ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎನ್. ರಂಗಸ್ವಾಮಿ, ಕಾರ್ಯದರ್ಶಿ ಮಣಿ ಕುಶಾಲಪ್ಪ, ಸಹ ಕಾರ್ಯದರ್ಶಿ ಎಂ.ಎಂ. ಕಿರಣ್, ಖಜಾಂಚಿ ಡೋಮಿನಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.